ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡ ಕಟ್ಟುತ್ತೇನೆ–ಮಾಹಿತಿ ನೀಡಲ್ಲ!

ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ಮಾಹಿತಿ ಆಯೋಗ ಚಾಟಿ
Last Updated 27 ಫೆಬ್ರುವರಿ 2020, 5:17 IST
ಅಕ್ಷರ ಗಾತ್ರ

ಬೆಂಗಳೂರು: ‘ದಂಡ ಬೇಕಿದ್ದರೆ ಕಟ್ಟುತ್ತೇನೆ, ಆದರೆ ಮಾಹಿತಿ ನೀಡಲ್ಲ’ ಎಂದು ಪಟ್ಟು ಹಿಡಿದಿದ್ದ ಬಿಬಿಎಂಪಿ ಎಂಜಿನಿಯರ್‌ ಒಬ್ಬರ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಶಿಸ್ತು ಕ್ರಮದ ಚಾಟಿ ಬೀಸಿ ಮಾಹಿತಿ ಪಡೆದುಕೊಂಡಿದೆ.

‘ಯಶವಂತಪುರ ವಲಯದಲ್ಲಿ ಅನುಮೋದನೆ ಪಡೆದ ನಕ್ಷೆ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ತಪಾಸಣೆ ನಡೆಸಿರುವ ವರದಿ ಮತ್ತು ಕಟ್ಟಡಗಳ ಮಾಲೀಕರಿಗೆ ನೀಡಿರುವ ನೋಟಿಸ್‌ ಪ್ರತಿಗಳನ್ನು ನೀಡಿ’ ಎಂದು ಕಿರಣ್‌ ಕುಮಾರ್ ಗೌಡ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ 2017ರ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿ ದ್ದರು. ಮಾಹಿತಿ ಸಿಗದ ಕಾರಣ ಅವರು ಮಾಹಿತಿ ಆಯೋಗದ ಕದ ತಟ್ಟಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎನ್.ಪಿ.ರಮೇಶ್ ಅವರು ಮಾಹಿತಿ ನೀಡುವಂತೆ ಆದೇಶ ಮಾಡಿದ್ದರು. 12 ಬಾರಿ ವಿಚಾರಣೆ ನಡೆಸಿ ನೋಟಿಸ್‌ ನೀಡಿದರೂ ಮಾಹಿತಿ ನೀಡದ ಕಾರಣಕ್ಕೆ ಬಿಬಿಎಂಪಿಯ ಯಶವಂತಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಅವರಿಗೆ ₹25 ಸಾವಿರ ದಂಡ ವಿಧಿಸಿದ್ದರು. ಉಮೇಶ್ ಅವರು 2020ರ ಜ.29ರಂದು ದಂಡದ ಮೊತ್ತ ಪಾವತಿಸಿದ್ದರೇ, ವಿನಃ ಮಾಹಿತಿ ನೀಡಲಿಲ್ಲ.

‘ಆಡಳಿತದಲ್ಲಿ ಪಾರದರ್ಶಕತೆ ತರಲು ಮಾಹಿತಿ ಹಕ್ಕು ಕಾಯ್ದೆ ತನ್ನದೇ ಆದ ಪಾತ್ರ ವಹಿಸಿದೆ. ಈ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ವಿಚಾರಣೆಗೆ 12 ಬಾರಿ ಗೈರು ಹಾಜರಾಗುವ ಮೂಲಕ ಕಾಯ್ದೆಯ ಬಗ್ಗೆ ನಕಾರಾತ್ಮಕವಾಗಿ ಉಮೇಶ್ ಅವರು ವರ್ತಿಸಿದ್ದಾರೆ. ಆಯೋಗದ ಆದೇಶಗಳನ್ನು ಪಾಲಿಸದೆ ಶಾಸನಬದ್ಧ ಸಂಸ್ಥೆಗೆ ಅಪಮಾನ ಮಾಡಿದ್ದಾರೆ. ದಂಡ ಬೇಕಿದ್ದರೆ ಕಟ್ಟುತ್ತೇನೆ, ಮಾಹಿತಿ ನೀಡುವುದಿಲ್ಲ ಎಂಬ ಧೋರಣೆಯನ್ನು ಬೆಳೆಸಿಕೊಂಡಿದ್ದಾರೆ’ ಎಂದು ಎನ್.ಪಿ. ರಮೇಶ್ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮೂಲತಃ ಲೋಕೋಪಯೋಗಿ ಇಲಾಖೆಯವರಾದ ಉಮೇಶ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅದಕ್ಕೆ ಸಂಬಂಧಿಸಿದ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು’ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಆದೇಶಿಸಿದ್ದಾರೆ.

‘ಮಾಹಿತಿ ಕೊಟ್ಟಿದ್ದೇವೆ’

‘ಮಾಹಿತಿ ಆಯುಕ್ತರು ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ನಂತರ ಅರ್ಜಿದಾರರಿಗೆ ಮಾಹಿತಿ ನೀಡಿದ್ದೇನೆ’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಬ್ಬಂದಿ ಕೊರತೆ, ಕೆಲಸದ ಒತ್ತಡದ ಕಾರಣಕ್ಕೆ ಮಾಹಿತಿ ನೀಡಲು ಆಗಿರಲಿಲ್ಲ. ಮಾಹಿತಿ ನೀಡಿರುವುದರಿಂದ, ಶಿಸ್ತು ಕ್ರಮ ಕೈಬಿಡಬೇಕು ಎಂದು ಆಯೋಗವನ್ನು ಕೋರಿದ್ದೇನೆ’ ಎಂದರು.

ದಂಡ ಪಾವತಿಸುತ್ತೇನೆ ಆದರೆ, ಮಾಹಿತಿ ನೀಡುವುದಿಲ್ಲ ಎಂಬ ಧೋರಣೆ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದುರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ. ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT