ಬುಧವಾರ, ಫೆಬ್ರವರಿ 26, 2020
19 °C
‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯವೈಖರಿಗೆ ಹೈಕೋರ್ಟ್‌ ಕಿಡಿ: ಸಮಗ್ರ ವರದಿ ಸಲ್ಲಿಸಲು ಸೂಚನೆ

ಗುಂಡಿ ಭರ್ತಿ, ಗಡುವು ತಪ್ಪಿದರೆ ತಕ್ಕ ಕ್ರಮ: ಹೈಕೋರ್ಟ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಗುಂಡಿಗಳನ್ನು ಮಾರ್ಚ್‌ 31ರೊಳಗೆ ಮುಚ್ಚಬೇಕು. ಇಲ್ಲವಾದಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತಕ್ಕ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಹೈಕೋರ್ಟ್‌ ಬಿಬಿಎಂಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

‘ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಅರ್ಜಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ ನ್ಯಾಯಪೀಠ, ‘ಈಗಾಗಲೇ 74 ಕಿ.ಮೀ ಉದ್ದದಷ್ಟು ವ್ಯಾಪ್ತಿಯಲ್ಲಿರುವ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ತಿಳಿಸಿದ್ದು, ಈ ರಸ್ತೆಗಳ ಗುಣಮಟ್ಟ ಪರಿಶೀಲಿಸಲು ಮುಂದಿನ ಎರಡು ವಾರಗಳಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಂತ್ರಜ್ಞಾನ ವಿಭಾಗದ ತಜ್ಞರಿಂದ ಪರಿಶೀಲನೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸಿ’ ಎಂದು ನಿರ್ದೇಶಿಸಿದೆ. 

‘ಉತ್ತಮ ರಸ್ತೆಗಳನ್ನು ಹೊಂದುವುದು ಪ್ರಜೆಗಳ ಮೂಲಭೂತ ಹಕ್ಕು, ಅಂತೆಯೇ ಉತ್ತಮ ರಸ್ತೆಗಳನ್ನು ಒದಗಿಸುವುದೂ ಬಿಬಿಎಂಪಿಯಂತಹ ಸಾಂವಿಧಾನಿಕ ಸಂಸ್ಥೆಯ ಆದ್ಯ ಕರ್ತವ್ಯ. ಜನರೇನೂ ಬಿಬಿಎಂಪಿ ದಾಕ್ಷಿಣ್ಯದಲ್ಲಿ ಬದುಕಬೇಕಿಲ್ಲ. ಆದ್ದರಿಂದ, ಬಾಕಿ ಇರುವ ಗುಂಡಿಗಳನ್ನು ಹಂತಹಂತವಾಗಿ ಮುಚ್ಚಬೇಕು. ಈ ಕುರಿತ ಅನುಪಾಲನಾ ವರದಿಯನ್ನು ಮುಂದಿನ ವಿಚಾರಣೆ ದಿನದಂದು ನ್ಯಾಯಾಲಯಕ್ಕೆ ಒದಗಿಸಬೇಕು’ ಎಂದು ನಿರ್ದೇಶಿಸಿದೆ.

‘ಜಲಮಂಡಳಿ ಹಾಗೂ ಬೆಸ್ಕಾಂ ಕಾಮಗಾರಿ ಸಂಬಂಧ ಕೈಗೊಂಡಿರುವ ಕಾಮಗಾರಿಗಳಲ್ಲಿ ಅಗೆದಿರುವ ರಸ್ತೆಗಳನ್ನು ಏಪ್ರಿಲ್‌ 30ರೊಳಗೆ ದುರಸ್ತಿಪಡಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್‌ 1ಕ್ಕೆ ನಿಗದಿಪಡಿಸಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 417 ಕಿ.ಮೀನಷ್ಟು ಉದ್ದದ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಲಾಗಿದೆ’ ಎಂದು ಬಿಬಿಎಂಪಿ ಈ ಹಿಂದಿನ ವಿಚಾರಣೆ ವೇಳೆ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲೆ ಎಸ್.ಆರ್. ಅನೂರಾಧ, ‘ಪಾಲಿಕೆ ನೀಡುತ್ತಿರುವ ಅಂಕಿ ಅಂಶಗಳೆಲ್ಲಾ ಸುಳ್ಳು. ಕೋರ್ಟ್‌ಗೆ ಹೇಳಿದಂತೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿಲ್ಲ’ ಎಂದು ಪುನಃ ಆಕ್ಷೇಪಿಸಿದರು.

‘ರಸ್ತೆ ಅಗೆದರೆ ಹೊಣೆಗಾರಿಕೆ ನಿಗದಿಪಡಿಸಿ’

‘ಜಲಮಂಡಳಿ, ಮೆಟ್ರೊ ನಿಗಮ, ಬೆಸ್ಕಾಂ, ಗೇಲ್‌ ಸೇರಿದಂತೆ ಯಾವುದೇ ಸರ್ಕಾರಿ ಸಂಸ್ಥೆಗಳು ಕಾಮಗಾರಿ ಸಂಬಂಧ ರಸ್ತೆ ಅಗೆದರೆ ಅಂತಹ ಕಾಮಗಾರಿಗೆ ಕಾಲಮಿತಿ ನಿಗದಿಪಡಿಸಬೇಕು. ಅವುಗಳಿಂದಲೇ ಹಣ ವಸೂಲು ಮಾಡಿ ರಸ್ತೆಗಳನ್ನು ದುರಸ್ತಿಪಡಿಸುವ ಷರತ್ತುಗಳನ್ನು ವಿಧಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

‘ಐಐಎಸ್‌ಸಿ ತಜ್ಞರು ಬಿಬಿಎಂಪಿಗೆ ಸಲಹೆ ನೀಡಬಹುದು ಮತ್ತು ರಸ್ತೆ ನಿರ್ವಹಣೆಗಾಗಿ ಬಿಬಿಎಂಪಿ ಗುತ್ತಿಗೆದಾರರಿಗೆ ಹೊಣೆ ನಿಗದಿಪಡಿಸಬೇಕು’ ಎಂದು ತಿಳಿಸಿದೆ.

‘ಕೋರ್ಟ್‌ ಸುಮ್ಮನೆ ಕುಳಿತುಕೊಳ್ಳುವುದಿಲ್ಲ...’

‘ಬಿಬಿಎಂಪಿ ಹೈಕೋರ್ಟ್‌ನ ಆದೇಶಗಳಿಗೆ ಬೆಲೆ ಕೊಡುತ್ತಿಲ್ಲ ಎಂಬುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ. ಈ ವೈಖರಿಯನ್ನು  ನೋಡಿಕೊಂಡು ಕೋರ್ಟ್‌ ಸುಮ್ಮನೆ ಕುಳಿತುಕೊಳ್ಳುವುದಿಲ್ಲ’ ಎಂದು ನ್ಯಾಯಪೀಠ ಎಚ್ಚರಿಸಿದೆ.

ಏತನ್ಮಧ್ಯೆ, ‘ರಸ್ತೆ ಗುಂಡಿಗಳಿಂದ ಆಗುವ ಅನಾಹುತಗಳಿಗೆ ಪರಿಹಾರ ನೀಡಬೇಕೆಂದು ನೀಡಲಾಗಿದ್ದ ಆದೇಶ ಪಾಲನೆ ಮಾಡದ ಪಾಲಿಕೆ ಆಯುಕ್ತರು, ಮೇಯರ್, ಉಪ ಮೇಯರ್, ವಿವಿಧ ಸ್ಥಾಯಿ ಸಮಿತಿಗಳ ಮುಖ್ಯಸ್ಥರ ಜೊತೆ ಚರ್ಚಿಸಿ ಉದ್ಧಟತನ ಪ್ರದರ್ಶಿಸಿದೆ. ಇವರೆಲ್ಲರ ವಿರುದ್ಧ ಕ್ರಿಮಿನಲ್‌ ಮತ್ತು ಸಿವಿಲ್‌ ಸ್ವರೂಪದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕ್ರಮ ಕೈಗೊಳ್ಳಬಹುದು. ಆದರೆ, ಅದರಿಂದ ಸಮಯ ಹಾಳಾಗುತ್ತದೆ
ಮತ್ತು ಉದ್ದೇಶವೂ ಈಡೇರುವುದಿಲ್ಲ’ ಎಂದು ಉದಾರತೆ ಪ್ರದರ್ಶಿಸಿದೆ.

ಅಂತೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್, ಉಪಮೇಯರ್, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು