ಮಂಗಳವಾರ, ಜನವರಿ 18, 2022
20 °C
ಜಿಲ್ಲಾ ನೋಂದಣಾಧಿಕಾರಿಗೆ ಸದಸ್ಯರ ಮನವಿ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೂಡಲೇ ಚುನಾವಣೆ ನಡೆಸಲು ಸದಸ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿಸೆಂಬರ್‌ 31ರ ಒಳಗೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಮಂಡಳಿಯ ಸದಸ್ಯರು ಜಿಲ್ಲಾ ನೋಂದಣಾಧಿಕಾರಿಗೆ ಪತ್ರ ಬರೆದಿದ್ದಾರೆ.

‘ಮಂಡಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸುವಂತೆ ವಾಣಿಜ್ಯ ಮಂಡಳಿಗೆ ಜಿಲ್ಲಾ ನೋಂದಣಾಧಿಕಾರಿ ಆದೇಶಿಸಿದ್ದರೂ ಅದು ಪಾಲನೆ ಆಗಿಲ್ಲ. ಇದೀಗ ದುರುದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಪ್ರಸ್ತುತ ಆಡಳಿತ ಮಂಡಳಿಯು ಇಲಾಖೆಯ ಆದೇಶವನ್ನು ನಿರ್ಲಕ್ಷಿಸಿ ಅನಧಿಕೃತವಾಗಿ ಆಡಳಿತ ನಡೆಸುತ್ತಿದೆ. ನ. 26ರಂದು ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆಸಿದ್ದರೂ ಚುನಾವಣೆ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ ಜಿಲ್ಲಾ ನೋಂದಣಾಧಿಕಾರಿ ಕೂಡಲೇ ಮಧ್ಯಪ್ರವೇಶಿಸಿ ಚುನಾವಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಸದಸ್ಯರಾದ ವಿಜಯ್‌ಕುಮಾರ್‌ ಸಿಂಹ, ಬಾ.ಮ. ಗಿರೀಶ್‌, ಕೃಷ್ಣಪ್ಪ ಸೇರಿದಂತೆ 6 ಸದಸ್ಯರು ಮನವಿಗೆ ಸಹಿ ಮಾಡಿದ್ದಾರೆ.

ಚುನಾವಣೆ ಮುಂದೂಡುವುದಿಲ್ಲ: ಮಂಡಳಿ ಸ್ಪಷ್ಟನೆ

‘ಯಾವುದೇ ಕಾರಣಕ್ಕೂ ಚುನಾವಣೆ ಮುಂದೂಡುವ ಪ್ರಸ್ತಾವ ಇಲ್ಲ. ಕೋವಿಡ್‌ ಕಾರಣದಿಂದಾಗಿ ರಾಜ್ಯ ಸರ್ಕಾರವೇ ಚುನಾವಣಾ ಚಟುವಟಿಕೆಗಳನ್ನು ಮುಂದೂಡಿತ್ತು. ಈ ಮಧ್ಯೆ ಹಾಲಿ ಆಡಳಿತ ಮಂಡಳಿಯ ಮೇಲೆ ಹಳೆಯ ಪ್ರಕರಣವೊಂದರ ಸಂಬಂಧ ವಿಚಾರಣೆಯೂ ನಡೆಯಿತು. ಆ ಆರೋಪ ನಿರಾಧಾರ ಎಂದೂ ಸಾಬೀತಾಯಿತು. ಈಗ ಮಂಡಳಿಯ ಲೆಕ್ಕಪತ್ರ, ದಾಖಲೆಗಳನ್ನು ಸಿದ್ಧಪಡಿಸುವ, ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಸಾಗಿದೆ. ಶೀಘ್ರವೇ ಚುನಾವಣೆ ನಡೆಸಲು ನಾವೂ ಬದ್ಧರಿದ್ದೇವೆ. ಎಲ್ಲ ಪ್ರಕ್ರಿಯೆಗಳು ನಡೆದಿವೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಮತ್ತು ಕಾರ್ಯದರ್ಶಿ ಎನ್‌.ಎಂ. ಸುರೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು