ಬುಧವಾರ, ಮಾರ್ಚ್ 29, 2023
23 °C

ನಕಲಿ ದಾಖಲೆಗೆ ಪರಿಹಾರ: ಕೆಐಎಡಿಬಿ ಅಧಿಕಾರಿಗಳು ಸೇರಿ ಐವರ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾಖಲೆಗಳನ್ನು ಪರಿಶೀಲಿಸದೆ ₹4.06 ಕೋಟಿ ಪರಿಹಾರ ವಿತರಿಸಿದ ಆರೋಪದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಧಿಕಾರಿಗಳು ಸೇರಿ ಐವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಮಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಬೆನ್ನಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 83/2ರ ಜಾಗದ ವ್ಯಾಜ್ಯ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿತ್ತು. ಆದರೆ, ಆ ಜಾಗ ಬಾಡಿಗೆಗೆ ಪಡೆದಿದ್ದ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದು ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ಇದೇ ಸರ್ವೆ ನಂಬರ್‌ನಲ್ಲಿ 142.56 ಚದರ ಮೀಟರ್ ಜಾಗವನ್ನು ಮೆಟ್ರೊ ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ವ್ಯಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವುದರಿಂದ ಪರಿಹಾರ ವಿತರಣೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿಗೆ(ಮೆಟ್ರೊ) ಬಿಎಂಆರ್‌ಸಿಎಲ್ ಪ್ರಧಾನ ವ್ಯವಸ್ಥಾಪಕ(ಭೂಸ್ವಾಧೀನ) ಎಂ.ಎಸ್.ಚನ್ನಪ್ಪಗೌಡರ್ ಪತ್ರ ಬರೆದಿದ್ದರು.

ಪರಿಹಾರ ಪಡೆದಿದ್ದಾರೆ ಎನ್ನಲಾದ ತಿರುಮಲೇಶ್‌, ಮೊಹಮ್ಮದ್ ಮಜೇಕ್ ಅಹಮದ್, ಬಿ.ಎಂ.ಉದಯ್, ಬಿ.ಎಂ.ವಿನಯ್ ಅವರನ್ನು ಆರೋಪಿಗಳನ್ನಾಗಿಸಿ ಹಲಸೂರು ಗೇಟ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಐಎಡಿಬಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪರಿಹಾರ ಪಡೆದು ಮೋಸ ಮಾಡಲಾಗಿದೆ’ ಎಂದು ಎಂ.ಯತೀಶ್‌ ನೀಡಿರುವ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

‘ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೂ ಇದೇ ಸರ್ವೆ ನಂಬರ್‌ನ ಜಾಗವನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ವ್ಯಾಜ್ಯ ಇರುವುದರಿಂದ ಇನ್ನೂ ಪರಿಹಾರ ವಿತರಣೆ ಮಾಡಿಲ್ಲ. ಇದೆಲ್ಲವೂ ಗೊತ್ತಿದ್ದರೂ, ಕೆಐಎಡಿಬಿ ಅಧಿಕಾರಿಗಳು ಪರಿಹಾರ ವಿತರಣೆ ಮಾಡಿದ್ದಾರೆ’ ಎಂದು ದೂರುದಾರ ಯತೀಶ್ ದೂರುತ್ತಾರೆ.

‘ಈಗಾಗಲೇ ಪರಿಹಾರ ಪಡೆದಿರುವವರು ಬಾಡಿಗೆಗೆ ಇರುವ ಜಾಗಕ್ಕೂ ಮೆಟ್ರೊ ರೈಲು ಮಾರ್ಗಕ್ಕೂ ಸಂಬಂಧವೇ ಇಲ್ಲ. ರಸ್ತೆಯ ಒಂದು ಬದಿಯಲ್ಲಿ ಮೆಟ್ರೊ ರೈಲು ಮಾರ್ಗವಿದ್ದರೆ, ಇನ್ನೊಂದು ಬದಿಯಲ್ಲಿ ಈ ಶೆಡ್‌ಗಳಿವೆ. ಆದರೂ, ಪರಿಹಾರ ನೀಡಲಾಗಿದೆ’ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ(ಮೆಟ್ರೊ) ಪ್ರಸನ್ನಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು