ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ಯ ಕುಡಿದು ಸತ್ತರೆಂದ ಪತ್ನಿ: ಅಪಘಾತದ ಸಾವೆಂದ ವೈದ್ಯರು

ಕೂಲಿ ಕಾರ್ಮಿಕ ಅನುಮಾನಾಸ್ಪದ ಸಾವು ಪ್ರಕರಣ * ಕೆಂಗೇರಿ ಸಂಚಾರ ಠಾಣೆಯಲ್ಲಿ ಎಫ್‌ಐಆರ್
Published 29 ಡಿಸೆಂಬರ್ 2023, 0:30 IST
Last Updated 29 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಜ್ಞಾನಭಾರತಿ ಬಳಿಯ ಉಪಕಾರ ಬಡಾವಣೆಯ ಆರ್‌ಟಿಒ ರಸ್ತೆಯಲ್ಲಿ ಇತ್ತೀಚೆಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ ದುರ್ಗಪ್ಪ ಭೋವಿ (36) ಅವರದ್ದು ಅಪಘಾತದಿಂದಾದ ಸಾವು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ನಾಗತಿ ಬಸಾಪುರದ ದುರ್ಗಪ್ಪ ಅವರು ಪತ್ನಿ ರಾಧಾ ಹಾಗೂ ನಾಲ್ವರು ಮಕ್ಕಳ ಜೊತೆ ನಗರಕ್ಕೆ ಬಂದಿದ್ದರು. ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು.

‘ಮದ್ಯವ್ಯಸನಿ ಆಗಿದ್ದ ದುರ್ಗಪ್ಪ, ಮದ್ಯ ಕುಡಿದು ಬರುವುದಾಗಿ ಪತ್ನಿಗೆ ಹೇಳಿ ಡಿ. 8ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದರು. ತಡರಾತ್ರಿಯಾದರೂ ದುರ್ಗಪ್ಪ ವಾಪಸು ಬಂದಿರಲಿಲ್ಲ. ಬೆಳಿಗ್ಗೆ ಬರಬಹುದೆಂದು ತಿಳಿದು ಪತ್ನಿ ಹಾಗೂ ಮಕ್ಕಳು ಸುಮ್ಮನಾಗಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಉಪಕಾರ ಬಡಾವಣೆಯ ಆರ್‌ಟಿಒ ರಸ್ತೆಯಲ್ಲಿರುವ ಕಾರ್ತಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ ಎದುರು ಡಿ. 9ರಂದು ಬೆಳಿಗ್ಗೆ ದುರ್ಗಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ದುರ್ಗಪ್ಪ ಮೃತಪಟ್ಟ ಬಗ್ಗೆ ಪತ್ನಿಗೆ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

‘ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ನೋಡಿದ್ದ ಪತ್ನಿ, ‘ನನ್ನ ಪತಿ ದುರ್ಗಪ್ಪ ಹಲವು ವರ್ಷಗಳಿಂದ ಮದ್ಯ ಕುಡಿಯುತ್ತಿದ್ದರು. ಅತೀ ಹೆಚ್ಚು ಮದ್ಯ ಕುಡಿದಿದ್ದರಿಂದ ಆರೋಗ್ಯ ಸಮಸ್ಯೆ ಉಂಟಾಗಿ ಮೃತಪಟ್ಟಿದ್ದಾರೆ’ ಎಂಬುದಾಗಿ ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ಪ್ರಕರಣವೂ ದಾಖಲಾಗಿತ್ತು’ ಎಂದು ಹೇಳಿದರು.

ವೈದ್ಯರ ಅನುಮಾನ, ಸಿಸಿಟಿವಿ ಕ್ಯಾಮೆರಾ ಸುಳಿವು: ‘ದುರ್ಗಪ್ಪ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ಅಪಘಾತದಿಂದ ಸಾವು ಸಂಭವಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ವರದಿ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಮೃತದೇಹ ಸಿಕ್ಕಿದ್ದ ಸ್ಥಳ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಡಿ. 9ರಂದು ರಾತ್ರಿ ಕಾರ್ತಿಕ್ ಬಾರ್ ಆ್ಯಂಡ್ ರೆಸ್ಟೊರೆಂಟ್ ಮುಂಭಾಗದಲ್ಲಿ ಹೊರಟಿದ್ದ ದುರ್ಗಪ್ಪ ಅವರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಪಘಾತದ ಬಳಿಕ ಕಾರು ನಿಲ್ಲಿಸದೇ ಚಾಲಕ ಪರಾರಿಯಾಗಿದ್ದ. ತೀವ್ರ ಗಾಯಗೊಂಡು ದುರ್ಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಹೇಳಿದರು.

‘ಅತೀ ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ದುರ್ಗಪ್ಪ ಅವರ ಸಾವಿಗೆ ಕಾರಣವಾದ ಆರೋಪದಡಿ ಚಾಲಕನ ವಿರುದ್ಧ ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT