ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2021 | ಉಪನಗರ ರೈಲು, ಮೂಡಿದ ಭರವಸೆ

ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ * ವಿಶೇಷ ಮೂಲಸೌಕರ್ಯ ಅಭಿವೃದ್ಧಿ-ಗೆ ಹೆಚ್ಚಿಸಿಲ್ಲ ಅನುದಾನ
Last Updated 8 ಮಾರ್ಚ್ 2021, 19:35 IST
ಅಕ್ಷರ ಗಾತ್ರ

ಬೆಂಗಳೂರು: ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯದ ಪಾಲು ಭರಿಸಲು ₹ 850 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಘೋಷಿಸಿರುವುದು ಕೊನೆಗೂ ‘ಈ ಯೋಜನೆ ಹಳಿಗೆ ಬರುತ್ತದೆ’ ಎಂಬ ಆಶಾವಾದ ಮೂಡಿಸಿದೆ. ಆರೋಗ್ಯ ಮೂಲಸೌಕರ್ಯಕ್ಕೂ ಕೆಲವು ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

₹ 15,767 ಕೋಟಿ ವೆಚ್ಚ ಉಪನಗರ ಯೋಜನೆಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟಸಮಿತಿ (ಸಿಸಿಇಎ) ಅನುಮೋದನೆ ನೀಡಿತ್ತು. ಆರು ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶ ಈಡೇರಬೇಕಾದರೆ ಈ ಯೋಜನೆಯ ಭೂಸ್ವಾಧಿನ ಕಾರ್ಯ ಚುರುಕುಗೊಳಿಸಬೇಕಿದೆ. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ರಾಜ್ಯ ಸರ್ಕಾರ ಒದಗಿಸುವ ಅನುದಾನ ನೆರವಾಗಲಿದೆ.

‘ಆರೋಗ್ಯಕರ’ವಾಗಿಲ್ಲ ಅನುದಾನ: ರಾಜ್ಯದಲ್ಲಿ ಕೋವಿಡ್‌ನ ಭೀಕರ ಹೊಡೆತ ಅನುಭವಿಸಿದ್ದು ಬೆಂಗಳೂರು ನಗರ. ಕೋವಿಡ್‌ ಎರಡನೇ ಅಲೆ ಹರಡದಂತೆ ಮುಂಜಾಗ್ರತೆ ವಹಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಮುಖ್ಯಮಂತ್ರಿ ಉಲ್ಲೇಖಿಸಿದ್ದಾರೆ. ಆದರೆ, ಇದಕ್ಕೆ ಪೂಕರವಾಗಿ ಅನುದಾನ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆ ಪಡೆದ ನಗರದಲ್ಲೂ ಕೋವಿಡ್‌ ಹೇಗೆ ಕ್ಷಿಪ್ರವಾಗಿ ವ್ಯಾಪ್ತಿಸಿತು, ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಜನ ಹೇಗೆ ಪರದಾಡಿದರು ಎಂಬುದು ತಿಳಿಯದ ವಿಷಯವೇನಲ್ಲ. ಹಾಗಾಗಿ ಇಲ್ಲಿನ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲದ 57 ವಾರ್ಡ್‌ಗಳಲ್ಲಿ ನವದೆಹಲಿಯ ‘ಮೊಹಲ್ಲಾ ಕ್ಲಿನಿಕ್‌’ ಮಾದರಿಯಲ್ಲಿ ಜನಾರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತದೆ. ಈ ಕೇಂದ್ರಗಳಲ್ಲಿ ಆರೊಗ್ಯ ತಪಾಸಣಾ ಸೌಲಭ್ಯ ಹಾಗೂ ಹೊರರೋಗಿಗಳ ಸೇವೆ ಒದಗಿಸಲಾಗುತ್ತದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ಈ ಯೋಜನೆಗೆ ಕಾಯ್ದಿರಿಸಿದ್ದು ಕೇವಲ ₹ 10 ಕೋಟಿ. ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ಬೆಂಗಳೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವಿಭಾಗ ತೆರೆಯಲು ₹ 5 ಕೋಟಿ ಒದಗಿಸಲಾಗಿದೆ. ಜಯದೇವ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಲು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ ಸ್ಥಾಪನೆಗೆ ಅನುದಾನ ಒದಗಿಸಲಾಗಿದೆ. ನಗರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ವಲಸೆ ಕಾರ್ಮಿಕರ ಹಾಗೂ ಬಡಜನರಿಗಾಗಿ ತಜ್ಞ ವೈದ್ಯಕೀಯ ಸೇವೆ ಒದಗಿಸಲಿ ಉತ್ತರ ಬೆಂಗಳೂರಿನಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಪ್ರಸ್ತಾವ ಬಜೆಟ್‌ನಲ್ಲಿದೆ. ಆದರೆ, ಇದಕ್ಕೆ ಎಷ್ಟು ಅನುದಾನ ನೀಡಲಾಗುತ್ತದೆ ಎಂಬ ವಿವರಗಳಿಲ್ಲ.

ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೊ ಎಂಟ್ರಾಲಜಿ ವಿಜ್ಞಾನ ಹಾಗೂ ಅಂಗಾಂಗ ಕಸಿ ಸಂಸ್ಥೆಯಲ್ಲಿ ಬಡವರಿಗೆ ಕೈಗೆಟಕುವ ದರದಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಒದಗಿಸಲಾಗುತ್ತದೆ. ಈ ಆಸ್ಪತ್ರೆಯಲ್ಲಿ 120 ಹಾಸಿಗೆಗಳನ್ನು ಒದಗಿಸಿ ಅವಶ್ಯಕ ಉಪಕರಣಗಳನ್ನು ಪೂರೈಸಲು ₹ 28 ಕೋಟಿ ಒದಗಿಸಲಾಗಿದೆ.

ಶಾಲೆಗಳ ಸುಧಾರಣೆ: ಬೆಂಗಳೂರು ನಗರದ ಶಾಲೆಗಳನ್ನು ನವದೆಹಲಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಸರ್ಕಾರ ಆಸಕ್ತಿ ತೋರಿದೆ. ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬಿಬಿಎಂಪಿ ಶಾಲೆಗಳ ನವೀಕರಣ ಮತ್ತು ಪುನರ್ನಿರ್ಮಾಣಕ್ಕಾಗಿ ₹ 33 ಕೋಟಿ ಅನುದಾನವನ್ನು ಒದಗಿಸಿದೆ. ಬಿಬಿಎಂಪಿ ಅಧೀನದಲ್ಲಿ 150ಕ್ಕೂ ಅಧಿಕ ಶಾಲಾ ಕಾಲೇಜುಗಳಿವೆ. ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿರುವ ಈ ಶಿಕ್ಷಣ ಸಂಸ್ಥೆಗಳಿಗೆ ಚೈತನ್ಯ ತುಂಬಲು ಇದರಿಂದ ಸ್ವಲ್ಪಮಟ್ಟಿನ ನೆರವು ಸಿಗಲಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ– 2020’ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ ನೀಡಿರುವ ವಿಷಯಕ್ಕೆ ಮುಖ್ಯಮಂತ್ರಿ ಬೆನ್ನುತಟ್ಟಿಕೊಂಡಿದ್ದಾರೆ. ಈ ಮನ್ನಣೆ ಉಳಿಸಿಕೊಳ್ಳುವುದಕ್ಕೆ ಪೂರಕವಾಗಿ ನಗರವನ್ನು ಕಟ್ಟುವುದಕ್ಕೆ ನೆರವಾಗುವ ಯೋಜನೆಗಳ ಕೊರತೆ ಎದ್ದು ಕಾಣಿಸುತ್ತಿದೆ.

ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ವಾರಾಂತ್ಯದಲ್ಲಿ ಭರಪೂರ ಮನರಂಜನೆ ಸಿಗಲಿದೆ. ಇಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಸಂತೆ, ಶಿಲ್ಪ ಕಲಾಕೃತಿ ಪ್ರದರ್ಶನ ಹಾಗೂ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ₹ 2 ಕೋಟಿ ಮೀಸಲಿಟ್ಟಿದೆ.

ವಿಶೇಷ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ 2020–21ರಲ್ಲಿ ₹ 3 ಸಾವಿರ ಕೋಟಿ ಮಂಜೂರು ಮಾಡಿತ್ತು. ರಾಜ್ಯದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ಬೆಂಗಳೂರಿಗೆ ಇಷ್ಟು ಕಡಿಮೆ ಮೊತ್ತ ಸಾಲದು ಎಂಬ ಟೀಕೆ ವ್ಯಕ್ತವಾಗಿತ್ತು. ಈ ನಡುವೆ, ಕೋವಿಡ್‌ ಬಿಕ್ಕಟ್ಟಿನ ಕಾರಣ ನೀಡಿ ₹ 1 ಸಾವಿರ ಕೋಟಿಗಳಷ್ಟು ಮೊತ್ತದ ಕಾಮಗಾರಿಗಳಿಗೆ ಕತ್ತರಿ ಹಾಕಿತ್ತು. ಈ ಬಾರಿ ವಿಶೇಷ ಮೂಲ ಸೌಕರ್ಯ ಯೋಜನೆ ಅಡಿ ನಗರಕ್ಕೆ ಹೆಚ್ಚು ಅನುದಾನ ಒದಗಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿ ಕೇವಲ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ.

ಟಿಡಿಆರ್‌ ನೀಡುವ ಪ್ರಕ್ರಿಯೆಯನ್ನು ಸರಳೀಕರಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ. ಇದರಿಂದ ನಗರದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ವೇಗವೇನೋ ಸಿಗಲಿದೆ. ಇದು ನಗರದಲ್ಲಿ ಬಹುಮಹಡಿ ಕಾಂಕ್ರೀಟ್‌ ಕಟ್ಟಡಗಳ ಹೆಚ್ಚಳಕ್ಕೂ ಕಾರಣವಾಗಲಿದೆ ಎಂಬ ಆತಂಕವಿದೆ.

ನಗರದ ಅಭಿವೃದ್ಧಿಗೆ ಒಟ್ಟು ₹ 7,795 ಕೋಟಿ ಅನುದಾನ ಒದಗಿಸಲಾಗುತ್ತದೆ ಎಂದು ಮುಖ್ಯಮಂತ್ರಿಯವರು ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಐದನೇ ಒಂದರಷ್ಟು ಪಾಲನ್ನು ಹೊಂದಿರುವ ಬೆಂಗಳೂರಿನ ಅಭಿವೃದ್ಧಿಗೆ ಈ ಅನುದಾನ ತೀರ ಕಡಿಮೆ ಎಂಬ ಟೀಕೆ ವ್ಯಕ್ತವಾಗಿದೆ.

ರೈಲು ಹಳಿ ದ್ವಿಪಥಕ್ಕೆ ₹ 407 ಕೋಟಿ

ಯಶವಂತಪುರ– ಚನ್ನಸಂದ್ರ ಮತ್ತು ಬೈಯಪ್ಪನಹಳ್ಳಿ–ಹೊಸೂರು ರೈಲು ಮಾರ್ಗಗಳನ್ನು ದ್ವಿಪಥಗೊಳಿಸುವ ಕಾಮಗಾರಿಯನ್ನು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ–ರೈಡ್‌) ಜಾರಿಗೊಳಿಸುತ್ತಿದೆ. ₹ 813 ಕೋಟಿ ವೆಚ್ಚದ ಈ ಯೋಜನೆಯ ಶೇ 50ರಷ್ಟು ಪಾಲನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಇದಕ್ಕೆ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಲಾಗಿದೆ. ಈ ಕಾಮಗಾರಿಯನ್ನು 2023ರ ಅಂತ್ಯದೊಳಗೆ ಪೂರ್ಣಗೊಳಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದೆ.

‘ಮೈಸೂರ್‌ ಲ್ಯಾಂಪ್ಸ್‌’ ಜಾಗದಲ್ಲಿ ‘ಬೆಂಗಳೂರಿನ ಅನುಭವ’

ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್‌ ವರ್ಕ್ಸ್ ನಿಯಮಿತ ಸಂಸ್ಥೆಯ ಪ್ರದೇಶವನ್ನು ಕರ್ನಾಟಕ ಸಂಸ್ಕೃತಿ ಪ್ರತಿಬಿಂಬಿಸುವ ಹಾಗೂ ‘ಬೆಂಗಳೂರಿನ ಅನುಭವ’ ಕಟ್ಟಿಕೊಡುವ ಕೇಂದ್ರವನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಇದರಿಂದ ಬೆಂಗಳೂರಿನ ಉಸಿರುಗಟ್ಟಿಸುವ ವಾತಾವರಣದಿಂದ ಮುಕ್ತಿ ನೀಡುವಂತಹ ಪ್ರದೇಶವೊಂದು ಹೃದಯ ಭಾಗದಲ್ಲಿ ನಿರ್ಮಾಣವಾದಂತೆ ಆಗಲಿದೆ.

ಬೈಯಪ್ಪನಹಳ್ಳಿಯಲ್ಲಿ ಎನ್‌ಜಿಎಫ್‌ ಕಾರ್ಖಾನೆ ಕಟ್ಟಡಗಳನ್ನು ನಗರದ ಶ್ರೀಮಂತ ಪರಂಪರೆ ಸಂಸ್ಕೃತಿ ಹಾಗೂ ಕೈಗಾರಿಕಾ ವೈಭದ ಸಾರುವ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿದೆ.

ಕೆಐಎಎಲ್‌ ಪಕ್ಕ ಸಿಗ್ನೇಚರ್‌ ಬ್ಯುಸಿನೆಸ್‌ ಪಾರ್ಕ್

ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದ ಪಕ್ಕದಲ್ಲಿ ಜಾಗತಿಕ ಮಟ್ಟದ ಬೆಂಗಳೂರು ಸಿಗ್ನೇಚರ್‌ ಬ್ಯುಸಿನೆಸ್‌ ಪಾರ್ಕ್‌ ಅನ್ನು ನಿರ್ಮಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಇದನ್ನು ಅನುಷ್ಠಾನಗೊಳಿಸಲಿದೆ. ಈ ಯೋಜನೆಯ ಮೂಲಸೌಕರ್ಯಗಳನ್ನು ₹ 168 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಎಸ್‌ಟಿಪಿ ಪುನರುಜ್ಜೀವನಕ್ಕೆ ₹ 450 ಕೋಟಿ

ಕೆ.ಸಿ.ಕಣಿವೆ ಆವರಣದಲ್ಲಿರುವ, ನಿತ್ಯ 24.80 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕದ (ಎಸ್‌ಟಿಪಿ) ಪುನರುಜ್ಜೀವನ ಮತ್ತು ಉನ್ನತೀಕರಣಕ್ಕೆ ₹ 450 ಕೋಟಿ ಅನುದನ ನೀಡಲಾಗಿದೆ. ಜಲಮಂಡಳಿಯು ಬಿಬಿಎಂಪಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಿದೆ. ಕೊಳಚೆ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ನಿಟ್ಟಿನಲ್ಲಿ ಇದು ಉತ್ತಮ ಹೆಜ್ಜೆ.

ವೃಷಭಾವತಿ ಕಣಿವೆಯಲ್ಲಿ ನಿತ್ಯ 30.80 ಕೋಟಿ ಲೀಟರ್‌ ನೀರು ಸಂಸ್ಕರಿಸಿ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳನ್ನು ತುಂಬಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ.

ಕಾವೇರಿಯಿಂದ ನೀರು ತರಲು ಮತ್ತೊಂದು ಯೋಜನೆ

ಅರ್ಕಾವತಿ ಮತ್ತು ಕಾವೇರಿ ನದಿಯ ಸಂಗಮದ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸುವ ₹ 9ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಬೆಂಗಳೂರು ನಗರಕ್ಕೆ ನೀರು ಪೂರೈಕೆಗೂ ಈ ಸಮತೋಲನ ಜಲಾಶಯವನ್ನು ಬಳಸಿಕೊಳ್ಳಲಾಗುತ್ತದೆ. ಕೇಂದ್ರ ಜಲ ಆಯೋಗದ ಅನುಮೋದನೆ ಸಿಕ್ಕ ತಕ್ಷಣವೇ ಯೋಜನೆಯನ್ನು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

12 ಕಡೆ ಪಾದಚಾರಿ ಮೇಲ್ಸೇತುವೆ

ಯಶವಂತಪುರ, ಕೆಆರ್‌.ಪುರ, ಜ್ಞಾನಭಾರತಿಯಲ್ಲಿ ಮೆಟ್ರೊ ನಿಲ್ದಾಣಗಳ ಬಳಿ, ದಾಸರಹಳ್ಳಿ, ಚಿಕ್ಕಬಿದರಕಲ್ಲುಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಕೂಗಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಮೂರು ಪಾದಚಾರಿ ಮೇಲ್ಸೇತುವೆಗಳಿಗೆ ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ.

ಹೊಸೂರು ರಸ್ತೆಗೆ ಅಡ್ಡಲಾಗಿ ಏಳು ಕಡೆ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪವೂ ಬಜೆಟ್‌ನಲ್ಲಿದೆ. ಈ ಮೇಲ್ಸೇತುವೆಗಳು ಇಲ್ಲಿ ನಿರ್ಮಾಣವಾಗಲಿರುವ ಮೆಟ್ರೊ ನಿಲ್ದಾಣಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲಿವೆ.

ಒಂದು ರಾಷ್ಟ್ರ ಒಂದು ಕಾರ್ಡ್‌ ಆಗಸ್ಟ್‌ಗೆ ಸಿದ್ಧ

‘ನಮ್ಮ ಮೆಟ್ರೊ’ ಹಾಗೂ ಬಿಎಂಟಿಸಿಗಳೆರಡರಲ್ಲೂ ಬಳಸಬಹುದಾದ ಕಾರ್ಡ್‌ 2021ರ ಆಗಸ್ಟ್‌ನೊಳಗೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ‘ಒಂದು ರಾಷ್ಟ್ರ ಒಂದು ಕಾರ್ಡ್‌’ ಪರಿಕಲ್ಪನೆಯಲ್ಲಿ ಈ ಕಾರ್ಡ್‌ ರೂಪಿಸಲಾಗುತ್ತದೆ.

ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ವನಿತಾ ಸಂಗಾತಿ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಅದು ಜಾರಿಯಾಗಿರಲಿಲ್ಲ. ಈ ಬಾರಿ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಮತ್ತೆ ₹ 30 ಕೋಟಿ ಕಾಯ್ದಿರಿಸಲಾಗಿದೆ. ಕಾರ್ಮಿಕ ಇಲಾಖೆ ನೆರವಿನಿಂದ ಬಿಎಂಟಿಸಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಿದೆ.

ಸ್ವಯಂಚಾಲಿತ ದರ ಸಂಗ್ರಹ ವ್ಯವಸ್ಥೆ (ಎಎಫ್‌ಸಿಎಸ್‌) ಜಾರಿಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ.

ಹಳೆ ಕಾರ್ಯಕ್ರಮಗಳ ಮರುಪ್ರಸ್ತಾಪ

ಬೆಂಗಳೂರು ಮಿಷನ್‌– 2022 ಯೋಜನೆಯನ್ನು ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಪ್ರಕಟಿಸಿದ್ದರು. ಈ ಯೋಜನೆಯ ಅಂಶಗಳನ್ನು ಬಜೆಟ್‌ನಲ್ಲಿ ಪುನರುಚ್ಚರಿಸಲಾಗಿದೆ. ಜನ ಕುಟುಂಬ ಸಮೇತರಾಗಿ ವಿರಾಮ ಸಮಯವನ್ನು ಹಸಿರು ಪರಿಸರದ ಮಧ್ಯೆ ಕಳೆಯಲು ಅನುಕೂಲವಾಗುವಂತೆ ನೈಸರ್ಗಿಕ ಪಥಗಳು, ಮಕ್ಕಳ ಆಟದ ಅಂಗಳ, ಕುಡಿಯುವ ನೀರಿನ ಸೌಲಭ್ಯಗಳಿರುವ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುತ್ತದೆ. ಬೈಯಪ್ಪನಹಳ್ಳಿಯಲ್ಲಿ ಎನ್‌ಜಿಇಫ್‌ಗೆ ಸೇರಿದ 105 ಎಕರೆ ಜಮೀನಿನಲ್ಲೂ ವೃಕ್ಷೋದ್ಯಾನ ನಿರ್ಮಿಸುವ ಪ್ರಸ್ತಾಪ ಬಜೆಟ್‌ನಲ್ಲಿದೆ.

‘ಮಿಷನ್‌ ಬೆಂಗಳೂರು–2022’ ಯೋಜನೆಯಲ್ಲಿ ಪ್ರಸ್ತಾಪಿಸಿರುವಂತೆ ಕೋರಮಂಗಲ ಕಣಿವೆಯ ರಾಜಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ (ಕೆ–100) ಯೋಜನೆಗೆ ₹ 169 ಕೋಟಿ ಒದಗಿಸಲಾಗಿದೆ. ರಾಜಕಾಲುವೆಯಲ್ಲಿ ಶುದ್ಧ ನೀರು ಮಾತ್ರ ಹರಿಯುವಂತೆ ಮಾಡಿ, ಅದನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ಈ ಕಾರ್ಯಕ್ರಮವನ್ನು ಸರ್ಕಾರ ಕಳೆದ ಸಾಲಿನ ಬಜೆಟ್‌ನಲ್ಲೇ ಪ್ರಕಟಿಸಿತ್ತು.

ಬೆಂಗಳೂರು ನಗರದಲ್ಲಿ ಕಸ ಸಂಗ್ರಹಣೆ, ಸಾಗಣೆ ಮತ್ತು ಸಂಸ್ಕರಣೆಯ ಹೊಣೆ ನಿಭಾಯಿಸಲು ಪ್ರತ್ಯೇಕ ಕಂಪನಿ ಸ್ಥಾಪಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಆದರೆ, ಇದಕ್ಕೆ ಸರ್ಕಾರದಿಂದ ಅನುದಾನ ನೀಡುವ ಉಲ್ಲೇಖವಿಲ್ಲ.

ಮುಖ್ಯಾಂಶಗಳು

* ಓಕಳಿಪುರದಲ್ಲಿ ರೇಷ್ಮೆ ಭವನ ನಿರ್ಮಾಣಕ್ಕೆ ₹ 150 ಕೋಟಿ

* ಹೆಸರಘಟ್ಟದಲ್ಲಿ 100 ಎಕರೆ ಪ್ರದೇಶದಲ್ಲಿ ದೇಸಿ ಜಾನುವಾರು, ಕುರಿ ಮೇಕೆ, ಕುಕ್ಕುಟ ತಳಿಗಳ ಶಾಶ್ವತ ಪ್ರದರ್ಶನಕ್ಕೆ, ಪ್ರಾತ್ಯಕ್ಷಿಕೆ ನೀಡುವುದಕ್ಕೆ ಹಾಗೂ ತಳಿ ಅಭಿವೃದ್ಧಿಯ ತರಬೇತಿ ನೀಡುವುದಕ್ಕೆ ಥೀಮ್ ಪಾರ್ಕ್‌ ಸ್ಥಾಪನೆ

* ಬೈಯಪ್ಪನಹಳ್ಳಿಯಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ₹ 50 ಕೋಟಿ

* ಸಿಂಗೇನ ಅಗ್ರಹಾರದಲ್ಲಿ ಹಣ್ಣು ಮಾರುಕಟ್ಟೆಗೆ ಹೊಂದಿಕೊಂಡ ಗುಳಿಮಂಗಲ ಗ್ರಾಮದ 42 ಎಕರೆಯಲ್ಲಿ ಅತ್ಯಧುನಿಕ ತರಕಾರಿ ಮಾರುಕಟ್ಟೆ ನಿರ್ಮಾಣ

* ಪೀಣ್ಯ ಕೈಗಾರಿಕಾ ಟೌನ್‌ಷಿಪ್‌ ಸ್ಥಾಪನೆಗೆ ₹ 100 ಕೋಟಿ

* ಬೆಂಗಳೂರಿನಲ್ಲಿ ಇನ್ವೆಸ್ಟ್‌ ಕರ್ನಾಟಕ ಯೋಜನೆಯಡಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ.

*
ಮಾಜಿ ಮೇಯರ್‌ಗಳು ಏನನ್ನುತ್ತಾರೆ?

‘ಮಹಿಳೆಯರ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಯೋಜನೆಗಳಿಲ್ಲ’

ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಬಜೆಟ್‌ ಮಂಡಿಸಿದರೂ ಮಹಿಳೆಯಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಪ್ರಕಟಿಸಿಲ್ಲ. ಕೋವಿಡ್‌ ಕಾಲದಲ್ಲಿ ಕೆಲಸ ಕಳೆದುಕೊಂಡು ನೆಯಲ್ಲಿರುವ ಮಹಿಳೆಯರಿಗೆ ನೆರವಾಗುವ ಕಾರ್ಯಕ್ರಮದ ಅಗತ್ಯವಿತ್ತು. ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲೂ ಇದು ನಿರಶಾದಾಯಕ ಬಜೆಟ್‌. ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. ಮಹಿಳಾ ಕಾರ್ಮಿಕರಿಗೆ ಬಸ್‌ ಪ್ರಯಾಣದಲ್ಲಿ ರಿಯಾಯಿತಿ ನೀಡುವ ‘ವನಿತಾ ಸಂಗಾತಿ’ ಯೋಜನೆಗೆ ಈ ಬಾರಿ ಅನುದಾನ ನೀಡಿದ್ದು ಸ್ವಾಗಹಾರ್ತ. ನಗರದ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಬಡ ಮಹಿಳೆಯರಿಗೆ ಇದರಿಂದ ಅನುಕೂಲವಾಗಲಿದೆ.
-ಜಿ.ಪದ್ಮಾವತಿ

*
‘ತೆರಿಗೆ ಹೊರೆ ಇರದ ಮಹಿಳಾ ಪರ ಬಜೆಟ್‌’
ಮಹಿಳಾ ದಿನದಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಹಿಳಾ ಪರ ಬಜೆಟ್‌ ಮಂಡಿಸಿದ್ದಾರೆ. ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಕೋವಿಡ್‌ನಿಂದ ಜನ ತತ್ತರಿಸಿದ್ದರು. ತೆರಿಗೆ ಹೆಚ್ಚಿಸದೆಯೇ ಉತ್ತಮ ಯೋಜನೆಗಳನ್ನು ನೀಡಿದ್ದಾರೆ. ಮುಂದಾಲೋಚನೆಯಿಂದ ಕೂಡಿದ ಬಜೆಟ್‌ ನೀಡಿದ್ದಾರೆ. ಬಿಬಿಎಂಪಿಗೂ ಸಾಕಷ್ಟು ಅನುದಾನ ನೀಡುವ ಮೂಲಕ ನಗರದ ಅಭಿವೃದ್ಧಿಗೂ ಒತ್ತು ನೀಡಿದ್ದಾರೆ.
-ಶಾಂತಕುಮಾರಿ

*
‘ಬಜೆಟ್‌: ಹಳೆಯೋಜನೆ ಪೂರ್ಣಗೊಳಿಸಲು ಸೀಮಿತ’
ರಾಜ್ಯದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ಬೆಂಗಳೂರಿನ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿತ್ತು. ನಗರಕ್ಕೆ ಹೊಸದಾಗಿ ಸೇರಿಸಲಿರುವ ಗ್ರಾಮಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ. ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಮಂಡಿಸಿರುವ ಬಜೆಟ್‌ ಇದು. ನಗರದ ಅಭಿವೃದ್ಧಿಗೆ ಹೊಸ ಯೋಜನೆಗಳು ಯಾವುದೂ ಇಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಪಾಲಿಕೆಗೆ 110 ಹಳ್ಳಿ ಸೇರಿಸಿತ್ತು. ಆದರೆ, ಮೂಲಸೌಕರ್ಯ ನೀಡಿರಲಿಲ್ಲ. ಈ ಬಾರಿ ಅದು ಪುರಾವರ್ತನೆ ಆಗಲಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯನ್ನೂ ಕಡೆಗಣಿಸಲಾಗಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಯಾವುದೇ ಯೋಜನೆಗಳಿಲ್ಲ.
-ಗಂಗಾಂಬಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT