ಗುರುವಾರ , ಜೂನ್ 24, 2021
27 °C

ಕಾವಲ್‌ಭೈರಸಂದ್ರ ಗಲಭೆ: ‘ಸಂತ್ರಸ್ತರಿಗೆ ಪಾಲಿಕೆಯಿಂದ ಪರಿಹಾರವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾವಲ್ ಭೈರಸಂದ್ರದಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಪಾಲಿಕೆಯಿಂದ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಕಾವೇರಿದ ಚರ್ಚೆ ನಡೆಯಿತು.

ಈ ವಿಚಾರ ಪ್ರಸ್ತಾಪಿಸಿದ ವಾರ್ಡ್‌ನ ಪಾಲಿಕೆ ಸದಸ್ಯೆ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ‘ಸಂತ್ರಸ್ತರಲ್ಲಿ ಕೆಲವರು ತುಂಬಾ ಬಡವರು. ಮೊದಲೇ ಕೋವಿಡ್‌ನಿಂದ ತತ್ತರಿಸಿದ್ದ ಇಲ್ಲಿನ ನಿವಾಸಿಗಳು ಈ ಗಲಭೆಯಿಂದ ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಬಿಬಿಎಂಪಿಯಿಂದ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಕೆ.ಎ.ಮುನೀಂದ್ರ ಕುಮಾರ್‌, ‘ಗಲಭೆ ನಡೆಸಿದವರಿಂದಲೇ ಪರಿಹಾರ ಕೊಡಿಸಬೇಕು’ ಎಂದರು.

ಬಿಜೆಪಿಯ ಉಮೇಶ್‌ ಶೆಟ್ಟಿ, ‘ಉತ್ತರ ಪ್ರದೇಶದ ಮಾದರಿಯಲ್ಲಿ ಪರಿಹಾರ ವಿತರಿಸುವ ವ್ಯವಸ್ಥೆ ನಮ್ಮಲ್ಲೂ ಜಾರಿಯಾಗಬೇಕು’ ಎಂದರು.

‘ನೀವು ಗಲಭೆ ನಡೆಸಿದವರಿಂದ ಬೇಕಿದ್ದರೆ ಪರಿಹಾರದ ವೆಚ್ಚ ವಸೂಲಿ ಮಾಡಿ. ಸದ್ಯ ಸಂತ್ರಸ್ತ ಕುಟುಂಬಗಳ ಪರಿಸ್ಥಿತಿ ಹೀನಾಯವಾಗಿದೆ. ಮಾನವೀಯವಾಗಿ ನಡೆದುಕೊಳ್ಳಿ. ತಪ್ಪು ಮಾಡದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ’ ಎಂದು ನೇತ್ರಾ ಒತ್ತಾಯಿಸಿದರು.

ಇದಕ್ಕೆ ಆಡಳಿತ ಪಕ್ಷದ ಸದಸ್ಯರೆಲ್ಲ ಎದ್ದುನಿಂತು ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲದ ವಾತಾವರಣ ಸೃಷ್ಟಿಯಾದಾಗ ಕೆಲವು ಹಿರಿಯ ಸದಸ್ಯರು ‘ಈ ಬಗ್ಗೆ ಇಲ್ಲಿ ಚರ್ಚೆ ಬೇಡ. ರಾಜ್ಯ ಸರ್ಕಾರವೇ ತೀರ್ಮಾನಿಸಲಿ’ ಎಂದು ಸಲಹೆ ನೀಡಿದರು.

ಮೇಯರ್‌ ಎಂ.ಗೌತಮ್‌ ಕುಮಾರ್‌, ‘ಈ ವಿಚಾರದ ತನಿಖೆ ನಡೆಯುತ್ತಿದೆ. ಪಾಲಿಕೆಯಿಂದ ಪರಿಹಾರ ನೀಡುವುದಿಲ್ಲ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದರು.

‘ಗಲಭೆಯನ್ನು ಕಾಂಗ್ರೆಸ್‌ ಖಂಡಿಸುತ್ತದೆ. ಸಭೆ ಆರಂಭವಾದಾಗಲೇ ಈ ಕೃತ್ಯವನ್ನು ಖಂಡಿಸಬೇಕಿತ್ತು’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹೇಳಿದರು.

‘ಅವಧಿ ಮುಗಿವ ಮುನ್ನ ಕಂಪ್ಯೂಟರ್‌ ಕೊಡಿಸಿ’
‘ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗೆ ಅನುಕೂಲವಾಗಲೆಂದು ಕಂಪ್ಯೂಟರ್‌ ಕೊಡಿಸುವ ಬಗ್ಗೆ ಬಿಬಿಎಂಪಿ ಕೈಗೊಂಡ ನಿರ್ಣಯ ಕಲ್ಯಾಣ ವಿಭಾಗದ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಅನುಷ್ಠಾನವಾಗಿಲ್ಲ. ದಯವಿಟ್ಟು ನಮ್ಮ ಅವಧಿ ಮುಗಿಯುವುದರೊಳಗೆ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಕೊಡಿಸಿ’ ಎಂದು ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.

‘ಕಂಪ್ಯೂಟರ್ ಕೊಡಿಸಲು ಸಾಧ್ಯವಾಗದಿದ್ದರೆ ಖಾಸಗಿ ಆನ್‌ಲೈನ್‌ ತರಗತಿ ರದ್ದುಪಡಿಸಿ’ ಎಂದೂ ಕೆಲವು ಸದಸ್ಯರು ಹೇಳಿದರು.

‘ಕಿಯೋನಿಕ್ಸ್‌ನಿಂದ ಕಂಪ್ಯೂಟರ್‌ ಖರೀದಿಸಬಹುದು. ಆದರೆ, ಅವರು ಹೇಳಿದ ದರಕ್ಕಲ್ಲ. ಕೇಂದ್ರ ಸರ್ಕಾರದ ಜೆಮ್‌ ವೆಬ್‌ಸೈಟ್‌ನಲ್ಲಿರುವ ದರ ಪಟ್ಟಿ ನೋಡಿಕೊಂಡು, ಅದರ ಪ್ರಕಾರ ಕಂಪ್ಯೂಟರ್‌ ಖರೀದಿಸಿ ಒದಗಿಸಬಹುದು’ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು