ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನಿಂತರೂ ತಗ್ಗದ ನೀರಿನ ಹರಿವು: ‌ರಚ್ಚೆ ಹಿಡಿದ ಮಳೆಗೆ ನಲುಗಿದ ಐ.ಟಿ ಸಿಟಿ

ನೀರಿನ ನಡುವೆಯೇ ವಾಹನಗಳ ಸಂಚಾರ
Last Updated 1 ಸೆಪ್ಟೆಂಬರ್ 2022, 21:28 IST
ಅಕ್ಷರ ಗಾತ್ರ

ಬೆಂಗಳೂರು: ರಚ್ಚೆ ಹಿಡಿದು ಸುರಿಯುತ್ತಿರುವ ಮಳೆ ನಗರದ ಐ.ಟಿ ಕಂಪನಿಗಳ ಸುತ್ತಮುತ್ತಲ ಪ್ರದೇಶಗಳ ಜನರನ್ನು ಬೆಚ್ಚಿ ಬೀಳಿಸಿದೆ. ಕೆರೆಯಿಂದ ಕೆರೆಗೆ ಮಳೆ ನೀರು ಹರಿಯುವ ರಾಜಕಾಲುವೆ ಒತ್ತುವರಿಯಿಂದ ಉಕ್ಕುತ್ತಿರುವ ನೀರು, ಮೂರು ದಿನಗಳಿಂದ ಬೆಳ್ಳಂದೂರು ಬಳಿ ಹೊರ ವರ್ತುಲ ರಸ್ತೆಯಲ್ಲಿ ಹರಿಯುತ್ತಿದೆ.

ಹಾಲನಾಯಕನಹಳ್ಳಿ, ಕೈಕೊಂಡ್ರಹಳ್ಳಿ, ಸವಳುಕೆರೆ ಮೂಲಕ ವರ್ತೂರು ಕೆರೆಗೆ ನೀರು ಹರಿಯುವ ರಾಜಕಾಲುವೆಗಳು ರಸ್ತೆ ಬದಿಯ ಚರಂಡಿಗಳಷ್ಟು ಕಿರಿದಾಗಿವೆ. ವರ್ತೂರು ಕೆರೆಗೆ ಸಾಗಬೇಕಾದ ರಾಜಕಾಲುವೆ ಹೊರ ವರ್ತುಲ ರಸ್ತೆಯ ಬಳಿ 10 ಅಡಿಗಳಿಗಿಂತ ಕಡಿಮೆ ಇದೆ. ರಸ್ತೆಯ ಕೆಳಭಾಗದಲ್ಲಿ ಮೂರು ಚಿಕ್ಕದಾದ ಪೈಪ್‌ಗಳನ್ನು ಅಳವಡಿಸಲಾಗಿದೆ. ಅವುಗಳ ಮೂಲಕವೇ ನೀರು ಹರಿದು ಹೋಗಬೇಕಿದೆ.

ಜೋರು ಮಳೆ ಬಂದಿದ್ದರಿಂದ ಆ ಪೈಪ್‌ಗಳಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ, ರಸ್ತೆಯ ಮೇಲೆ ಉಕ್ಕಿದೆ. ರಸ್ತೆಯ ಮೂಲಕ ಸುತ್ತಮುತ್ತಲ ಐ.ಟಿ ಕಂಪನಿಗಳ ಬಾಗಿಲಿಗೂ ಹೋಗಿ ಅವಾಂತರ ಸೃಷ್ಟಿಸಿದೆ. ಮೂರು ದಿನಗಳಿಂದ ರಸ್ತೆಯಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಗುರುವಾರದ ವೇಳೆಗೆ ಕೊಂಚ ಕಡಿಮೆಯಾಗಿತ್ತು. ಕಳೆದ ಎರಡು ದಿನ ನೀರು ರಭಸವಾಗಿ ಹರಿದಿದ್ದರಿಂದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಅದರ ನಡುವೆಯೇ ವಾಹನಗಳು ಸಂಚರಿಸುತ್ತಿವೆ.

ರಾಜಕಾಲುವೆ ಪಕ್ಕದಲ್ಲೇ ಬಿದ್ದಿರುವ ಗುಂಡಿ ಹೊಂಡವಾಗಿ ಮಾರ್ಪಟ್ಟಿದ್ದು, ನೀರಿನೊಳಗೆ ಸಂಚರಿಸುವಾಗ ಗುಂಡಿ ಕಾಣಿಸದೆ ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಮುಂದೆ ಸಾಗುವಂತಾಗಿದೆ.

‘ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕಾಲುವೆಗಳ ನಿರ್ವಹಣೆ ಆಗಿಲ್ಲ. ಐ.ಟಿ ಕಂಪನಿಗಳೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ. ಈಗ ನೀರು ರಸ್ತೆಗೆ ಬಂದು ಜನ ಪರದಾಡುವಂತಾಗಿದೆ. ತೆರವುಗೊಳಿಸಲು ಅಧಿಕಾರಿಗಳು ಅಥವಾ ಶಾಸಕರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಭೇಟಿಗೂ ಮುನ್ನ ಗೋಡೆ ತೆರವು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡುವ ಮುನ್ನ ನಾರಾಯಣಪುರ– ರಾಮಗೊಂಡನಹಳ್ಳಿ ಪ್ರದೇಶದಲ್ಲಿ ರಾಜಕಾಲುವೆ ಅಕ್ಕ–ಪಕ್ಕದ ಕೆಲವು ಗೋಡೆಗಳನ್ನು ಬಿಬಿಎಂಪಿ ಅಧಿಕಾರಿಗಳು ತರಾತುರಿಯಲ್ಲಿ ತೆರವುಗೊಳಿಸಿದರು.

ನಲ್ಲೂರಹಳ್ಳಿ ಕೆರೆಯಿಂದ ಶೀಲವಂತನಕೆರೆ ಮೂಲಕ ವರ್ತೂರು ಕೆರೆಗೆ ನೀರು ಹರಿಯುತ್ತದೆ. ನ್ಯಾಮಗೊಂಡನಹಳ್ಳಿ ಬೋರ್‌ವೆಲ್ ಲಿಂಕ್ ರಸ್ತೆಯಲ್ಲಿ 10ರಿಂದ 12 ಅಪಾರ್ಟ್‌ಮೆಂಟ್ ಸಮುಚ್ಚಯಗಳಿದ್ದು, ಅಲ್ಲಿನ ಕೆಲವು ಕಾಂಪೌಂಡ್‌ಗಳನ್ನು ಅಧಿಕಾರಿಗಳು ಗುರುವಾರ ಏಕಾಏಕಿ ಜೆಸಿಬಿ ಯಂತ್ರದ ಮೂಲಕ ಬೀಳಿಸಿದರು.

‘ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದು ಏಕಾಏಕಿ ಕಾಂಪೌಂಡ್ ಬೀಳಿಸಿದ್ದಾರೆ. ಪ್ರವಾಹಕ್ಕೆ ತಡೆಗೋಡೆಯಂತಿದ್ದ ಕಾಂಪೌಂಡ್ ಬೀಳಿಸಿರುವುದರಿಂದ ಜೋರು ಮಳೆ ಬಂದರೆ ನೀರು ಮನೆಗಳಿಗೆ ಸರಾಗವಾಗಿ ಹರಿದು ಬರುತ್ತದೆ’ ಎಂದು ನಿವಾಸಿಗಳು ಹೇಳಿದರು.

‘ಮಳೆಹಾನಿ ಪ್ರದೇಶ ವೀಕ್ಷಣೆಗೆ ಬರುವ ಮುಖ್ಯಮಂತ್ರಿ ಅವರಿಂದ ಮೆಚ್ಚುಗೆ ಪಡೆಯಲು ಅಧಿಕಾರಿಗಳು ಏಕಾಏಕಿ ಕೆಲವು ಗೋಡೆಗಳನ್ನು ತೆರವು ಮಾಡಿದ್ದಾರೆ. ಇದರಿಂದ ಸಮಸ್ಯೆ ಸರಿಯಾಗುವುದಕ್ಕಿಂತ ತೊಂದರೆಯೇ ಹೆಚ್ಚು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇದೇ ಮೊದಲಲ್ಲ’

ಹೊರ ವರ್ತುಲ ರಸ್ತೆಗೆ ಈ ಹಿಂದೆ ಎರಡು ಬಾರಿ ಇದೇ ರಾಜಕಾಲುವೆಯಿಂದ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

‘ಮಳೆಯ ಪ್ರಮಾಣ ಇಷ್ಟು ಜಾಸ್ತಿ ಇಲ್ಲದಿದ್ದರಿಂದ ರಸ್ತೆಗೆ ಹರಿದ ನೀರಿನ ಪ್ರಮಾಣ ಕಡಿಮೆ ಇತ್ತು. ಈ ಬಾರಿ ವಿಪರೀತ ಮಳೆ ಆಗಿರುವುದರಿಂದ ಹೆಚ್ಚು ನೀರು ರಸ್ತೆಗೆ ಹರಿದಿದೆ. ಈ ಹಿಂದೆಯೇ ಸರಿಪಡಿಸಿದ್ದರೆ ಸಮಸ್ಯೆ ಮರುಳಿಸುತ್ತಿರಲಿಲ್ಲ’ ಎಂದು ರಸ್ತೆ ಬದಿ ಗೂಡಂಗಡಿ ನಡೆಸುತ್ತಿರುವ ಮಹೇಶ್ ಹೇಳಿದರು.

ಆಗಸ್ಟ್‌ನಲ್ಲಿ ದಾಖಲೆ ಮಳೆ

ಈ ಬಾರಿ ಆಗಸ್ಟ್ ಮಳೆ ನಗರದಲ್ಲಿ ಹೆಚ್ಚು ಅವಾಂತರ ಸೃಷ್ಟಿಸಿದೆ. ಆದರೆ, 1998ರ ಆಗಸ್ಟ್‌ನಲ್ಲಿ ಇದಕ್ಕಿಂತ ಹೆಚ್ಚಿನ ಮಳೆಯಾಗಿತ್ತು ಎಂದು ಅಂಕಿ–ಅಂಶಗಳು ಹೇಳುತ್ತಿವೆ.

1998ರ ಆಗಸ್ಟ್‌ನಲ್ಲಿ 38.71 ಸೆ. ಮೀಟರ್ ಮಳೆಯಾಗಿತ್ತು. ಈ ಬಾರಿ ಆಗಸ್ಟ್‌ 30ರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡು 36.99 ಸೆ. ಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT