ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಡ್ನಿ’ ನೆಪದಲ್ಲಿ ವಂಚಿಸುತ್ತಿದ್ದ ಜಾಲ ಬಲೆಗೆ

ನಕಲಿ ಜಾಲತಾಣ ತೆರೆದು ಕೃತ್ಯ * ನೈಜೀರಿಯಾ, ಸುಡಾನ್ ಪ್ರಜೆಗಳು ಸೇರಿ ಆರು ಮಂದಿ ಬಂಧನ
Last Updated 9 ಫೆಬ್ರುವರಿ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕಿಡ್ನಿ ಮಾರಾಟ ಹಾಗೂ ಖರೀದಿ ನೆಪದಲ್ಲಿ 300ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೂರ್ವ ವಿಭಾಗದ ಪೊಲೀಸರು, ನೈಜೀರಿಯಾ ಹಾಗೂ ಸುಡಾನ್ ಪ್ರಜೆಗಳು ಸೇರಿ ಆರು ಮಂದಿಯನ್ನು ಸೆರೆ ಹಿಡಿದಿದ್ದಾರೆ.

‘ಸುಡಾನ್‌ನ ಮೊಹಮ್ಮದ್ ಅಹ್ಮದ್ ಇಸ್ಮಾಯಿಲ್ (24),ಮಾರ್ವನ್ ಫೈಸಲ್ (27), ನೈಜೀರಿಯಾದ ಈಸೆನೆ ಲವ್ಲಿ (29), ತ್ರಿಪುರಾ ರಾಜ್ಯದ ಹರೇಂದ್ರ (25), ಕಮಿ ರಾಜನ್ (25) ಹಾಗೂ ಜಟಿನ್‌ಕುಮಾರ್ (25) ಬಂಧಿತರು.

‘ಪ್ರತಿಷ್ಠಿತ ಆಸ್ಪತ್ರೆ ಹಾಗೂ ವೈದ್ಯರ ಹೆಸರು ಬಳಸಿಕೊಂಡು ಆರೋಪಿಗಳು ನಕಲಿ ಜಾಲತಾಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆದಿದ್ದರು. ‘ಕಿಡ್ನಿ ಮಾರಾಟಕ್ಕಿದೆ’ ಹಾಗೂ ’ಕಿಡ್ನಿ ಖರೀದಿಸಲಾಗುವುದು’ ಎಂಬ ಸಂದೇಶವನ್ನು ಇ–ಮೇಲ್, ಫೇಸ್‌ಬುಕ್‌, ವಾಟ್ಸ್‌ಆ್ಯಪ್ ಹಾಗೂ ಎಸ್‌ಎಂಎಸ್‌ ಮೂಲಕ ಜನರಿಗೆ ಕಳುಹಿಸುತ್ತಿದ್ದರು. ತಮ್ಮನ್ನು ಸಂಪರ್ಕಿಸುತ್ತಿದ್ದ ಜನರಿಂದ ಹಣ ಪಡೆದು ವಂಚಿಸುತ್ತಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

’ಬಾಣಸವಾಡಿಯ ಸ್ಪೆಷಲಿಸ್ಟ್ ಆಸ್ಪತ್ರೆಯ ಡಾ. ಶಫೀಕ್ ಎಂಬುವರ ಹೆಸರಿನಲ್ಲೂ ಜನರಿಗೆ ಸಂದೇಶ ಕಳುಹಿಸಿ ಆರೋಪಿಗಳು ಕೃತ್ಯ ಎಸಗಿದ್ದರು. ಆ ಸಂಬಂಧ ಶಫೀಕ್‌ ದೂರು ನೀಡಿದ್ದರು. ಅದರ ತನಿಖೆ ಕೈಗೊಂಡಾಗಲೇ ಆರೋಪಿಗಳ ಕೃತ್ಯ ಬಯಲಾಯಿತು’ ಎಂದರು.

ಎರಡ್ಮೂರು ವರ್ಷಗಳಿಂದ ಕೃತ್ಯ:‘ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ನೈಜೀರಿಯಾ ಹಾಗೂ ಸುಡಾನ್ ಪ್ರಜೆಗಳು ಹೆಗಡೆ ನಗರ, ಬಾಬುಸಾಪಾಳ್ಯ ಹಾಗೂ ಕಮ್ಮನಹಳ್ಳಿಯಲ್ಲಿ ಉಳಿದಿದ್ದರು. ಅವರಿಗೆ ಬನ್ನೇರುಘಟ್ಟ ಬಿಡಿಎ ಲೇಔಟ್ ಹಾಗೂ ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿದ್ದ ತ್ರಿಪುರಾದವರ ಪರಿಚಯ ಆಗಿತ್ತು. ಎಲ್ಲರೂ ಗ್ಯಾಂಗ್ ಕಟ್ಟಿಕೊಂಡು 2–3 ವರ್ಷಗಳಿಂದ ಕೃತ್ಯ ಎಸಗಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಪೈಕಿ ಯಾರೊಬ್ಬರೂ ಕಿಡ್ನಿ ನೀಡುವವರು ಇರಲಿಲ್ಲ. ಕಿಡ್ನಿ ಖರೀದಿಸುವವರೂ ಇರಲಿಲ್ಲ. ಅಷ್ಟಾದರೂ ಅವರು ‘ಕಿಡ್ನಿ ಬೇಕಾಗಿದೆ ಹಾಗೂ ಕಿಡ್ನಿ ಮಾರಾಟಕ್ಕಿದೆ’ ಎಂಬ ಜಾಹೀರಾತುಗಳನ್ನು ಹರಿಬಿಡುತ್ತಿದ್ದರು. ವಂಚನೆಯಿಂದ ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು’ ಎಂದು ಅವರು ವಿವರಿಸಿದರು.

ವಿಮೆ, ನೋಂದಣಿ ಶುಲ್ಕ: ‘ಕಿಡ್ನಿ ಖರೀದಿಸುವ ಹಾಗೂ ಮಾರುವ ಇಚ್ಛೆಯುಳ್ಳ 300ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಸಂಪರ್ಕಿಸಿದ್ದರು. ಶಸ್ತ್ರಚಿಕಿತ್ಸೆ ವೇಳೆ ಕಿಡ್ನಿಗೆ ಧಕ್ಕೆಯಾಗುವ ಸಾಧ್ಯತೆ ಇರುವುದಾಗಿ ಹೇಳಿದ್ದ ಆರೋಪಿಗಳು, ಅದಕ್ಕೆ ವಿಮೆ ಮಾಡಿಸಬೇಕೆಂದು ಜನರಿಂದ ಹಣ ಪಡೆದಿದ್ದರು. ಜೊತೆಗೆ, ನೋಂದಣಿ ಶುಲ್ಕವಾಗಿ ಸಾವಿರಾರು ರೂಪಾಯಿ ಸಂಗ್ರಹಿಸಿದ್ದರು’ ಎಂದು ಪೊಲೀಸರು ಹೇಳಿದರು.

ತ್ರಿಪುರಾದವರ ಹೆಸರಿನಲ್ಲಿ ಬ್ಯಾಂಕ್ ಖಾತೆ

‘ಜನರಿಂದ ಹಣವನ್ನು ಜಮೆ ಮಾಡಿಸಿಕೊಳ್ಳಲು ಆರೋಪಿಗಳು, ತ್ರಿಪುರ ನಿವಾಸಿಗಳ ಹೆಸರಿನಲ್ಲಿ ಹಲವು ಬ್ಯಾಂಕ್‌ಗಳನ್ನು ಖಾತೆಗಳನ್ನು ತೆರೆದಿದ್ದರು. ಆ ಖಾತೆಗೆ ಹಣ ಜಮೆ ಆಗುತ್ತಿದ್ದಂತೆ, ತಮ್ಮ ವೈಯಕ್ತಿಕ ಖಾತೆಗೆ ಹಣ ವರ್ಗಾಯಿಸಿಕೊಂಡು ಡ್ರಾ ಮಾಡಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಮತ್ತಷ್ಟು ಪ್ರಕರಣಗಳಲ್ಲಿ ಭಾಗಿ

‘ಕೊಲಂಬಿಯಾ ಏಷಿಯಾ, ಫೋರ್ಟಿಸ್‌ ಸೇರಿದಂತೆ ರಾಜ್ಯದ ಹಲವು ಆಸ್ಪತ್ರೆಗಳ ಕಿಡ್ನಿ ಕಸಿ ಸಂಯೋಜನೆ ವೈದ್ಯರ ಹೆಸರಿನಲ್ಲೂ ಜನರನ್ನು ವಂಚಿಸಲಾಗಿದೆ. ಈ ಬಗ್ಗೆ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಅದರಲ್ಲೂ ಆರೋಪಿಗಳು ಭಾಗಿಯಾಗಿರುವ ಶಂಕೆ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರು ನೀಡಿ

ಕಿಡ್ನಿ ಮಾರಾಟ ಹಾಗೂ ಖರೀದಿ ನೆಪದಲ್ಲಿ ಯಾರಿಗಾದರೂ ವಂಚನೆ ಆಗಿದ್ದರೆ ದೂರು ನೀಡಬಹುದು

080– 22942552, 25453103(ಬಾಣಸವಡಿ ಠಾಣೆ) ಹಾಗೂ ನಿಯಂತ್ರಣ ಕೊಠಡಿ–100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT