ಬೆಂಗಳೂರು: ‘ನಮ್ಮ ಉದ್ಯಮಿಗಳು ಯಾವುದೇ ಉತ್ಪನ್ನ ತಯಾರಿಸಿದರೂ ಅದು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿರಬೇಕು. ಇದರಿಂದ ಹೆಚ್ಚು ಪ್ರಗತಿ ಹೊಂದಲು ಸಾಧ್ಯ’ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಶನಿವಾರ ಆಯೋಜಿಸಿದ್ದ ‘ದಲಿತ ಉದ್ದಿಮೆದಾರರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ (ಎಂಎಸ್ಎಂಇ) ಹಲವು ಅವಕಾಶಗಳಿವೆ. ದೇಶದಲ್ಲಿ ಇದೀಗ ‘ಮೇಕ್ ಇನ್ ಇಂಡಿಯಾ’ ಚಾಲ್ತಿಯಲ್ಲಿದ್ದು, ಎಚ್ಎಎಲ್, ಬಿಎಇಲ್, ಬಿಎಚ್‌ಇಎಲ್‌ಗಳೂ ಸೇರಿದಂತೆ ಬೃಹತ್ ಸಂಸ್ಥೆಗಳು ಶೇ 90ರಷ್ಟು ದೇಶೀಯ ಉತ್ಪನ್ನಗಳನ್ನೇ ಬಳಸುತ್ತಿವೆ. ಆಟೊಮೊಬೈಲ್ ಭಾಗಗಳು ಸೇರಿದಂತೆ ಎಲ್ಲ ರೀತಿಯ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದರೆ ಮಾರುಕಟ್ಟೆ ಇಲ್ಲಿಯೇ ಸಿಗುತ್ತದೆ’ ಎಂದರು.
‘ಕೃಷಿ ನಂತರ ದೊಡ್ಡ ಉದ್ಯಮ ಎಂಎಸ್ಎಂಇಯಾಗಿದ್ದು, 21 ಸಾವಿರ ಕೋಟಿ ಉದ್ಯೋಗ ಒದಗಿಸಿದೆ. ಅತಿದೊಡ್ಡ ಉದ್ಯಮಕ್ಕಿಂತ ಎಂಎಸ್ಎಂಇಗಳು ಪ್ರಾರಂಭವಾದರೆ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಆಹಾರ ಸಂಸ್ಕರಣೆಯಲ್ಲಿ ಕ್ಷೇತ್ರಕ್ಕೆ ರಫ್ತಿನಲ್ಲಿ ಹೆಚ್ಚು ಅವಕಾಶವಿದೆ. ಯಾವ ದೇಶಗಳಿಗೆ ಯಾವ ರೀತಿಯ ಗುಣಮಟ್ಟದಲ್ಲಿ ಆಹಾರಗಳನ್ನು ಒದಗಿಸಬೇಕೆಂಬುದನ್ನು ಅರಿತುಕೊಂಡರೆ ಮಾರುಕಟ್ಟೆಯಲ್ಲಿ ಅಗಾಧವಾಗಿ ಬೆಳೆಯಬಹುದು’ ಎಂದು ಹೇಳಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಡೆಸುವ ಎಂಎಸ್ಎಂಇಯಿಂದ ಶೇ 4ರಷ್ಟು ಉತ್ಪನ್ನಗಳನ್ನು ಖರೀದಿಸಬೇಕೆಂಬ ನಿಯಮವಿದೆ. ಅದನ್ನು ಉದ್ಯಮಿಗಳು ಬಳಸಿಕೊಳ್ಳಬೇಕು. ಅಂತರರಾಷ್ಟ್ರೀಯ ಗುಣಮಟ್ಟವನ್ನು ತಲುಪಿದರೆ ನಂದಿನಿ ತುಪ್ಪ ಸೇರಿದಂತೆ ನಮ್ಮ ಅನೇಕ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ’ ಎಂದರು.
‘ಬೃಹತ್ ಕೈಗಾರಿಕೆಗಳಿಗಿಂತ ಎಂಎಸ್ಎಂಇಗಳಿಗೆ ಹೆಚ್ಚಿನ ಆದ್ಯತೆಯನ್ನು ರಾಜ್ಯ ಸರ್ಕಾರ ನೀಡಿದೆ. ಭೂಮಿ ಖರೀದಿಯಲ್ಲಿ ಶೇ 75ರಷ್ಟು ಸಬ್ಸಿಡಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ದಲಿತ ಯುವಕರು ಉದ್ಯಮಿಗಳಾಗುವ ಅವಕಾಶವನ್ನೂ ಒದಗಿಸಿದೆ. ಇದನ್ನು ಉಪಯೋಗಿಸಿಕೊಂಡು ದಲಿತರು ಮುಂದುವರಿಯಬೇಕು’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ದಲಿತ ಉದ್ಯಮಿಗಳಿಗೆ ಮುದ್ರಾ ಯೋಜನೆ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಲ್ಲಿ ಸಾಲದ ಬಡ್ಡಿ ಕಡಿತ, ಎನ್‌ಪಿಎ ಅವಧಿ ವಿಸ್ತರಣೆ, ಎಸ್‌ಸಿ/ಎಸ್‌ಟಿಯವರ ಎಂಎಸ್ಎಂಇಗಳಿಂದ ಖರೀದಿಸಲಾಗುತ್ತಿರುವ ಉತ್ಪನ್ನಗಳ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಳ ಸೇರಿದಂತೆ ಎಂಟು ಬೇಡಿಕೆ ಈಡೇರಿಸುವಂತೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಅವರು ಶೋಭಾ ಅವರಿಗೆ ಮನವಿ ಮಾಡಿದರು.
ಸಂಸದರಾದ ಎಂ. ಮಲ್ಲೇಶ್ ಬಾಬು, ಪ್ರಿಯಾಂಕಾ ಜಾರಕಿಹೊಳಿ, ಎಸ್‌ಸಿಎಸ್‌ಪಿ– ಟಿಎಸ್‌ಪಿ ಸಲಹೆಗಾರ ಇ.ವೆಂಕಟಯ್ಯ, ಕೆಐಎಡಿಬಿ ಸಿಇಒ ಎಂ. ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.