ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KIADB ನಿವೇಶನ ಹಂಚಿಕೆ ಮಾರ್ಗಸೂಚಿ ಪರಿಷ್ಕರಣೆ: ಗುತ್ತಿಗೆ ಅವಧಿ 10 ವರ್ಷಕ್ಕೆ

Published 15 ನವೆಂಬರ್ 2023, 15:31 IST
Last Updated 15 ನವೆಂಬರ್ 2023, 15:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ನಾಗರಿಕ ಸೌಲಭ್ಯಕ್ಕೆ (ಸಿ.ಎ) ಮೀಸಲಿರಿಸಿದ ನಿವೇಶನಗಳನ್ನು 99 ವರ್ಷಗಳ ಗುತ್ತಿಗೆ ಬದಲಿಗೆ 10 ವರ್ಷಗಳ ಅವಧಿಯ ಗುತ್ತಿಗೆ ಕಂ ಕ್ರಯದ ಆಧಾರದಲ್ಲಿ ಹಂಚಿಕೆ ಮಾಡಲು ಆದೇಶ ಹೊರಡಿಸಲಾಗಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 10ರಂದು ನಡೆದ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿ.ಎ ನಿವೇಶನಗಳ ಹಂಚಿಕೆ ಮಾರ್ಗಸೂಚಿ ಬದಲಾವಣೆಗೆ ನಿರ್ಧರಿಸಲಾಗಿತ್ತು. ಅದರ ಅನುಸಾರ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ನವೆಂಬರ್‌ 10ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶ ಹೊರಡಿಸಿದೆ.

ಕೆಐಎಡಿಬಿಯ ಎಲ್ಲ ಕೈಗಾರಿಕಾ ಪ್ರದೇಶಗಳಲ್ಲಿ ಸಿ.ಎ ನಿವೇಶನಗಳನ್ನು ಕಾಯ್ದಿರಿಸಬೇಕು. ಸಿ.ಎ ನಿವೇಶನಗಳು ಲಭ್ಯವಿರುವ ಕುರಿತು ಕನ್ನಡ ಮತ್ತು ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. ನಿವೇಶನಗಳ ಸ್ಥಳ, ಮೀಸಲಿರಿಸಿದ ಉದ್ದೇಶ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ, ಹಂಚಿಕೆಯ ಮಾನದಂಡಗಳ ಕುರಿತು ಜಾಹೀರಾತಿನಲ್ಲಿ ಸ್ಪಷ್ಟ ಮಾಹಿತಿ ಒದಗಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯ ಅಧ್ಯಕ್ಷತೆಯ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ರಾಜ್ಯ ಮಟ್ಟದ ಏಕಗವಾಕ್ಷಿ ವಿಲೇವಾರಿ ಸಮಿತಿಯ ಮುಂದೆ ಮಂಡಿಸಬೇಕು. ಸಮಿತಿಯು ಆಯ್ಕೆ ಮಾಡಿದವರಿಗೆ ಹತ್ತು ವರ್ಷಗಳ ಅವಧಿಗೆ ಸಿ.ಎ ನಿವೇಶನಗಳನ್ನು ಗುತ್ತಿಗೆ ಕಂ ಕ್ರಯದ ಆಧಾರದಲ್ಲಿ ಹಂಚಿಕೆ ಮಾಡಬೇಕು. ಅದರ ಅನ್ವಯ ನಿಗದಿತ ಕಾಲಾವಧಿಯ ಬಳಿಕ ಶುದ್ಧ ಕ್ರಯಪತ್ರ ಮಾಡಿಕೊಡಬೇಕು. ಹಾಲಿ ಅಸ್ತಿತ್ವದಲ್ಲಿರುವ ನಿವೇಶನಗಳ ಗುತ್ತಿಗೆಗೂ ಈ ಮಾರ್ಗಸೂಚಿ ಅನ್ವಯಿಸಲಿದೆ ಎಂದು ಇಲಾಖೆ ಹೇಳಿದೆ.

ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಆವಿಷ್ಕಾರಕ್ಕೆ ಸಂಬಂಧಿಸಿದ ಅತ್ಯುನ್ನತ ಸಂಸ್ಥೆಗಳು, ತಾಂತ್ರಿಕ ಸಂಸ್ಥೆಗಳು, ಕೌಶಲಾಭಿವೃದ್ಧಿ ತರಬೇತಿ, ತರಬೇತಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರದ ಇಲಾಖೆ ಮತ್ತು ಸಾರ್ವಜನಿಕ ಉದ್ದಿಮೆಗಳ ಕಚೇರಿಗಳು, ಬ್ಯಾಂಕ್‌, ಆಸ್ಪತ್ರೆ, ಔಷಧಾಲಯ, ಹೋಟೆಲ್‌, ಪೆಟ್ರೋಲ್‌ ಬಂಕ್‌, ಗ್ಯಾಸ್‌ ಬಂಕ್‌, ಕ್ಯಾಂಟೀನ್‌ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಪೂರಕವಾದ ವಸತಿ ಯೋಜನೆಗಳಿಗೆ ಸಿ.ಎ ನಿವೇಶನ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿ ಪ್ರತ್ಯೇಕ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT