ಭಾನುವಾರ, ಸೆಪ್ಟೆಂಬರ್ 19, 2021
25 °C

ಯಶವಂತಪುರ: ತ್ರಿಕೋನ ಸ್ಪರ್ಧೆಗೆ ಅಖಾಡ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಟಿ.ಸೋಮಶೇಖರ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ.ನಾಗರಾಜು ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡ ನಾಮಪತ್ರ ಸಲ್ಲಿಸಿದರು.

ಹೇರೋಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಟುಂಬದೊಂದಿಗೆ ಪೂಜೆ ಸಲ್ಲಿಸಿ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದ ಎಸ್.ಟಿ.ಸೋಮಶೇಖರ್ ಮಧ್ಯಾಹ್ನ 12.15ಕ್ಕೆ ಹೇರೋಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಜತೆಗಿದ್ದರು.

‘ಸಮ್ಮಿಶ್ರ ಸರ್ಕಾರದ ಪಂಚತಾರಾ ಆಡಳಿತ ಸಂಸ್ಕೃತಿಯನ್ನು ಕೊನೆಗಾಣಿಸಲು ಹಾಗೂ ಜನಸಾಮಾನ್ಯರ ನಿರೀಕ್ಷೆಯಂತೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶದಿಂದ ಯಡಿಯೂರಪ್ಪನವರಿಗೆ ಬೆಂಬಲಿಸಬೇಕಾಗಿ ಬಂತು’ ಎಂದು ಸೋಮಶೇಖರ್‌ ಹೇಳಿದರು.

‘ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ₹721 ಕೋಟಿ ಅನುದಾನ ಬಿಡುಗಡೆ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಜನರ ಆಶೀರ್ವಾದದೊಂದಿಗೆ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಲಿದ್ದೇನೆ’ ಎಂದರು.

ಹೇರೋಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕುಟುಂಬದೊಂದಿಗೆ ಪೂಜೆ ಸಲ್ಲಿಸಿ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್ ಸಮಯದ ಅಭಾವ
ದಿಂದ ಮೆರವಣಿಗೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮಧ್ಯಾಹ್ನ 2.35ಕ್ಕೆ ನಾಮಪತ್ರ ಸಲ್ಲಿಸಿದರು. ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ‘ಜಾತ್ಯತೀತ ನಿಲುವನ್ನು ಪಾಲಿಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷವನ್ನು ಎಲ್ಲಾ ಸಮುದಾಯದವರು ಬೆಂಬಲಿಸಲಿದ್ದು, ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತ’ ಎಂದರು.

ಪಿ.ನಾಗರಾಜ್ ಮಾತನಾಡಿ, ‘ಅಭಿವೃದ್ಧಿ ಕೇವಲ ಕಾಗದದಲ್ಲಿ ಉಳಿದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿಗಳನ್ನೇ ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ. ಇದು ಸರಿಯೇ’ ಎಂದು ಪ್ರಶ್ನಿಸಿದರು.

ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಅಭಿವೃದ್ಧಿಗಾಗಿ ರಾಜೀನಾಮೆ ಎಂಬುದು ಸುಳ್ಳು. ನನ್ನನ್ನು ಅಧಿಕಾರದಿಂದ ಕೆಳಗಿಸುವ ಉದ್ದೇಶದಿಂದ ಕುತಂತ್ರ ಮಾಡಿ ಹಲವರು ರಾಜೀನಾಮೆ ನೀಡಿದರು’ ಎಂದು ಕಿಡಿಕಾರಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.