ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗೆ ಹಿಂದಿನ ಸರ್ಕಾರಗಳೇ ಕಾರಣ: ಸಿ.ಎಂ ಬೊಮ್ಮಾಯಿ

ಮಳೆ ಪೀಡಿತ ಪ್ರದೇಶಗಳ ಭೇಟಿ ಬಳಿಕ ಅಧಿಕಾರಿಗಳ ಸಭೆ
Last Updated 1 ಸೆಪ್ಟೆಂಬರ್ 2022, 21:44 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳು ಹಾಗೂ ಆ ಅವಧಿಯಲ್ಲಿ ನಡೆಸಿರುವ ಭ್ರಷ್ಟಾಚಾರವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಬಳಿಕ ಅವರು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿಗೆ ಅವಕಾಶ ನೀಡಿದ್ದು ಯಾವ ಸರ್ಕಾರಗಳು? ದೊಡ್ಡ ಬಿಲ್ಡರ್‌ಗಳು ಬೇಕಾಬಿಟ್ಟಿ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುತ್ತೇವೆ’ ಎಂದು ಗುಡುಗಿದರು.

‘ಬೆಂಗಳೂರಿನಲ್ಲಿ ಈಗ ಉದ್ಭವಿಸಿ ರುವ ಸಮಸ್ಯೆಗಳಿಗೆ ಕಳೆದ 8– 10 ವರ್ಷ ಆಡಳಿತ ನಡೆಸಿರುವ ಸರ್ಕಾ ರಗಳೇ ಕಾರಣ. ಅಂದು ನಡೆಸಿ ದುರಾ ಡಳಿತದ ಪರಿಣಾಮವನ್ನು ಇಂದು ನಾಗರಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ಆಡಳಿತದ 6–7 ವರ್ಷಗಳು ನಗರದಲ್ಲಿ ಮಳೆ ಮತ್ತು ಪ್ರವಾಹದ ಸಮಸ್ಯೆ ಉದ್ಭವಿಸಿರಲಿಲ್ಲ. ಆಗ ರಾಜಕಾಲುವೆಗಳನ್ನು ದುರಸ್ತಿಗೊಳಿಸಬಹುದಿತ್ತು. ದುರಸ್ತಿಗೆಂದು ₹800 ಕೋಟಿ ತೆಗೆದಿಟ್ಟರು. ಆದರೆ, ಆ ಹಣ ಎಲ್ಲಿ ಹೋಯಿತು? ಅಂದು ನಡೆಸಿದ ಭ್ರಷ್ಟಾಚಾರ ಮತ್ತು ಕಳಪೆ ಕಾಮ ಗಾರಿಗಳೇ ಇಂದಿನ ಸ್ಥಿತಿಗೆ ಕಾರಣ’ ಎಂದು ಬೊಮ್ಮಾಯಿ ದೂರಿದರು.

‘ರಾಜಕಾಲುವೆಗಳು ಮತ್ತು ಕೆರೆ ಗಳ ಒತ್ತುವರಿ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆಗಿದ್ದು, ಇದಕ್ಕೆ ದಾಖಲೆಗಳು ಇವೆ. 10–15 ದೊಡ್ಡ ಬಿಲ್ಡರ್‌ಗಳು ರಾಜಕಾಲುವೆಗಳ ಮೇಲೆ ಕಟ್ಟಡಗಳನ್ನು ಕಟ್ಟಿದರೂ ಆಗ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ಏಕೆ? ಪರ ವಾನಗಿ ಕೊಟ್ಟು ಕಟ್ಟಡಗಳನ್ನು ನಿರ್ಮಿಸಲು ಏಕೆ ಬಿಟ್ಟಿರಿ?’ ಎಂದು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ನಗರದ ಕೆರೆಗಳು ಮತ್ತು ರಾಜಕಾಲುವೆಗಳ ಬಗ್ಗೆ ಹಸಿರು ನ್ಯಾಯ ಪೀಠ ಆದೇಶ ನೀಡಿದ್ದು ಯಾವಾಗ? ಅದನ್ನು ಏಕೆ ಪಾಲನೆ ಮಾಡಿಲ್ಲ? ಬಫರ್‌ ವಲಯಕ್ಕೆ ಏಕೆ ಬಿಟ್ಟಿಲ್ಲ? ಇದು ನಮ್ಮ ಸರ್ಕಾರದ ತಪ್ಪೇ, ಅಂದಿನ ಸರ್ಕಾರ ಏಕೆ ಸುಮ್ಮನೆ ಕುಳಿತಿದ್ದವು? ಸಮಸ್ಯೆಗಳಿಗೆ ಹಿಂದಿನ ಸರ್ಕಾರಗಳನ್ನು ದೂರಿ ಪಲಾಯನ ಮಾಡುವವನು ನಾನಲ್ಲ. ಹಿಂದೆ ಆಡಳಿತ ಮಾಡಿದವರು ಈ ಸಮಸ್ಯೆಗೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ, ಬೈರತಿ ಬಸವರಾಜ, ಶಾಸಕ ಅರವಿಂದ ಲಿಂಬಾವಳಿ, ಬಿಬಿಎಂಪಿ ಆಡಳಿ ತಾಧಿಕಾರಿ ರಾಕೇಶ್‌ ಸಿಂಗ್‌ ಇದ್ದರು.

‘ಉಪಯೋಗಕ್ಕೆ ಬಾರದ ಸಿ.ಎಂ. ನಗರ ಪ್ರದಕ್ಷಿಣೆ’
ಬೆಂಗಳೂರು:
‘ರಾಜಕಾಲುವೆ, ಉಪ ಕಾಲುವೆಗಳನ್ನು ಒತ್ತುವರಿ ಮಾಡಿ ಪ್ರವಾಹಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಬಿಬಿಎಂಪಿ, ಕೆಲ ರಾಜಕಾರಣಿಗಳನ್ನು ಮೆಚ್ಚಿಸುವ ಕಾರ್ಯದಲ್ಲಿ ತೊಡಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ದೂರಿದರು.

‘ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಹೇಳಿಕೆಗಳಿಂದ ಯಾವುದೇ ಉಪಯೋಗ ಇಲ್ಲ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.‘ಮಳೆ ಅನಾಹುತ ರಾಜ್ಯದೆಲ್ಲೆಡೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಗಳನ್ನು ಮಾಡಿದ್ದಾರೆ. ಆದರೆ, ಇಂಥ ಸಭೆಗಳಿಂದ ಏನು ಉಪಯೋಗ? ಬೊಮ್ಮಾಯಿ ಅವರು ನಗರ ಪ್ರದಕ್ಷಿಣೆ ಮಾಡಿದರು. ಇದರಿಂದ ಫಲಶೃತಿ ಏನು? ಏನಾದರೂ ಪರಿಹಾರ ದೊರೆತಿದೆಯೇ’ ಎಂದು ಪ್ರಶ್ನಿಸಿದರು.

‘ಅನೇಕ ಬಲಿಷ್ಠರು ರಾಜಕಾಲುವೆ, ಉಪಕಾಲುವೆ ಮುಚ್ಚಿ ಅರಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆರೆಗಳನ್ನು ನುಂಗಿ ಹಾಕಿದ್ದಾರೆ. ಈ ರೀತಿ ಜಲಾವೃತವಾಗಲು ದುರಾಸೆಯೇ ಕಾರಣ. ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನ ಅನೇಕ ಪ್ರದೇಶಗಳು ನೀರಿನಲ್ಲಿ ತೇಲುತ್ತಿವೆ. ಈಗಲೂ ಸಹ ಸರ್ಕಾರಕಠಿಣ ಕ್ರಮ‌ಕೈಗೊಳ್ಳದೆ ಮೀನಮೇಷ ಎಣಿಸುತ್ತಿದೆ’ ಎಂದುಕಿಡಿಕಾರಿದರು.

ಅಚ್ಚರಿ ಇಲ್ಲ: ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ ವಿಚಾರ ಆಶ್ಚರ್ಯ ತರುವ ಘಟನೆ ಅಲ್ಲ. ಅನೇಕರು ಕಾಂಗ್ರೆಸ್ ತ್ಯಜಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಮುಂದಿನ ದಿನಗಳಲ್ಲಿ ಬಹಳ ಬದಲಾವಣೆಯಾಗಲಿದೆ’ ಎಂದರು.

‘ನಮ್ಮ ಪಕ್ಷದ ಸಂಘಟನೆ ನಾವೇ ಮಾಡಬೇಕು. ಇನ್ನೊಂದು ಪಕ್ಷದ ಮನೆ ಮುರಿದು ಸಂಘಟನೆ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತೇವೆ’ ಎಂದರು.

ಸೇರ್ಪಡೆ:ಬೀದರ್ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ನೂರಾರು ಮುಖಂಡರು ಗುರುವಾರ ಜೆಡಿಎಸ್ ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT