ಬೆಂಗಳೂರು: ‘ಬಾಹ್ಯಾಕಾಶ ತಂತ್ರಜ್ಞಾನ ಉದ್ದಿಮೆಗಳು ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಬೆಂಗಳೂರು ಬಾಹ್ಯಾಕಾಶ ಪ್ರದರ್ಶನ–2024’ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಕೇಂದ್ರಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ), ನಾವೀನ್ಯತಾ ಮತ್ತು ನವೋದ್ಯಮಗಳ ಉತ್ತೇಜನ ಕೇಂದ್ರವಾಗಿ ಬಳಸಿಕೊಳ್ಳಬಹುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಒಟ್ಟು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 65ಕ್ಕಿಂತಲೂ ಹೆಚ್ಚು. ಅದನ್ನು ಹಾಗೇ ಕಾಯ್ದುಕೊಳ್ಳಲಾಗುವುದು’ ಎಂದರು.
‘ಕೃಷಿ, ಗಣಿಗಾರಿಕೆ, ಹವಾಮಾನ ಬದಲಾವಣೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಹೀಗಾಗಿ ಈ ಕ್ಷೇತ್ರದ ಪ್ರಗತಿಗೆ ಒತ್ತು ನೀಡುವುದು ಅಗತ್ಯ’ ಎಂದರು.
ನಗರದ ‘ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ’ದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಪ್ರದರ್ಶನದಲ್ಲಿ ದೇಶ–ವಿದೇಶಗಳ 200ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿವೆ.
ಉಪಗ್ರಹಗಳ ಮಾದರಿಗಳು, ತಂತ್ರಜ್ಞಾನಗಳ ಪ್ರಾತಕ್ಷಿಕೆ, ಬಾಹ್ಯಾಕಾಶ ಸಂಶೋಧನಾ ಉಪಕರಣ ಮತ್ತು ಸಾಮಗ್ರಿಗಳನ್ನು ಪ್ರದರ್ಶಿಸಲಾಗಿದೆ. ಸಿಐಐ, ಇಸ್ರೊ, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.