ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿದ್ವಾಯಿಯಲ್ಲಿ ಶಸ್ತ್ರಚಿಕಿತ್ಸೆಗೆ ಕಾಯಬೇಕಿಲ್ಲ’

ಇನ್ಫೊಸಿಸ್ ಪ್ರತಿಷ್ಠಾನ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 5 ಕೊಠಡಿಗಳ ಉದ್ಘಾಟನೆ
Last Updated 20 ಜೂನ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕಿದ್ವಾಯಿ ಆಸ್ಪತ್ರೆಗೆ ಬರುವ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಇನ್ನು ವಾರಗಟ್ಟಲೆ ಕಾಯಬೇಕಿಲ್ಲ. ಅಂತರರಾಷ್ಟ್ರೀಯ ದರ್ಜೆಯ ಐದು ಹೊಸ ಶಸ್ತ್ರಚಿಕಿತ್ಸಾ ಕೊಠಡಿಗಳು ಗುರುವಾರ ಕಾರ್ಯಾರಂಭಗೊಂಡಿವೆ.

ಇನ್ಫೊಸಿಸ್ ಪ್ರತಿಷ್ಠಾನ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಶಸ್ತ್ರಚಿಕಿತ್ಸಾ ಕೊಠಡಿಗಳ ಸಂಕೀರ್ಣವನ್ನುಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‌ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ಸಿ. ರಾಮಚಂದ್ರ, ‘ಈ ಮೊದಲು ಇದ್ದ 8 ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಒಂದು ಅಂತರರಾಷ್ಟ್ರೀಯ ದರ್ಜೆಯ ಕೊಠಡಿ ಇತ್ತು. ಆದರೂ, ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಒಂದೆರಡು ವಾರ ಕಾಯಬೇಕಾದ ಸ್ಥಿತಿ ಇತ್ತು. ಇನ್ನು ಮುಂದೆ ಈ ಸ್ಥಿತಿ ಇರುವುದಿಲ್ಲ’ ಎಂದು ಹೇಳಿದರು.

‘ಇವುಗಳ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವುದು ನಿಜ. ಸಂಸ್ಥೆಗೆ ಬೇಕಿರುವ 1,296 ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಂ ಅವರು ಮನಸು ಮಾಡಿದ್ದಾರೆ. ಮೂರು ತಿಂಗಳಲ್ಲಿ ಹಣಕಾಸು ಇಲಾಖೆಯ ಅನುಮೋದನೆ ದೊರೆಯುವ ವಿಶ್ವಾಸವಿದೆ’ ಎಂದರು.‌

ದೇಶದಲ್ಲೇ ದೊಡ್ಡ ಒಪಿಡಿ: ‘ದೇಶದಲ್ಲೇ ಅತೀ ದೊಡ್ಡದಾದ 6 ಅಂತಸ್ತಿನ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಇನ್ಫೊಸಿಸ್ ನಿರ್ಮಿಸಿ ಕೊಡುತ್ತಿದೆ’ ಎಂದು ರಾಮಚಂದ್ರ ಹೇಳಿದರು.

‘ಕಾಮಗಾರಿ ಈಗಾಗಲೇ ಆರಂಭವಾಗಿದೆ.280 ಜನ ಕೂರುವ ಸಾಮರ್ಥ್ಯದ ಒಂದು ಮತ್ತು 150 ಜನ ಕೂರುವ ಸಾಮರ್ಥ್ಯದ ಎರಡು ಸಭಾಂಗಣಗಳು ಇದೇ ಕಟ್ಟಡದಲ್ಲಿ ಇರಲಿವೆ. ’ ಎಂದು ವಿವರಿಸಿದರು.

‘ದೇಶದಲ್ಲೇ ಅತೀ ದೊಡ್ಡದಾದ20 ಹಾಸಿಗೆಯಅಸ್ಥಿಮಜ್ಜೆ ಕಸಿ ಘಟಕ ಕೂಡ ನಿರ್ಮಾಣವಾಗುತ್ತಿದೆ. ₹3 ಲಕ್ಷದಿಂದ ₹30 ಲಕ್ಷದವರೆಗೆ ವೆಚ್ವಾಗುವ ಈ ಶಸ್ತ್ರಚಿಕಿತ್ಸೆಯನ್ನು ಬಡವರಿಗೆ ಉಚಿತವಾಗಿ ಒದಗಿಸಬೇಕು ಎಂಬುದು ಮುಖ್ಯಮಂತ್ರಿಯವರ ಬಯಕೆ. ಇದಕ್ಕಾಗಿ ನಮ್ಮ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

ಬಿಬಿಎಂಪಿ ನೆರವಿನೊಂದಿಗೆ ₹15 ಕೋಟಿ ವೆಚ್ಚದಲ್ಲಿ ಕಾರು ನಿಲ್ದಾಣ, ರಸ್ತೆಗಳಿಗೆ ವೈಟ್ ಟಾಪಿಂಗ್, ಬೀದಿದೀಪ ಅಳವಡಿಕೆ ಕಾಮಗಾರಿ ಕೂಡ ಸದ್ಯದಲ್ಲೇ ಆರಂಭವಾಗಲಿದೆ ಎಂದರು.

ಇನ್ಫೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ ಮಾತನಾಡಿ, ‘ಸಾಮಾಜಿಕ ಕಾರ್ಯಗಳಿಗಾಗಿ ಪ್ರತಿಷ್ಠಾನದಿಂದ ಪ್ರತಿವರ್ಷ ₹400 ಕೋಟಿ ಖರ್ಚು ಮಾಡಲಾಗುತ್ತಿದೆ. ಖಾಲಿ ಕೊಠಡಿಗಳನ್ನು ನಾವು ನಿರ್ಮಿಸಿಕೊಟ್ಟಿದ್ದೇವೆ’ ಎಂದರು.

ಧನ್ಯವಾದ ಸಲ್ಲಿಸಿದ ಬಾಲಕ
ಕ್ಯಾನ್ಸರ್‌ನಿಂದ ಬಳಲುತ್ತಿರುವ 7 ವರ್ಷದ ಬಾಲಕನೊಬ್ಬ ಎಚ್.ಡಿ. ಕುಮಾರಸ್ವಾಮಿ ಅವರ ಬಳಿಗೆ ಹೋಗಿ ಧನ್ಯವಾದ ಸಲ್ಲಿಸಿದ.

ಒಂದೂವರೆ ವರ್ಷ ಇದ್ದಾಗಲೇ ಕ್ಯಾನ್ಸರ್‌ಗೆ ತುತ್ತಾಗಿದ್ದ ಬಾಲಕನ ಚಿಕಿತ್ಸೆಗೆ ಕುಮಾರಸ್ವಾಮಿ ಅವರು ಈ ಹಿಂದೆ ಆರ್ಥಿಕ ನೆರವು ನೀಡಿದ್ದರು. ಅದನ್ನು ನೆನಪಿಸಿಕೊಂಡು ಬಂದಿದ್ದ ಬಾಲಕ, ‌ಧನ್ಯವಾದ ಸಮರ್ಪಿಸಿದ. ಈ ವಿಷಯವನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡ ಮುಖ್ಯಮಂತ್ರಿ, ‘ಅಶಕ್ತರಿಗೆ ನೆರವು ನೀಡುವ ಅಭ್ಯಾಸವನ್ನು ಬೆಳೆಸಿಕೊಂಡು ಬಂದಿದ್ದೇನೆ’ ಎಂದರು.

ತೊಗರಿಬೇಳೆ ಖರೀದಿಗೆ ಇ–ಟೆಂಡರ್‌: ಸಿ. ಎಂ
ಬೆಂಗಳೂರು:
ಮುಕ್ತ ಮಾರುಕಟ್ಟೆಯಿಂದ ತೊಗರಿಬೇಳೆ ಖರೀದಿಸಲು ಇ-ಪ್ರೊಕ್ಯೂರ್‌ಮೆಂಟ್‌ಪೋರ್ಟಲ್ ಮೂಲಕ ಇ-ಟೆಂಡರ್‌ಗೆಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದಂತೆ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು,ಪಡಿತರ ವಿತರಣಾ ವ್ಯವಸ್ಥೆಯಡಿ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಡಿತರ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹೆಚ್ಚು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಅನ್ನಭಾಗ್ಯ ಯೋಜನೆಯಡಿ ₹3,750 ಕೋಟಿ ಒದಗಿಸಲಾಗಿದೆ ಎಂದು ಆಹಾರ ಸಚಿವ ಜಮೀರ್ ಅಹಮದ್‌ ಖಾನ್ ತಿಳಿಸಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಹೆಚ್ಚುವರಿಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT