ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌: ರೈತರ ಹಿತಾಸಕ್ತಿಗೆ ಬದ್ಧ: ಸಚಿವ ನಿರಾಣಿ

ನ್ಯಾಯಾಲಯದಲ್ಲಿ 100 ಪ್ರಕರಣಗಳು: ವಿವಾದ ಇತ್ಯರ್ಥಕ್ಕೆ ಪ್ರಯತ್ನ
Last Updated 24 ಮಾರ್ಚ್ 2022, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌’ (ನೈಸ್) ಸಂಸ್ಥೆಯ ಬೆಂಗಳೂರು– ಮೈಸೂರು ಹೆದ್ದಾರಿ ಯೋಜನೆ (ಬಿಎಂಐಸಿಎಲ್‌) ವಿಷಯದಲ್ಲಿ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಈ ಬಗ್ಗೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಈ ಯೋಜನೆಗೆ ಸಂಬಂಧಿಸಿದಂತೆ ನೈಸ್‌ ಮತ್ತು ಸರ್ಕಾರದ ವತಿಯಿಂದ ಇದುವರೆಗೆ 400 ಎಫ್‌ಐಆರ್‌ಗಳು ದಾಖಲಾಗಿದ್ದವು. ಇವುಗಳಲ್ಲಿ 300 ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದ 100 ಪ್ರಕರಣಗಳು ನ್ಯಾಯಾಲಯದಲ್ಲಿವೆ’ ಎಂದು ವಿವರಿಸಿದರು.

’1994–95ರಲ್ಲಿ ಎಚ್‌.ಡಿ. ದೇವೇಗೌಡ ಅವರು ಒಳ್ಳೆಯ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಿದ್ದರು. ನಂತರ, 11 ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಈ ಯೋಜನೆಯಿಂದಾಗಿ ವಿವಾದಗಳೇ ಹೆಚ್ಚು ಎನ್ನುವ ಸಂದೇಶ ಹೂಡಿಕೆದಾರರಿಗೆ ತಲುಪಿದೆ. ಹೀಗಾಗಿ, 27 ವರ್ಷಗಳಿಂದ ಇತ್ಯರ್ಥವಾಗದಿರುವ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

’ಈ ಯೋಜನೆಗೆ 13,237 ಎಕರೆ ಖಾಸಗಿ ಜಮೀನು ಮತ್ತು 6,956 ಎಕರೆ ಸರ್ಕಾರಿ ಜಮೀನು ಸೇರಿದಂತೆ ಒಟ್ಟು 20,193 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. 1997ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಸಂಪುಟ ಉಪಸಮಿತಿ ರಚಿಸಿದ್ದು, ವಿವಾದಗಳು ಇತ್ಯರ್ಥವಾದರೆ ರೈತರಿಗೂ ಉತ್ತಮ ಪರಿಹಾರ ದೊರೆಯುತ್ತದೆ. ಹೀಗಾಗಿ, ನ್ಯೂನ್ಯತೆಗಳನ್ನು ಸರಿಪಡಿಸುವ ಕುರಿತು ಆದ್ಯತೆ ನೀಡಲಾಗುವುದು’ ಎಂದರು. ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ನೈಸ್‌ ರಸ್ತೆಯನ್ನು ಎನ್‌ಎಚ್‌ಎಐಗೆ ವಹಿಸಲು ವಿಶೇಷ ಕಾಯ್ದೆ ರೂಪಿಸಿ. ಇದುವರೆಗೆ ನೈಸ್‌ ಸಂಸ್ಥೆ ಹಣ ಕೊಳ್ಳೆ ಹೊಡೆದಿದ್ದು ಸಾಕು. ನಾಡಿನ 1.25 ಲಕ್ಷ ರೈತರ ಹಿತಾಸಕ್ತಿಯನ್ನು ಸರ್ಕಾರ ಕಾಪಾಡಬೇಕು’ ಎಂದು ಒತ್ತಾಯಿಸಿದರು.

ಬೆಮಲ್ ಕಾರ್ಖಾನೆ ಮುಚ್ಚುವುದಿಲ್ಲ- ನಿರಾಣಿ ಸ್ಪಷ್ಟನೆ
ಬೆಂಗಳೂರು:
’ಕೋಲಾರ ಜಿಲ್ಲೆಯ ಬೆಮಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಗುರುವಾರ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಅರ್ಧ ಗಂಟೆ ಕಾಲಾವಧಿಯ ಚರ್ಚೆಗೆ ಉತ್ತರ ನೀಡಿದ ಅವರು, ‘ಬೆಮಲ್ ಕಾರ್ಖಾನೆ ಉತ್ಪಾದನೆ ಮತ್ತು ಅಲ್ಲಿರುವ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆಜಿಎಫ್ ನಲ್ಲಿ ಚಿನ್ನ ಸಿಗುವು
ದಿಲ್ಲ ಎಂಬ ಕಾರಣಕ್ಕೆ ಆದನ್ನು ಮುಚ್ಚಲಾಗಿದೆ. ಅಲ್ಲಿ ಒಟ್ಟಾರೆ 12 ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ ಭೂಮಿಯ ಮೌಲ್ಯಕ್ಕಿಂತ ಕಾರ್ಖಾನೆಯ ಹೊಣೆಗಾರಿಕೆಯೇ ಹೆಚ್ಚಾಗಿದೆ. ಅದನ್ನು ರಾಜ್ಯ ಸರ್ಕಾರ ತನ್ನ ಮೇಲೆ ಎಳೆದುಕೊಳ್ಳಲು ಸಿದ್ಧವಿಲ್ಲ’ ಎಂದರು.

‘ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನ ಪ್ರಕಾರ ಕೇಂದ್ರ ಸರ್ಕಾರದ ಅಧೀನ ಕೈಗಾರಿಕೆ, ಉದ್ದಿಮೆಗಳಲ್ಲಿದ್ದ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಪ್ರಕಾರ ಕೆಜಿಎಫ್‌ನ ಭೂಮಿಯನ್ನು ಎರಡು ಹಂತದಲ್ಲಿ ವಶಕ್ಕೆ ಪಡೆಯಲಾಗುವುದು. ಅಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ 3,500 ಎಕರೆಯನ್ನು ಕಂದಾಯ ಇಲಾಖೆಗೆ ವಾಪಾಸ್ ಪಡೆದುಕೊಂಡು ಅಲ್ಲಿಂದ ಕೆಎಐಡಿಬಿಗೆ ಹಸ್ತಾಂತರಿಸಲಾಗುವುದು’ ಎಂದರು.

ಅದೇ ರೀತಿ ಸ್ಥಗಿತಗೊಂಡಿರುವ ಕಲಬುರಗಿಯ ಸಿಮೆಂಟ್ ಕಾರ್ಖಾನೆ, ಶಿವಮೊಗ್ಗದ ವಿಶ್ವೇಶ್ವರಯ್ಯ ಸ್ಟೀಲ್‌ ಮತ್ತು ಉಕ್ಕು ಕಾರ್ಖಾನೆಯ ಭೂಮಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT