ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಹೋರಾಟ | ವ್ಯಾಪಾರ–ವಹಿವಾಟು ಸ್ತಬ್ಧ: ₹ 400 ಕೋಟಿ ನಷ್ಟ

ಶೇ 80ರಷ್ಟು ಅಂಗಡಿ, ಮಳಿಗೆ, ಕೈಗಾರಿಕೆಗಳು ಬಂದ್
Published 29 ಸೆಪ್ಟೆಂಬರ್ 2023, 16:03 IST
Last Updated 29 ಸೆಪ್ಟೆಂಬರ್ 2023, 16:03 IST
ಅಕ್ಷರ ಗಾತ್ರ

ಬೆಂಗಳೂರು: ‘ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬಾರದು’ ಎಂದು ಒತ್ತಾಯಿಸಿ ರಾಜ್ಯದಾದ್ಯಂತ ಶುಕ್ರವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುತೇಕ ವ್ಯಾಪಾರಿಗಳು ಹಾಗೂ ಉದ್ಯಮಿಗಳು, ತಮ್ಮ ವ್ಯಾಪಾರ– ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ಸೂಚಿಸಿದರು.

ಆಟೊಗಳು, ಓಲಾ– ಉಬರ್ ಸೇರಿದಂತೆ ಇತರೆ ಮೊಬೈಲ್ ಆ್ಯಪ್ ಆಧರಿತ ಕ್ಯಾಬ್‌ಗಳು, ಮ್ಯಾಕ್ಸಿ ಕ್ಯಾಬ್‌ಗಳು, ಶಾಲೆ– ಕಾಲೇಜು ವಿದ್ಯಾರ್ಥಿಗಳ ವಾಹನಗಳು, ಸರಕು ಸಾಗಣೆ ವಾಹನಗಳು ರಸ್ತೆಗಿಳಿಯಲಿಲ್ಲ.

ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ಒಳ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಬುಧವಾರ ಹಾಗೂ ಗುರುವಾರ ವಿಪರೀತ ದಟ್ಟಣೆ ಉಂಟಾಗಿದ್ದ ರಸ್ತೆಗಳು, ಶುಕ್ರವಾರ ಖಾಲಿ ಖಾಲಿ ಆಗಿದ್ದವು. ಬಂದ್ ಹಿನ್ನೆಲೆಯಲ್ಲಿ ಜನರೂ  ರಸ್ತೆಗೆ ಬರಲಿಲ್ಲ. ಶಾಲಾ–ಕಾಲೇಜುಗಳಿಗೆ ರಜೆ ನೀಡಿದ್ದರಿಂದ, ವಿದ್ಯಾರ್ಥಿಗಳು ಮನೆಯೊಳಗೆ ಹಾಗೂ ಮನೆಯ ಅಂಗಳದಲ್ಲಿ ದಿನಕಳೆದರು. ರಸ್ತೆಯಲ್ಲಂತೂ ಜನರ ಓಡಾಟವೇ ವಿರಳವಾಗಿತ್ತು.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ರೈಲು–ಬಸ್ಸಿನಲ್ಲಿ ನಗರಕ್ಕೆ ಬಂದಿದ್ದ ಜನ, ನಿಗದಿತ ಸ್ಥಳಕ್ಕೆ ಹೋಗಲು ಆಟೊ–ಕ್ಯಾಬ್ ಸಿಗದೇ ಪರದಾಡಿದರು. ಮೆಜೆಸ್ಟಿಕ್, ಗಾಂಧಿನಗರ, ಯಶವಂತಪುರ, ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳ ರಸ್ತೆಬದಿಯಲ್ಲಿ ಜನರು ಲಗೇಜು ಸಮೇತ ಕುಳಿತಿದ್ದ ದೃಶ್ಯಗಳು ಕಂಡುಬಂದವು. ರಾಜಾಜಿನಗರದ ನವರಂಗ ವೃತ್ತ, ಯಶವಂತಪುರ, ಮೆಜೆಸ್ಟಿಕ್‌ಗಳಲ್ಲಿ ನಸುಕಿನಲ್ಲಿ ಆಟೊಗಳ ಸಂಚಾರವಿತ್ತು. 6 ಗಂಟೆಯ ನಂತರ ಆಟೊ ಸಂಚಾರ ಬಂದ್ ಆಯಿತು.

ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್‌ಗೆ 200ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದವು. ಬೆಳಿಗ್ಗೆಯಿಂದಲೇ ಸಂಘಟನೆಗಳ ಕಾರ್ಯಕರ್ತರು, ಅಂಗಡಿ–ಮಳಿಗೆಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಬಹುತೇಕ ವ್ಯಾಪಾರಿಗಳು, ಸ್ವಯಂಪ್ರೇರಿತವಾಗಿ ಅಂಗಡಿ–ಮಳಿಗೆಗಳನ್ನು ಬಂದ್ ಮಾಡಿದ್ದರು. ಕೆಲವರು, ಅಂಗಡಿ ಎದುರು ಕನ್ನಡ ಬಾವುಟ ಕಟ್ಟಿದ್ದರು.

ಕೈಗಾರಿಕೆಗಳು, ಹೋಟೆಲ್‌ಗಳು, ಆಟೊಮೊಬೈಲ್ಸ್ ಮಳಿಗೆಗಳು, ದಿನಸಿ ಅಂಗಡಿಗಳು, ಶಾಪಿಂಗ್ ಮಾಲ್‌ಗಳು, ಗ್ಯಾರೇಜ್‌ಗಳು, ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳು, ಬೇಕರಿಗಳು, ಮೀನು ಮತ್ತು ಮಾಂಸ ಮಾರಾಟ ಮಳಿಗೆ, ತರಕಾರಿ ಅಂಗಡಿಗಳು, ಮೊಬೈಲ್ ಅಂಗಡಿಗಳು, ಗೃಹೋಪಯೋಗಿ–ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮಳಿಗೆಗಳು, ಪೀಠೋಪಕರಣ ಮಳಿಗೆ, ಸ್ಟೇಷನರಿ ಅಂಗಡಿಗಳು ಬಂದ್ ಆಗಿದ್ದವು.

ಎಪಿಎಂಸಿ ವರ್ತಕರು ಹಾಗೂ ಕಾರ್ಮಿಕರು ಬಂದ್‌ಗೆ ಬೆಂಬಲ ನೀಡಿದ್ದರು. ಆರ್‌ಎಂಸಿ ಯಾರ್ಡ್‌ನಲ್ಲಿ ವ್ಯಾಪಾರ ಸ್ಥಗಿತಗೊಂಡಿತ್ತು. ಆದರೆ, ಯಶವಂತಪುರ ಮಾರುಕಟ್ಟೆಯಲ್ಲಿ ಬೆಳಿಗ್ಗೆ ತರಕಾರಿ ಮಾರಾಟ ಯಥಾಪ್ರಕಾರವಿತ್ತು. ಬೆಳಿಗ್ಗೆ 9 ಗಂಟೆ ನಂತರ ಅಂಗಡಿಗಳು ಬಂದ್ ಆದವು.

ಆಟೊ ಹಾಗೂ ಕ್ಯಾಬ್‌ ಚಾಲಕರು, ನಾಯಂಡನಹಳ್ಳಿಯಿಂದ ಪುರಭವನದವರೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅದನ್ನು ಪೊಲೀಸರು ತಡೆದಿದ್ದರು. ಇದರಿಂದಾಗಿ ಮಾತಿನ ಚಕಮಕಿ ನಡೆಯಿತು. ನಂತರ, ಆಟೊ ಹಾಗೂ ಕ್ಯಾಬ್‌ನಲ್ಲಿ ಪುರಭವನಕ್ಕೆ ಹೋಗಲು ಪೊಲೀಸರು ಅನುಮತಿ ನೀಡಿದರು.

ಚಿತ್ರಮಂದಿರಗಳ ಮಾಲೀಕರೂ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಇದರಿಂದಾಗಿ, ನಗರದ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿತ್ತು.

ಮೆಟ್ರೊ, ಬಸ್‌ ಹಾಗೂ ರೈಲುಗಳ ಸಂಚಾರ ಎಂದಿನಂತಿತ್ತು. ಮೆಜೆಸ್ಟಿಕ್‌ನಲ್ಲಿರುವ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ಮೆಟ್ರೊ ನಿಲ್ದಾಣಗಳಲ್ಲೂ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿದ್ದರು. 

ಬೆಳಿಗ್ಗೆಯಿಂದಲೇ ನಿಗದಿತ ಸ್ಥಳಗಳಿಗೆ ಬಸ್‌ಗಳ ಸಂಚಾರ ಆರಂಭವಾಗಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಿದ್ದರಿಂದ, ಸಮಯ ಕಳೆದಂತೆ ಬಸ್‌ಗಳ ಸಂಖ್ಯೆಗಳಲ್ಲೂ ಇಳಿಕೆ ಕಂಡುಬಂತು. ಸಂಜೆಯ ನಂತರ, ಜನರ ಓಡಾಟ ಪುನಃ ಆರಂಭವಾಯಿತು. ಇದರಿಂದಾಗಿ ಬಸ್‌ಗಳ ಓಡಾಟವೂ ಹೆಚ್ಚಾಯಿತು.

ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಕೆಲ ಸಂಘಟನೆಗಳ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದರು. ಮೆಜೆಸ್ಟಿಕ್, ಯಶವಂತಪುರ, ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರು, ಶಸ್ತ್ರ ಸಜ್ಜಿತವಾಗಿ ಕಾವಲು ಕಾಯುತ್ತಿದ್ದರು. ಪ್ರತಿಭಟನಾಕಾರರು ನಿಲ್ದಾಣಗಳತ್ತ ಸುಳಿಯಲಿಲ್ಲ.

ಮೆಟ್ರೊ ರೈಲಿನ ಪ್ರತಿ ನಿಲ್ದಾಣದಲ್ಲಿಯೂ ಆಯಾ ಠಾಣೆಯ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿತ್ತು. ಪ್ರಯಾಣಿಕರನ್ನು ಹೊರತುಪಡಿಸಿ, ಸಂಘಟನೆಗಳ ಕಾರ್ಯಕರ್ತರು ಒಳಗೆ ಹೋಗದಂತೆ ಸಿಬ್ಬಂದಿ ನೋಡಿಕೊಂಡರು.

ಕೇರಳ ಸಾರಿಗೆ ಬಸ್‌ಗಳ ಸಂಚಾರವೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಂಡಿತ್ತು. ಮುಂಗಡವಾಗಿ ಕಾಯ್ದಿರಿಸಿದ್ದ ಟಿಕೆಟ್‌ಗಳನ್ನು ರದ್ದುಪಡಿಸಲಾಗಿತ್ತು. ಕೇರಳದ ಎಲ್ಲ ಬಸ್‌ಗಳನ್ನು ಸ್ಯಾಟ್‌ಲೈಟ್ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.

ಯಶವಂಪುರ ರೈಲು ನಿಲ್ದಾಣದಲ್ಲಿ ಪೊಲೀಸರು ಶುಕ್ರವಾರ ಗಸ್ತು ತಿರುಗಿದರು
ಯಶವಂಪುರ ರೈಲು ನಿಲ್ದಾಣದಲ್ಲಿ ಪೊಲೀಸರು ಶುಕ್ರವಾರ ಗಸ್ತು ತಿರುಗಿದರು
ಬಂದ್ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಮುಂಚೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮ ವಿಮಾನಕ್ಕಾಗಿ ಕಾದು ಕುಳಿತಿದ್ದರು – ಪ್ರಜಾವಾಣಿ ಚಿತ್ರ
ಬಂದ್ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಮುಂಚೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮ ವಿಮಾನಕ್ಕಾಗಿ ಕಾದು ಕುಳಿತಿದ್ದರು – ಪ್ರಜಾವಾಣಿ ಚಿತ್ರ
ವಾಹನಗಳಿಲ್ಲದೇ ಬಿಕೊ ಎನ್ನುತ್ತಿದ್ದ ರಸ್ತೆಯಲ್ಲಿ ಬೌದ್ಧ ಬಿಕ್ಕುವೊಬ್ಬರು ಲಗೇಜು ಹಿಡಿದುಕೊಂಡು ಹೆಜ್ಜೆ ಹಾಕಿದರು – ಪ್ರಜಾವಾಣಿ ಚಿತ್ರ
ವಾಹನಗಳಿಲ್ಲದೇ ಬಿಕೊ ಎನ್ನುತ್ತಿದ್ದ ರಸ್ತೆಯಲ್ಲಿ ಬೌದ್ಧ ಬಿಕ್ಕುವೊಬ್ಬರು ಲಗೇಜು ಹಿಡಿದುಕೊಂಡು ಹೆಜ್ಜೆ ಹಾಕಿದರು – ಪ್ರಜಾವಾಣಿ ಚಿತ್ರ
ಬಂದ್‌ ಹಿನ್ನೆಲೆಯಲ್ಲಿ ಆಟೊ–ಕ್ಯಾಬ್ ಸಿಗದಿದ್ದರಿಂದ ವಿಧಾನಸೌಧ ಬಳಿ ಪ್ರಯಾಣಿಕರು ಲಗೇಜು ಸಮೇತ ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರ
ಬಂದ್‌ ಹಿನ್ನೆಲೆಯಲ್ಲಿ ಆಟೊ–ಕ್ಯಾಬ್ ಸಿಗದಿದ್ದರಿಂದ ವಿಧಾನಸೌಧ ಬಳಿ ಪ್ರಯಾಣಿಕರು ಲಗೇಜು ಸಮೇತ ನಡೆದುಕೊಂಡು ಹೋದರು – ಪ್ರಜಾವಾಣಿ ಚಿತ್ರ
ಬಂದ್‌ನಿಂದಾಗಿ ವಾಹನಗಳಿಲ್ಲದೇ ಬಿಕೊ ಎನ್ನುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ಬಂದ್‌ನಿಂದಾಗಿ ವಾಹನಗಳಿಲ್ಲದೇ ಬಿಕೊ ಎನ್ನುತ್ತಿದ್ದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ತಮಿಳುನಾಡು ಗಡಿ ಪ್ರದೇಶವಾದ ಅತ್ತಿಬೆಲೆ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ತಮಿಳುನಾಡು ಗಡಿ ಪ್ರದೇಶವಾದ ಅತ್ತಿಬೆಲೆ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ತಮಿಳುನಾಡಿನಿಂದ ಬಂದಿದ್ದ ವಾಹನಗಳನ್ನು ಅತ್ತಿಬೆಲೆ ಬಳಿಯೇ ತಡೆದು ನಿಲ್ಲಿಸಿದ್ದರಿಂದ ಪ್ರಯಾಣಿಕರು ನಡೆದುಕೊಂಡು ಕರ್ನಾಟಕದ ಗಡಿ ಪ್ರವೇಶಿಸಿದರು – ಪ್ರಜಾವಾಣಿ ಚಿತ್ರ
ತಮಿಳುನಾಡಿನಿಂದ ಬಂದಿದ್ದ ವಾಹನಗಳನ್ನು ಅತ್ತಿಬೆಲೆ ಬಳಿಯೇ ತಡೆದು ನಿಲ್ಲಿಸಿದ್ದರಿಂದ ಪ್ರಯಾಣಿಕರು ನಡೆದುಕೊಂಡು ಕರ್ನಾಟಕದ ಗಡಿ ಪ್ರವೇಶಿಸಿದರು – ಪ್ರಜಾವಾಣಿ ಚಿತ್ರ
ವಾಹನಗಳ ಸಂಚಾರವಿಲ್ಲದೇ ಬಿಕೊ ಎನ್ನುತ್ತಿದ್ದ ಗೊರಗುಂಟೆಪಾಳ್ಯ ರಸ್ತೆಯಲ್ಲಿ ಯುವಕರೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತ ಮುಂದೆ ಸಾಗಿದರು – ಪ್ರಜಾವಾಣಿ ಚಿತ್ರ 
ವಾಹನಗಳ ಸಂಚಾರವಿಲ್ಲದೇ ಬಿಕೊ ಎನ್ನುತ್ತಿದ್ದ ಗೊರಗುಂಟೆಪಾಳ್ಯ ರಸ್ತೆಯಲ್ಲಿ ಯುವಕರೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತ ಮುಂದೆ ಸಾಗಿದರು – ಪ್ರಜಾವಾಣಿ ಚಿತ್ರ 
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವಕರೊಬ್ಬರು ನೀರಿನ ಬಾಟಲಿಗಳನ್ನು ಕಟ್ಟಿದ್ದ ಸೈಕಲ್ ಸವಾರಿ ಮಾಡಿ ಗಮನ ಸೆಳೆದರು – ಪ್ರಜಾವಾಣಿ ಚಿತ್ರ
ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುವಕರೊಬ್ಬರು ನೀರಿನ ಬಾಟಲಿಗಳನ್ನು ಕಟ್ಟಿದ್ದ ಸೈಕಲ್ ಸವಾರಿ ಮಾಡಿ ಗಮನ ಸೆಳೆದರು – ಪ್ರಜಾವಾಣಿ ಚಿತ್ರ

ಜಯನಗರದಲ್ಲಿ ಹೆಚ್ಚಿನ ಭದ್ರತೆ

ಸೆ. 26ರಂದು ನಡೆದಿದ್ದ ಬಂದ್ ವೇಳೆ ಜಯನಗರದಲ್ಲಿ ಹೋಟೆಲ್‌ಗಳಿಗೆ ನುಗ್ಗಿ ಗಲಾಟೆ ಮಾಡಲಾಗಿತ್ತು. ಬೈಕ್ ರ‍್ಯಾಲಿ ನಡೆಸಲು ಮುಂದಾಗಿದ್ದ ಸ್ಥಳೀಯ ಶಾಸಕ ಸಿ.ಕೆ. ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶುಕ್ರವಾರ ಬಂದ್ ವೇಳೆ ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆ ಅರಿತಿದ್ದ ಪೊಲಿಸರುಭದ್ರತೆಯನ್ನು ಬಿಗಿಗೊಳಿಸಿದ್ದರು. ಕೆಲ ಸಂಘಟನೆಗಳ ಕಾರ್ಯಕರ್ತರು ರಾಜಾಜಿನಗರದಲ್ಲೂ ಮೆರವಣಿಗೆ ನಡೆಸಿದರು. ಅದನ್ನು ತಡೆದ ಪೊಲೀಸರು ಮೆರವಣಿಗೆಗೆ ಅವಕಾಶವಿಲ್ಲವೆಂದು ಹೇಳಿದರು. ಇದರಿಂದಾಗಿ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಬಳಿಕ ಪ್ರತಿಭಟನಾಕಾರರಿಗೆ ತೆರೆದ ವಾಹನದಲ್ಲಿ ನೇರವಾಗಿ ಸ್ವಾತಂತ್ರ್ಯ ಉದ್ಯಾನಕ್ಕೆ ಹೋಗಲು ಪೊಲೀಸರು ಅನುಮತಿ ನೀಡಿದರು. ಸ್ಟಾಲಿನ್ ಪ್ರತಿಕೃತಿ ದಹನಕ್ಕೆ ಯತ್ನ: ಮಲ್ಲೇಶ್ವರದ ಕುವೆಂಪು ವೃತ್ತದಲ್ಲಿ ಸೇರಿದ್ದ ಪ್ರತಿಭಟನಕಾರರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕೃತಿ ದಹಿಸಲು ಯತ್ನಿಸಿದರು. ಅದನ್ನು ತಡೆದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.

₹ 400 ಕೋಟಿ ನಷ್ಟ 

‘ಬಂದ್‌ನಿಂದಾಗಿ ಶೇ 80ರಷ್ಟು ವ್ಯಾಪಾರ–ವಹಿವಾಟು ಸ್ಥಗಿತವಾಗಿತ್ತು. ₹ 400 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ತಿಳಿಸಿದರು. ‘ಈ ವಾರದಲ್ಲಿ ನಡೆದ ಎರಡನೇ ಬಂದ್ ಇದು. ನಾಡು ನುಡಿ ನೆಲ ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ನಾವೆಲ್ಲರೂ ನೀರನ್ನು ಸಂರಕ್ಷಿಸಬೇಕು. ಮುಂದಿನ ದಿನಗಳಲ್ಲಿ ಎರಡು ರಾಜ್ಯದವರು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT