ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ತೆಗೆದಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ: ಕಿರಿಕ್ ಕೀರ್ತಿ

Last Updated 4 ಡಿಸೆಂಬರ್ 2021, 2:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಷುಲ್ಲಕ ಕಾರಣಕ್ಕೆ ವಿಡಿಯೊ ತೆಗೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪರಿಚಿತರ ತಂಡವೊಂದು, ಬಿಯರ್ ಬಾಟಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದೆ’ ಎಂದು ಆರೋಪಿಸಿ ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಸ್ಪರ್ಧಿ ಕಿರಿಕ್ ಕೀರ್ತಿ, ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

‘ಸದಾಶಿವನಗರ ಠಾಣೆ ವ್ಯಾಪ್ತಿಯ ಪಬ್‌ವೊಂದರಲ್ಲಿ ಗುರುವಾರ ರಾತ್ರಿ ನಡೆದಿರುವ ಘಟನೆ ಬಗ್ಗೆ ಕೀರ್ತಿಕುಮಾರ್ ಉರ್ಫ್‌ ಕಿರಿಕ್ ಕೀರ್ತಿ ದೂರು ಸಲ್ಲಿಸಿದ್ದಾರೆ. ಅಕ್ರಮ ಕೂಟ ರಚಿಸಿಕೊಂಡು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸ್ನೇಹಿತರ ಜೊತೆಯಲ್ಲಿ ಕೀರ್ತಿಕುಮಾರ್ ಪಬ್‌ಗೆ ಹೋಗಿದ್ದರು. ಅವರ ಟೇಬಲ್‌ ಸಮೀಪದ ಮತ್ತೊಂದು ಟೇಬಲ್‌ನಲ್ಲಿ ಆರೋಪಿಗಳು ಕುಳಿತಿದ್ದರು. ಕೀರ್ತಿಕುಮಾರ್ ಹಾಗೂ ಇತರರು ಸೆರೆಯಾಗುವ ರೀತಿಯಲ್ಲಿ ಆರೋಪಿಯೊಬ್ಬ, ವಿಡಿಯೊ ಚಿತ್ರೀಕರಿಸಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೀರ್ತಿಕುಮಾರ್, ಆರೋಪಿಗಳ ಬಳಿ ಹೋಗಿ ಪ್ರಶ್ನಿಸಿದ್ದರು. ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.’

‘ಕೋಪಗೊಂಡ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೀರ್ತಿ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದರು ಎನ್ನಲಾಗಿದೆ. ಗಾಯಗೊಂಡ ಕೀರ್ತಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಕೃತ್ಯದ ನಂತರ ಆರೋಪಿಗಳು ಪರಾರಿ ಯಾಗಿದ್ದಾರೆ. ಕುಡಿದ ಮತ್ತಿನಲ್ಲಿ ಗಲಾಟೆ ನಡೆದಿರುವುದು ಗೊತ್ತಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಸಿ.ಸಿ ಟಿ.ವಿ ದೃಶ್ಯ ಪರಿಶೀಲನೆ: ‘ಪ್ರಕರಣ ದಾಖಲಾಗುತ್ತಿದ್ದಂತೆ ಪಬ್‌ಗೆ ಹೋಗಿ ಮಾಹಿತಿ ಕಲೆಹಾಕಲಾಯಿತು. ಸಿಸಿಟಿವಿ ಕ್ಯಾಮೆರಾ ಡಿವಿಆರ್‌ ಸುಪರ್ದಿಗೆ ಪಡೆ ಯಲಾಗಿದ್ದು, ದೃಶ್ಯಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಬಿಬಿಎಂಪಿ ಆವರಣದಲ್ಲೇ ₹ 5 ಲಕ್ಷ ಕಳವು

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಮರ್ಸಿಡಿಸ್ ಬೆನ್ಜ್ ಕಾರಿನ ಕಿಟಕಿ ಗಾಜು ಒಡೆದು ₹ 5 ಲಕ್ಷ ಕಳವು ಮಾಡಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶುಕ್ರವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕಾರಿನ (ಕೆಎ 03 ಎನ್‌ಇ 3420) ಮಾಲೀಕ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಿಬಿಎಂಪಿ ಮುಖ್ಯ ಕಚೇರಿಗೆ ಬಂದಿದ್ದ ಮಾಲೀಕ, ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು. ಕಾರಿನೊಳಗೆ ₹ 5 ಲಕ್ಷ ನಗದು ಇದ್ದ ಬ್ಯಾಗ್ ಇತ್ತು. ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಮಾಲೀಕ, ನಂತರ ಕಾರಿನ ಬಳಿ ಬಂದಿದ್ದರು. ಕಿಟಕಿ ಗಾಜು ಒಡೆದಿದ್ದು ನೋಡಿ, ಪರಿಶೀಲಿಸಿದಾಗ ಕಾರಿನಲ್ಲಿ ಹಣದ ಬ್ಯಾಗ್ ಇರಲಿಲ್ಲ. ನಂತರ, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT