ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಚ್‌ಬಿ ಜಮೀನು ಅಕ್ರಮ ಪರಭಾರೆ ‘ಜಾಲ’

ಜಾಲ ಹೋಬಳಿ– ಜಾಗವಿದ್ದರೂ ವಸತಿ ನಿರ್ಮಾಣಕ್ಕೆ ಬಳಸಿಕೊಳ್ಳದ ಕರ್ನಾಟಕ ಗೃಹ ಮಂಡಳಿ
Last Updated 6 ಡಿಸೆಂಬರ್ 2020, 20:27 IST
ಅಕ್ಷರ ಗಾತ್ರ

ಬೆಂಗಳೂರು: ವರುಷಗಳು ಉರುಳಿದಂತೆ ರಾಜಧಾನಿಯು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಪರಿಧಿ ವಿಸ್ತರಿಸಿಕೊಳ್ಳುತ್ತಿರುವ ಈ ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ವಸತಿಗಳನ್ನು ಕಲ್ಪಿಸುವುದು ಸವಾಲಿನ ಕೆಲಸ. ಬಡವರಿಗೆ, ಮಧ್ಯಮ ವರ್ಗದವರಿಗೆ ಕೈಗೆಟಕುದ ದರದಲ್ಲಿ ವಸತಿ ನಿರ್ಮಿಸಿಕೊಡಲೆಂದೇ ಸ್ಥಾಪಿಸಲಾದ ಕರ್ನಾಟಕ ಗೃಹಮಂಡಳಿ (ಕೆಎಚ್‌ಬಿ) ಹತ್ತಾರು ಕಡೆ ವಸತಿ ಕಾಲೊನಿಗಳನ್ನು ನಿರ್ಮಿಸಿದೆ. ಈಗಲೂ ನಿರ್ಮಿಸುತ್ತಲೇ ಇದೆ.

ಜಮೀನಿನ ಬೆಲೆ ಗಗನಕ್ಕೇರಿರುವ ಈ ಹೊತ್ತಿನಲ್ಲಿ ವಸತಿ ಉದ್ದೇಶಕ್ಕೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಅಚ್ಚರಿ ಎಂದರೆ, ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ಮೀನಕುಂಟೆ ಹಾಗೂ ಚಿಕ್ಕಜಾಲ ಗ್ರಾಮಗಳಲ್ಲಿ 95 ಎಕರೆ 13 ಗುಂಟೆ ಜಾಗವನ್ನು ಮಂಡಳಿಯು ವಸತಿ ಯೋಜನೆಯ ಉದ್ದೇಶಕ್ಕೆ 19 ವರ್ಷಗಳ ಹಿಂದೆಯೇ ಸ್ವಾಧೀನಪಡಿಸಿಕೊಂಡಿದ್ದರೂ ಅದನ್ನು ವಸತಿ ನಿರ್ಮಾಣದ ಉದ್ದೇಶಕ್ಕೆ ಬಳಸಿಕೊಳ್ಳಲು ಮೀನಮೇಷ ಎಣಿಸುತ್ತಿದೆ.

ಜಾಲ ಹೋಬಳಿಯ ಈ ಎರಡು ಗ್ರಾಮಗಳಲ್ಲಿಕೆಎಚ್‌ಬಿ ವಸತಿ ಕಾಲೊನಿ ಅಭಿವೃದ್ಧಿಪಡಿಸಲು 2001ರ ಏ 19ರಂದು ಕರ್ನಾಟಕ ಭೂಸ್ವಾಧೀನ ಕಾಯ್ದೆ 4 (1)ರ ಅನ್ವಯ ಒಟ್ಟು 95–13 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಅದೇ ವರ್ಷ ಮೇ 17ರಂದು ಕರ್ನಾಟಕ ಭೂಸ್ವಾಧೀನ ಕಾಯ್ದೆಯ 6 (1) ಅಡಿ ರಾಜ್ಯಪತ್ರದಲ್ಲಿ ಅಧಿಸೂಚನೆ ಪ್ರಕಟಿಸುವ ಮೂಲಕ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗಷ್ಟೇ ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು. ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಈ ಜಾಗದ ಬೆಲೆ ಬಳಿಕ ಗಗನಕ್ಕೇರಿತ್ತು. ಈ ಜಾಗದ ಮೇಲೆ ಕಣ್ಣು ಹಾಕಿದ್ದ ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದರು.

ಪ್ರಭಾವಿಗಳ ಒತ್ತಡಕ್ಕೆ ಮಣಿದ ಕೆಎಚ್‌ಬಿ, ಒಟ್ಟು 95–13 ಎಕರೆಯಲ್ಲಿ 41 ಎಕರೆ 12 ಗುಂಟೆ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ ಗೃಹಮಂಡಳಿ ಪ್ರಸ್ತಾವ ಸಿದ್ಧಪಡಿಸಿತ್ತು. ಇನ್ನುಳಿದ 54–01 ಎಕರೆ ಪ್ರದೇಶದಲ್ಲಿ ಕೆಲವರು ಮನೆ ಕಟ್ಟಿಕೊಂಡಿರುವುದರಿಂದ ಅದರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವ ಬಗ್ಗೆ 2004ರ ಫೆ 12ರಂದು ನಡೆದಿದ್ದಕೆಎಚ್‌ಬಿಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ವಸತಿ ಇಲಾಖೆ ಮೂಲಕ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ 2004ರ ಮಾರ್ಚ್‌ 11ರಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕೆಎಚ್‌ಬಿ ಪತ್ರ ಬರೆದಿತ್ತು. ಆದರೆ, ಸರ್ಕಾರ ಈ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಪ್ರಸ್ತಾಪಕ್ಕೆ ಸೊಪ್ಪು ಹಾಕಲಿಲ್ಲ. ಈ ಬಗ್ಗೆ ನಿರ್ಣಯ ಕೈಗೊಳ್ಳಲಿಲ್ಲ.

ಯಾವುದೇ ಜಮೀನನ್ನು ಸರ್ಕಾರ ನಿರ್ದಿಷ್ಟ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡರೆ ಅದನ್ನು ಪರಭಾರೆ ಅಥವಾ ಮ್ಯುಟೇಷನ್‌ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಭೂಸ್ವಾಧೀನಕ್ಕೆ ಕರ್ನಾಟಕ ಭೂಸ್ವಾಧೀನ ಕಾಯ್ದೆಯ 6 (1) ಅಡಿ ಅಧಿಸೂಚನೆ ಪ್ರಕಟವಾದ ಬಳಿಕ ಈ ಬಗ್ಗೆ ಜಮೀನಿನ ಪಹಣಿ ದಾಖಲೆಗಳಲ್ಲಿ ಉಲ್ಲೇಖಿಸಲು ಸಂಬಂಧಪಟ್ಟ ತಹಶೀಲ್ದಾರ್‌ಗಳು ಕ್ರಮ ಕೈಗೊಳ್ಳಬೇಕು. ಆದರೆ, ತಹಶೀಲ್ದಾರರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ತನ್ಮೂಲಕ ಈ ಜಮೀನುಗಳ ಅಕ್ರಮವ ಪರಭಾರೆಗೆ ಅವಕಾಶ ಮಾಡಿಕೊಟ್ಟಿದ್ದರು. ಕೆಎಚ್‌ಬಿ ಸ್ವಾಧೀನ ಪಡಿಸಿಕೊಂಡಿರುವ 95– 13 ಎಕರೆ ಜಮೀನಿನಲ್ಲಿ 40 ಎಕರೆಗಳಿಗೂ ಹೆಚ್ಚು ಜಮೀನುಗಳನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳೇ ಈ ಜಾಗವನ್ನು ಖರೀದಿಸಿದ್ದಾರೆ. ಜಮೀನಿನ ದಾಖಲೆಗಳನ್ನು ಅವರ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಲು ತಹಶೀಲ್ದಾರ್‌ಗಳು, ವಿಶೇಷ ತಹಶೀಲ್ದಾರ್‌ಗಳು, ಶಿರಸ್ತೆದಾರರು ಹಾಗೂ ವಿಷಯ ನಿರ್ವಾಹಕರೆಲ್ಲರೂ ಶಾಮೀಲಾಗಿದ್ದಾರೆ.

ಕೆಎಚ್‌ಬಿ ಸ್ವಾಧೀನಪಡಿಸಿಕೊಂಡ ಈ ಜಾಗದಲ್ಲಿ ಕೆಲವರು ಜಮೀನು ಪರಭಾರೆ ಮಾಡುತ್ತಿರುವ ಬಗ್ಗೆ 2008ರಲ್ಲೇ ಪುಕಾರುಗಳೆದ್ದವು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದರು. ಅವರು ಉಪನೋಂದಣಾಧಿಕಾರಿ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದಾಗ ಅನೇಕ ಜಮೀನುಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ದೃಢಪಟ್ಟಿತು. ಈ ಅಕ್ರಮಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿದ್ದ ಪ್ರಾದೇಶಿಕ ಆಯುಕ್ತರು 2009ರ ಆ. 9ರಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು. ಎಂಟು ತಹಶೀಲ್ದಾರ್‌ಗಳು, 14 ವಿಶೇಷ ತಹಶೀಲ್ದಾರ್‌ಗಳು, ಆರು ಹಕ್ಕುದಾಖಲೆ ಶಿರಸ್ತೇದಾರರು, ಐವರು ವಿಷಯ ನಿರ್ವಾಹಕರು ಭೂಸ್ವಾಧೀನದ ಬಗ್ಗೆ ಭೂದಾಖಲೆಗಳಲ್ಲಿ ಉಲ್ಲೇಖ ಆಗದಿರುವುದಕ್ಕೆ ನೇರ ಹೊಣೆಗಾರರು ಎಂದು ಉಲ್ಲೇಖಿಸಿದ್ದರು.

ಮೀನಕುಂಟೆ ಗ್ರಾಮದಲ್ಲಿ 9 ಎಕರೆ 34 ಗುಂಟೆ ಹಾಗೂ ಚಿಕ್ಕಜಾಲ ಗ್ರಾಮದಲ್ಲಿ 26 ಎಕರೆ 27 ಗುಂಟೆ ಜಾಗ ಸೇರಿ ಒಟ್ಟು 36 ಎಕರೆ 22 ಗುಂಟೆ ಜಾಗವು ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡ ಬಳಿಕ ಮಾರಾಟವಾಗಿದೆ. ಒಟ್ಟು 20 ಮಂದಿ ಜಮೀನು ಖರೀದಿಸಿದ್ದಾರೆ. ಜಮೀನು ಪರಭಾರೆ ಮಾಡಿ ಅಕ್ರಮವಾಗಿ ಮ್ಯುಟೇಷನ್‌ ಮಾಡಿರುವ ಕೃತ್ಯದ ಹಿಂದೆ ನಾಲ್ವರು ಕಂದಾಯ ನಿರೀಕ್ಷಕರು, ಆರು ಗ್ರಾಮ ಲೆಕ್ಕಿಗರು ಹಾಗೂ ಆರು ಹಕ್ಕುದಾಖಲೆ ಶಿರಸ್ತೆದಾರರು ಶಾಮೀಲಾಗಿದ್ದಾರೆ. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಹುದು ಎಂದು ಪ್ರಾದೇಶಿಕ ಆಯುಕ್ತರು ವರದಿಯಲ್ಲಿ ತಿಳಿಸಿದ್ದರು. ಕೆಎಚ್‌ಬಿ ಜಮೀನಿನ ಅಕ್ರಮ ಪರಭಾರೆ ಬಗ್ಗೆ ಪ್ರಾದೇಶಿಕ ಆಯುಕ್ತರು ವರದಿ ಸಲ್ಲಿಸಿ 11 ವರ್ಷಗಳೇ ಕಳೆದಿವೆ. ಆದರೂ ಈಗಲೂ ಅಕ್ರಮ ಪರಭಾರೆ ಮುಂದುವರಿದಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿಯ ಮುಖಂಡ
ಕೆ.ಎನ್‌.ಚಕ್ರಪಾಣಿ ಅವರು ವಸತಿ ಸಚಿವ ವಿ.ಸೋಮಣ್ಣ ಅವರಿಗೆ 2020ರ ನವೆಂಬರ್‌ 20ರಂದು ದಾಖಲೆಗಳ ಸಮೇತ ಪತ್ರ ಬರೆದಿದ್ದಾರೆ.

ನಗರದಲ್ಲಿ ವಸತಿ ಬೇಡಿಕೆ ಹೆಚ್ಚುತ್ತಲೇ ಇದೆ. ಸೂಕ್ತ ಜಾಗ ಲಭ್ಯವಿಲ್ಲದ ಕಾರಣ ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಗೃಹಮಂಡಳಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸ್ವಂತ ಸೂರು ಹೊಂದುವ ಕನಸನ್ನು ಈಡೇರಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಗೃಹಮಂಡಳಿ ತನ್ನ ಪಾಲಿಗೆ ಇದ್ದೂ ಇಲ್ಲದಂತಾಗಿರುವ 95–13 ಎಕರೆ ಜಾಗವನ್ನು ಸುಪರ್ದಿಗೆ ಪಡೆದು, ಬಡವರಿಗೆ ವಸತಿ ಒದಗಿಸಲು ಕ್ರಮ ಕೈಗೊಳ್ಳಲಿದೆಯೇ? ಸರ್ಕಾರಇನ್ನಾದರೂ ಈ ಬಗ್ಗೆ ಮುತುವರ್ಜಿ ವಹಿಸಲಿದೆಯೇ ಕಾದು ನೋಡಬೇಕಿದೆ.

‘ವ್ಯಾಜ್ಯ ಇತ್ಯರ್ಥಗೊಂಡ ಬಳಿಕ ಯೋಜನೆ’

‘ಚಿಕ್ಕಜಾಲ ಮತ್ತು ಮೀನಕುಂಟೆ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಹಾಗಾಗಿ ಈ ಜಾಗದಲ್ಲಿ ವಸತಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮಂಡಳಿಯ ಪರವಾಗಿಯೇ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಈ ವ್ಯಾಜ್ಯ ಇತ್ಯರ್ಥಗೊಂಡ ಬಳಿಕ ಇಲ್ಲಿ ವಸತಿ ಯೋಜನೆಗಳನ್ನು ಅಭಿವೃದ್ಧಿಪಡಿಸಲಿದ್ದೇವೆ’ ಎಂದು ಕೆಎಚ್‌ಬಿ ಆಯುಕ್ತರಾದ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

₹ 5 ಸಾವಿರ ಕೋಟಿ ಬೆಲೆಬಾಳುವ ಭೂಮಿ

ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ಪ್ರದೇಶದಲ್ಲಿ ಎಕರೆಗೆ ₹ 50 ಕೋಟಿಗಳಷ್ಟು ಮಾರುಕಟ್ಟೆ ಮೌಲ್ಯವಿದೆ. 95 ಎಕರೆ ಭೂಮಿ ಏನಿಲ್ಲವೆಂದರೂ ₹ 5 ಸಾವಿರ ಕೋಟಿ ಬೆಲೆಬಾಳುತ್ತದೆ. ಚಿಕ್ಕ ಜಾಲ ಮತ್ತು ಮೀನಕುಂಟೆ ಗ್ರಾಮಗಳಲ್ಲಿ ಜಾಗ ಖರೀದಿಸಿದ ಪ್ರಭಾವಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇದಾಗಿ 15 ವರ್ಷಗಳಾದರೂ ಪ್ರಕರಣ ಇತ್ಯರ್ಥಗೊಂಡಿಲ್ಲ. ಗೃಹಮಂಡಳಿಗೆ ಸೇರಿದ ಜಾಗವನ್ನು ರಕ್ಷಿಸಿಕೊಳ್ಳಬೇಕಾದ ಮಂಡಳಿಯ ವಕೀಲರ ತಂಡವೂ ಈ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ. ಗೃಹಮಂಡಳಿಯ ಹಿರಿಯ ಅಧಿಕಾರಿಗಳು, ಭೂಸ್ವಾಧೀನ ಅಧಿಕಾರಿಗಳೂ ಮಂಡಳಿಯ ಜಾಗ ಉಳಿಸಿಕೊಂಡು ಅಲ್ಲಿ ವಸತಿ ಬಡಾವಣೆ ನಿರ್ಮಿಸುವ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ದೂರುಗಳಿವೆ.

ತಪ್ಪಿತಸ್ಥರ ವಿರುದ್ಧ ಕ್ರಮವಿಲ್ಲ

ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲು ಸಹಕರಿಸಿದ್ದ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಹಕ್ಕುದಾಖಲೆ ಶಿರಸ್ತೇದಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವರಾಗಿ ಕರುಣಾಕರ ರೆಡ್ಡಿ ಅವರು 2010ರಲ್ಲೇ ಸೂಚಿಸಿದ್ದರು. ಆದರೂ ಅವರ ಆದೇಶ ಜಾರಿ ಆಗಿರಲಿಲ್ಲ. ಚಿಕ್ಕಜಾಲ, ಮೀನಕುಂಟೆ ಗ್ರಾಮಗಳಲ್ಲಿ ಜಾಗ ಖರೀದಿಸಿದ್ದವರ ಪ್ರಭಾವ ಅಷ್ಟರಮಟ್ಟಿಗೆ ಕೆಲಸ ಮಾಡಿತ್ತು.

ಸಿಸಿಬಿ ತನಿಖೆಗೆ ಆಗ್ರಹ

‘ಐದು ಸಾವಿರ ಕೋಟಿ ಬೆಲೆಬಾಳುವ ಸಾರ್ವಜನಿಕ ಆಸ್ತಿ ಕಬಳಿಕೆ ಆಗಿದೆ. ಒಮ್ಮೆ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಾಗವನ್ನು ಕರ್ನಾಟಕ ಭೂ ವರ್ಗಾವಣೆ ತಡೆ ಕಾಯ್ದೆ 1991ರ ಪ್ರಕಾರ ಪರಭಾರೆ ಮಾಡುವಂತಿಲ್ಲ. ಪರಭಾರೆ ಮಾಡಿದರೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಈ ಪ್ರಕರಣದಲ್ಲಿ ಕೆಎಚ್‌ಬಿ ಅಧಿಕಾರಿಗಳು ಭೂಗಳ್ಳರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಲ್ಲ. ಮಂಡಳಿಯ ವಕೀಲರ ತಂಡವು ಭೂಗಳ್ಳರ ಜತೆಗೆ ಕೈಜೋಡಿಸಿದೆ. ಮೊದಲು ವಕೀಲರ ತಂಡವನ್ನು ಬದಲಿಸಬೇಕು’.

‘ಪರಭಾರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 2008ರಲ್ಲಿ ತನಿಖೆಗೆ ಆದೇಶಿಸಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಪ್ರಭಾವಿಗಳೇ ಇಲ್ಲಿ ಭೂಕಬಳಿಕೆ ಮಾಡಿದ್ದಾರೆ. ಕ್ಷೇತ್ರದ ರಾಜಕಾರಣವನ್ನು ನಿಯಂತ್ರಣ ಮಾಡುವವರು ಅವರೇ. ಸಿಸಿಬಿಯಿಂದ ತನಿಖೆ ಮಾಡಿಸಬೇಕು ಹಾಗೂ ಭೂಗಳ್ಳರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಇಲ್ಲಿ ಭೂಮಿ ಬಿಟ್ಟು ಕೊಟ್ಟಿರುವ ರೈತರಿಗೆ ಈಗಿನ ಮಾರುಕಟ್ಟೆ ದರದ ಪ್ರಕಾರ ಪರಿಹಾರ ನೀಡಬೇಕು’.

- ಕೆ.ಎನ್‌.ಚಕ್ರಪಾಣಿ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT