ಭಾನುವಾರ, ಮೇ 29, 2022
21 °C
ಕೆಎಸ್‌ಆರ್‌ಪಿ ಮೊದಲ ಮಹಿಳಾ ಪಡೆ

ವಿಜಯವಾಡದ ಗಣರಾಜ್ಯೋತ್ಸವ ಪರೇಡ್‌: ಆಂಧ್ರದಲ್ಲಿ ‘ಕರ್ನಾಟಕ ಮಹಿಳಾ ಶಕ್ತಿ’

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೆರೆಯ ಆಂಧ್ರಪ್ರದೇಶದಲ್ಲಿ ಗಣರಾಜ್ಯೋತ್ಸವ ದಿನದಂದು ‘ಕರ್ನಾಟಕ ಪೊಲೀಸ್ ಧ್ವಜ’ ರಾರಾಜಿಸಲಿದೆ. ಆಂಧ್ರದ ವಿಜಯವಾಡದಲ್ಲಿ ನಡೆಯುವ ದಿನಾಚರಣೆಯ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಮೊದಲ ಮಹಿಳಾ ಪಡೆಯ ಸದಸ್ಯೆಯರು ಭಾಗವಹಿಸಲಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಆಯಾ ರಾಜ್ಯಗಳಲ್ಲಿ ಧ್ವಜಾರೋಹಣ ಹಾಗೂ ವಿವಿಧ
ರಕ್ಷಣಾ ಪಡೆಗಳ ಪಥಸಂಚಲನ ಏರ್ಪಡಿಸಲಾಗುತ್ತದೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ, ರಾಜ್ಯದ ಪೊಲೀಸ್‌ ಪಡೆಯೊಂದನ್ನು ನೆರೆಯ ರಾಜ್ಯಗಳಿಗೆ ಪಥಸಂಚಲನಕ್ಕಾಗಿ ಕಳುಹಿಸುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಈ ಬಾರಿ, ಕೆಎಸ್‌ಆರ್‌ಪಿ ಮಹಿಳಾ ಪಡೆಯ 59 ಪೊಲೀಸರ ತಂಡವನ್ನು ಆಂಧ್ರಪ್ರದೇಶಕ್ಕೆ ಜ. 15ಕ್ಕೆ ಕಳುಹಿಸಿಕೊಡಲಾಗಿದೆ. ಆಂಧ್ರದಲ್ಲಿ ಕರ್ನಾಟಕ ಮಹಿಳಾ ಪೊಲೀಸರ ಶಕ್ತಿ ಪ್ರದರ್ಶನವಾಗಲಿದೆ.

ವಿಜಯವಾಡದ ಇಂದಿರಾಗಾಂಧಿ ಮುನ್ಸಿಪಲ್ ಕಾರ್ಪೋರೇಷನ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಪಥಸಂಚಲನದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಮಹಿಳಾ ಪೊಲೀಸರು ಮೈದಾನದಲ್ಲಿ ತಾಲೀಮು ಆರಂಭಿಸಿದ್ದಾರೆ.

ಇದೇ ಮೊದಲ ಬಾರಿಗೆ ಹೊರರಾಜ್ಯದ ಪಥಸಂಚಲನದಲ್ಲಿ ಭಾಗವಹಿಸುತ್ತಿರುವ ಮಹಿಳಾ ಪಡೆ, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ‘ಕರ್ನಾಟಕ ಪೊಲೀಸ್...’ ಎಂಬ ಉದ್ಘೋಷದ ಮೂಲಕ ಧ್ವಜ ಹಿಡಿದು ಹೆಜ್ಜೆ ಹಾಕಲಿರುವ ಈ ಪಡೆಗೆ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಶ್ರೀದೇವಿ ಕಟಕದೊಂಡ ಸಾರಥಿ ಆಗಿದ್ದಾರೆ. ಸಹಾಯಕ ಕಮಾಂಡೆಂಟ್ ನಾಗೇಂದ್ರಸ್ವಾಮಿ ಮೇಲ್ವಿಚಾರಕರಾಗಿ ಪಡೆಯ ಜೊತೆಗಿದ್ದಾರೆ.

ಶಸ್ತ್ರಾಸ್ತ್ರವನ್ನು ಕೈಯಲ್ಲಿ ಹಿಡಿದು ಸಾರಥಿಯ ಆಜ್ಞೆಯಂತೆ ಶಿಸ್ತುಬದ್ಧವಾಗಿ ಹೆಜ್ಜೆ ಇರಿಸಲು ಮಹಿಳಾ ಪೊಲೀಸರು ಸಜ್ಜಾಗುತ್ತಿದ್ದಾರೆ.

‘ಕೆಎಸ್‌ಆರ್‌ಪಿಯಲ್ಲಿ ಈ ಹಿಂದೆ ಪುರುಷರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. 2015–16ರಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಯಿತು. ಬೆಳಗಾವಿಯ 2ನೇ ಬೆಟಾಲಿಯನ್ ಹಾಗೂ ಬೆಂಗಳೂರಿನ 4ನೇ ಬೆಟಾಲಿಯನ್‌ಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಂಥ ಮಹಿಳೆಯರ ತಂಡವನ್ನೇ ಪಥಸಂಚಲನಕ್ಕಾಗಿ ಈ ಬಾರಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ‘ ಎಂದು ಕೆಎಸ್‌ಆರ್‌ಪಿ 4ನೇ ಬೆಟಾಲಿಯನ್ ಕಮಾಂಡೆಂಟ್ ಕೆ.ಎಸ್.ರಘುನಾಥ್ ಹೇಳಿದರು.

‘ಪ್ರತಿ ವರ್ಷವೂ ಪುರುಷರ ತಂಡಗಳು ಹೊರ ರಾಜ್ಯಗಳಿಗೆ ಹೋಗುತ್ತಿದ್ದವು. ಈ ವರ್ಷ ಮಹಿಳಾ ಪಡೆಯನ್ನು ಕಳುಹಿಸಲು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಡಿಜಿಪಿ ಅಲೋಕ್‌ಕುಮಾರ್, ಐಜಿಪಿ ಎಸ್.ರವಿ ಇಚ್ಛಿಸಿದ್ದರು. ಎಲ್ಲರ ಆಸೆಯಂತೆ ಮಹಿಳಾ ಪಡೆ ಆಂಧ್ರಕ್ಕೆ ಹೋಗಿದೆ. ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯೂ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಆಂಧ್ರಪ್ರದೇಶದ ಪುರುಷ ಪಡೆ ರಾಜ್ಯಕ್ಕೆ’

ಗಣರಾಜ್ಯೋತ್ಸವ ಆಚರಣೆಯಂದು ಪಥಸಂಚಲನದಲ್ಲಿ ಪಾಲ್ಗೊಳ್ಳಲು ಆಂಧ್ರಪ್ರದೇಶದ ಪೊಲೀಸ್ ಪಡೆ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದ ಮಹಿಳಾ ಪಡೆಯು ಆಂಧ್ರಕ್ಕೆ ಹೋಗಿರುವುದರಿಂದ, ಅದಕ್ಕೆ ಪ್ರತಿಯಾಗಿ ಅಲ್ಲಿಯ ಪೊಲೀಸರನ್ನು ಇಲ್ಲಿಗೆ ಕಳುಹಿಸಲಾಗಿದೆ.

‘ಆಂಧ್ರದಲ್ಲಿರುವ ವಿವಿಧ ಪಡೆಗಳ ಜೊತೆಯಲ್ಲಿ ಕರ್ನಾಟಕದ ಮಹಿಳಾ ಪೊಲೀಸ್ ಪಡೆಯು ಪಥಸಂಚಲನ ಮಾಡಲಿದೆ. ಆಂಧ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಕರ್ನಾಟಕದ ತಂಡದ ತಾಲೀಮಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪಥಸಂಚಲನಕ್ಕೆ ಬಹುಮಾನಗಳೂ ಇರುತ್ತವೆ’ ಎಂದೂ ಕೆಎಸ್‌ಆರ್‌ಪಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.