ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ | ನಾಳೆ ಮತದಾನ: ಬಿಗಿ ಭದ್ರತೆ

ಬೆಂಗಳೂರು ನಗರದ ನಾಲ್ಕು ಕ್ಷೇತ್ರಗಳಲ್ಲಿ ಉಪಚುನಾವಣೆ
Last Updated 3 ಡಿಸೆಂಬರ್ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಿದ್ಧತೆಯನ್ನು ಅಧಿಕಾರಿಗಳು ಬಹುತೇಕ ಪೂರ್ಣಗೊಳಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ 5,988 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕೆ.ಆರ್.ಪುರ ಕ್ಷೇತ್ರಕ್ಕೆ ಐಟಿಐ ವಿದ್ಯಾಮಂದಿರ, ಯಶವಂತಪುರ ಕ್ಷೇತ್ರಕ್ಕೆ ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಮಹಾಲಕ್ಷ್ಮೀ ಲೇಔಟ್‌ಗೆ ವಿದ್ಯಾವರ್ಧಕ ಸಂಘದ ಹೈಸ್ಕೂಲ್, ಶಿವಾಜಿನಗರ ಕ್ಷೇತ್ರಕ್ಕೆ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ–ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.

4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,361 ಮತಗಟ್ಟೆಗಳಿವೆ. ಈ ಪೈಕಿ 12 ‘ಸಖಿ’ ಮತಗಟ್ಟೆ‌, 4 ಮಾದರಿ ಮತಗಟ್ಟೆಗಳು. ಪ್ರತಿ ಮತಗಟ್ಟೆಯಲ್ಲೂ ಮೆಡಿಕಲ್ ಕಿಟ್‌ ನೀಡಲಾಗಿದೆ. ಸಿಬ್ಬಂದಿಗಾಗಿ 536 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮತದಾನದ ಸಮಯ: ನಾಲ್ಕು ಕ್ಷೇತ್ರಗಳಿಂದ ಒಟ್ಟು 56 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಡಿ. 5ರಂದು ‌ಬೆಳಿಗ್ಗೆ 7ರಿಂದ ಸಂಜೆ 6.30ರವರೆಗೆ ಮತದಾನ ನಡೆಯಲಿದೆ.

ರಜೆ: ವಿಧಾನಸೌಧ, ವಿಕಾಸಸೌಧಕ್ಕೆ ಅನ್ವಯವಾಗದು

ಚುನಾವಣೆ ನಡೆಯಲಿರುವ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ, ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿನ ಕಚೇರಿಗಳಿಗೆ ರಜೆಯಿಂದ ವಿನಾಯಿತಿ ನೀಡಲಾಗಿದೆ.

ಹಣ ಹಂಚಿಕೆ ಶಂಕೆ; ಕಾರುಗಳಿಗೆ ಕಲ್ಲು

ಕಿಕ್ಕೇರಿ (ಮಂಡ್ಯ ಜಿಲ್ಲೆ): ಸಮೀಪದ ಮಂದಗೆರೆ ಗ್ರಾಮದಲ್ಲಿ ಮತದಾರರಿಗೆ ಹಣ ಹಂಚಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ರಾತ್ರಿ ಕಾರುಗಳ ಮೇಲೆ ಕಲ್ಲು ತೂರಿದ್ದಾರೆ.

ಘಟನೆಯಲ್ಲಿ ಹುಂಡೈ ಐ–20 ಮತ್ತು ಬೊಲೆರೊ ಕಾರುಗಳ ಗಾಜು ಪುಡಿಯಾಗಿವೆ. ಕಾರುಗಳು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸೇರಿದ್ದಾಗಿವೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾರುಗಳಲ್ಲಿ ಹಣ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT