ಬುಧವಾರ, ಜುಲೈ 28, 2021
28 °C

ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ: ಸುರೇಶ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರಾಥಮಿಕ ಶಾಲೆಯ ಶಿಕ್ಷಕರು ಪ್ರೌಢಶಾಲಾ ಸಹ ಶಿಕ್ಷಕ ಹುದ್ದೆಗೆ ಬಡ್ತಿ ಪಡೆಯಲು ಅನರ್ಹರೆಂದು ಕೆಎಟಿ ನೀಡಿರುವ ಆದೇಶದ ಬಗ್ಗೆ ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅಗತ್ಯವಿದೆ. ಈ ಹಂತದಲ್ಲಿ ಶಿಕ್ಷಕರು ಗೊಂದಲಕ್ಕೀಡಾಗುವುದು ಬೇಡ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ತಿಳಿಸಿದರು.

ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಪರಿಶೀಲಿಸಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು’ ಎಂದರು.

‘ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಬಡ್ತಿಗೆ ನಿಗದಿಪಡಿಸಿರುವ ಅನುಪಾತದಂತೆ ಬಡ್ತಿ ನೀಡಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶ ಇದೆ’ ಎಂದರು.

‘1ರಿಂದ 7ನೇ ತರಗತಿವರೆಗಿನ ಶಿಕ್ಷಕ ವೃಂದವನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು ಕರೆಯಲಾಗುತ್ತಿತ್ತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ನಿಗದಿಪಡಿಸುತ್ತದೆ. ಅದರ ಪ್ರಕಾರ 6ರಿಂದ 8ನೇ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆ ಹೊಂದಬೇಕಾಗಿದೆ. ಅದರಂತೆ, 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕರನ್ನು 1ರಿಂದ 7ನೇ ತರಗತಿಯ ಒಟ್ಟಾರೆ 1.88 ಲಕ್ಷ ವೃಂದ ಬಲದಲ್ಲಿಯೇ ಕಡಿತಗೊಳಿಸಿ, ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52 ಸಾವಿರ ಬಲದ 6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ, ಮೂಲ ವೃಂದದಲ್ಲಿಯೂ ಪದವಿ ಪಡೆದಿರುವ ಶಿಕ್ಷಕರಿದ್ದು, ಅವರಿಗೆ 6ರಿಂದ 8ನೇ ತರಗತಿ ವೃಂದಕ್ಕೆ ಪರೀಕ್ಷೆ ಮೂಲಕ ಸೇರಲು ಈ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಪ್ರೌಢಶಾಲಾ ಶಿಕ್ಷಕ ವೃಂದಕ್ಕೆ ಇರುವ ಬಡ್ತಿ ನಿಯಮಗಳಲ್ಲಿ 1ರಿಂದ 5ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಮತ್ತು 6ರಿಂದ 8ನೇ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದವರಿಗೆ ಎಷ್ಟು ಪ್ರಮಾಣದಲ್ಲಿ ಬಡ್ತಿ ನೀಡಬೇಕೆಂದು ನಿರ್ಧರಿಸಬೇಕಾಗಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಕೆಎಟಿ ಆದೇಶ ಹೊರಬಿದ್ದಿದೆ. ವೃಂದ ನಿಯಮಗಳಿಗೆ ತಿದ್ದುಪಡಿ ತಂದು 1ರಿಂದ 5ನೇ ತರಗತಿ ವೃಂದದಲ್ಲಿ ಅರ್ಹರಿಗೆ ಬಡ್ತಿ ನೀಡಬಹುದು ಎಂದು ಆದೇಶ ಹೇಳಿದೆ. ಜಾರಿಯಲ್ಲಿರುವ ವೃಂದ ನಿಯಮಗಳಲ್ಲಿ 1ರಿಂದ 5 ಮತ್ತು 6 ರಿಂದ 8 ಎಂಬ ಪ್ರತ್ಯೇಕತೆಯನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ 6ರಿಂದ 8 ವೃಂದದಿಂದ ಮಾತ್ರ ಬಡ್ತಿ ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪರಿಶೀಲಿಸಿ, ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಪ್ರೌಢಶಾಲೆ ಬಡ್ತಿಗೆ ಪ್ರಾಥಮಿಕ ಶಿಕ್ಷಕರು ಅರ್ಹರಲ್ಲ: ಕೆಎಟಿ
ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿರುವ ಶಿಕ್ಷಕರು ಪ್ರೌಢಶಾಲೆಯ ಗ್ರೇಡ್‌–2 ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಅಭಿಪ್ರಾಯಪಟ್ಟಿದೆ.

6ರಿಂದ 8ನೇ ತರಗತಿ ತನಕ ಬೋಧಿಸಿರುವ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಪ್ರೌಢಶಾಲೆಗೆ ಬಡ್ತಿ ಪಡೆಯಲು ಅರ್ಹರು. ಪ್ರಾಥಮಿಕ ಶಾಲೆ ಶಿಕ್ಷಕರಿಗೆ (1ರಿಂದ 5ನೇ ತರಗತಿ) ಈಗಾಗಲೇ ಬಡ್ತಿ ನೀಡಿದ್ದರೆ ರದ್ದುಪಡಿಸಬೇಕು ಎಂದು ಆದೇಶಿಸಿದೆ.

ಶಿಕ್ಷಕ ನಾರಾಯಣ ಬಾಲಪ್ಪ ಹುರುಗೇರಿ ಮತ್ತು 100ಕ್ಕೂ ಹೆಚ್ಚು ಶಿಕ್ಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್‌ ನೇತೃತ್ವದ ಪೀಠ ಈ ಆದೇಶ ನಿಡಿದೆ.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ(1ರಿಂದ 5ನೇ ತರಗತಿ) ಬೋಧನೆ ಮಾಡಿದವರಿಗೆ ‌ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅವಕಾಶ ಇದೆ. ನೇರವಾಗಿ ಪ್ರೌಢಶಾಲಾ ಸಹ ಶಿಕ್ಷಕರಾಗಲು ಅವಕಾಶ ಇಲ್ಲ. ಶಿಕ್ಷಕರ ಬಡ್ತಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದಪಡಿ ಅಗತ್ಯವಿದೆ ಎಂದು ಆದೇಶದಲ್ಲಿ ಪೀಠ ಉಲ್ಲೇಖಿಸಿದೆ. ಈಗಾಗಲೇ ಪ್ರೌಢಶಾಲೆಗೆ ಬಡ್ತಿ ಪಡೆದಿರುವ 7 ಸಾವಿರದಿಂದ 8 ಸಾವಿರ ಶಿಕ್ಷಕರಿಗೆ ಹಿಂಬಡ್ತಿಯಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು