ಶುಕ್ರವಾರ, ಫೆಬ್ರವರಿ 21, 2020
18 °C
ಜನಸ್ನೇಹಿ, ಜನ ಸೇವಕ, ಮಾಹಿತಿ ಕಣಜಕ್ಕೆ ಮುಖ್ಯಮಂತ್ರಿ ಚಾಲನೆ

ಮನೆ ಬಾಗಿಲಿಗೇ 53 ಸೇವೆ: ಸಿಎಂ ಯಡಿಯೂರಪ್ಪ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜನಸೇವಕ, ಮಾಹಿತಿ ಕಣಜ, ಆರ್‌ಟಿಐ ಆನ್‌ಲೈನ್‌ ಜಾಲತಾಣ, ಜನ ಸ್ನೇಹಿ ಸಹಾಯ ವೇದಿಕೆ, ಕಾರ್ಮಿಕ ಇಲಾಖೆಯ ಸಹಾಯವಾಣಿ, ಆಶಾದೀಪ ಜಾಲತಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಾತನಾಡಿ, ‘ಜನಸ್ನೇಹಿ ಆಡಳಿತಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸೇವೆಗಳು ಅತ್ಯಂತ ಸುಲಭವಾಗಿ ಸಿಗಲಿವೆ’ ಎಂದರು.

ಕಾರ್ಮಿಕ ಸಚಿವ ಎಸ್‌.ಸುರೇಶ್‌ ಕುಮಾರ್ ಮಾತನಾಡಿ, ‘ಜನ ಸೇವಕ’ ಸಕಾಲದಡಿಯ ಯೋಜನೆಯಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ದಾಸರಹಳ್ಳಿಯಲ್ಲಿ ಜಾರಿ ಮಾಡಲಾಗಿತ್ತು. ಅದು ಯಶಸ್ವಿಯಾಗಿದ್ದರಿಂದ ಯೋಜನೆಯನ್ನು ರಾಜಾಜಿನಗರ, ಮಹದೇವಪುರ ಮತ್ತು ಬೊಮ್ಮನಹಳ್ಳಿಗೂ ವಿಸ್ತರಿಸಲಾಗುತ್ತಿದೆ’ ಎಂದರು.

ಬೆಂಗಳೂರಿನ ಇತರ ಬಡಾವಣೆಗಳಲ್ಲದೇ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ನಗರಗಳಲ್ಲೂ ಮುಂದಿನ ದಿನಗಳಲ್ಲಿ ಜಾರಿ ಮಾಡಲಾಗುವುದು ಎಂದು ಹೇಳಿದರು.

ನಾಗರಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಒದಗಿಸಲು ‘ಮಾಹಿತಿ ಕಣಜ’ ಜಾಲತಾಣ ಆರಂಭಿಸಲಾಗಿದೆ. ಇದರಲ್ಲಿ 11 ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ 80 ಕ್ಕೂ ಹೆಚ್ಚಿನ ಸಂಸ್ಥೆಗಳ ಮಾಹಿತಿ ಈ ಜಾಲತಾಣದಲ್ಲಿ ಸಿಗುತ್ತದೆ. ಇಂತಹದ್ದೊಂದು ಜಾಲತಾಣ ದೇಶದಲ್ಲೇ ಪ್ರಥಮ ಎಂದು ಸುರೇಶ್‌ ಕುಮಾರ್ ವಿವರಿಸಿದರು.

ಸುಪ್ರೀಂಕೋರ್ಟ್‌ನ ತೀರ್ಪಿನಂತೆ ರಾಜ್ಯದಲ್ಲಿ ಆರ್‌ಟಿಐ ಆನ್‌ಲೈನ್‌ ಜಾಲತಾಣ ಆರಂಭಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಯಾವುದೇ ಮಾಹಿತಿ ಪಡೆಯಲು ಅಪೇಕ್ಷಿಸುವ ಅರ್ಜಿದಾರರು ಈ ವೆಬ್‌ ಪೋರ್ಟಲ್‌ ಮೂಲಕ ಕರ್ನಾಟಕ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಪ್ರಾಧಿಕಾರಗಳಿಗೆ ಕೋರಿಕೆ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಈ ವೆಬ್‌ ಪೋರ್ಟಲ್‌ ಮೂಲಕ ಸಲ್ಲಿಸಿದ ಅರ್ಜಿಯು ಸಚಿವಾಲಯ, ಇಲಾಖೆ, ಸಾರ್ವಜನಿಕ ಪ್ರಾಧಿಕಾರ ಇತರೆ ನೋಡಲ್‌ ಅಧಿಕಾರಿಗೆ ವಿದ್ಯುನ್ಮಾನ ರೂಪದಲ್ಲಿ ತಲುಪುತ್ತದೆ. ಅವರು ಮಾಹಿತಿ ಕೋರಿಕೆ ಅರ್ಜಿಯನ್ನು ವಿದ್ಯುನ್ಮಾನ ರೂಪದಲ್ಲಿ ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ವರ್ಗಾಯಿಸುತ್ತಾರೆ. ಎಸ್‌ಎಂಎಸ್‌ ಮೂಲಕ ಅರ್ಜಿಯ ಹಂತವನ್ನು ಮತ್ತು ಇ–ಮೇಲ್‌ ಮೂಲಕ ಇತರೆ ವಿವರ ಒದಗಿಸಲಾಗುವುದು ಎಂದರು.

ಸೇವೆಗೆ ₹115 ಮಾತ್ರ: ‘ಜನಸೇವಕ’ ಯೋಜನೆಯಡಿ ಕೇವಲ ₹115 ನೀಡಿದರೆ ಸಾಕು. ನಾಗರಿಕರು ಓಡಾಡಬೇಕಿಲ್ಲ, ಸಮಯವೂ ಉಳಿಯುತ್ತದೆ. ಕೇಳಿದ ಮಾಹಿತಿ ಅಥವಾ ಪ್ರಮಾಣಪತ್ರ ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.

24 ಗಂಟೆಯೂ ದೂರು ನೀಡಬಹುದು

ಜನಸ್ನೇಹಿ ಯೋಜನೆಯಡಿ ಟ್ವಿಟರ್‌ ಮತ್ತು ಸಹಾಯವಾಣಿ ಮೂಲಕ 24 ಗಂಟೆಗಳೂ ದೂರು ನೀಡಬಹುದಾಗಿದೆ. ಇದರ ನಿರ್ವಹಣೆಗೆ ವಾರ್ತಾ ಇಲಾಖೆ ಪರಿಣಿತರ ತಂಡವನ್ನು ರಚಿಸಿದೆ.

ಸಾರ್ವಜನಿಕರ ದೂರನ್ನು ಸ್ವೀಕರಿಸುವ ತಂಡವು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸುತ್ತದೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ವಾರ್ತಾ ಇಲಾಖೆ ಕಾರ್ಯ ನಿರ್ವಹಿಸುತ್ತದೆ.

ಸಾರ್ವಜನಿಕ ಹಿತಾಸಕ್ತಿಯ ಕುಂದುಕೊರತೆಗೆ ಮೊಬೈಲ್‌ ದೂರವಾಣಿ ಸಂಖ್ಯೆ 9980299802 ಗೆ ವಾಟ್ಸ್ ಆ್ಯಪ್‌ ಮೂಲಕವೂ ಅಹವಾಲು ಸಲ್ಲಿಸಬಹುದು.

ಇಲಾಖೆಯ ಟ್ವಿಟರ್‌ ಖಾತೆ @karnataka_dipr ಮೂಲಕ ಟ್ವೀಟ್‌ ಮಾಡುವ ಮೂಲಕ ಸರ್ಕಾರದ ಗಮನಕ್ಕೆ ತರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು