ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಧ್ಯಮ ಬಲವರ್ಧನೆ ಅಗತ್ಯ: ಶಾಸಕ ರಿಜ್ವಾನ್ ಅರ್ಷದ್‌

ಕೆಜೆಸಿಎಸ್‌ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್‌
Published : 22 ಸೆಪ್ಟೆಂಬರ್ 2024, 16:08 IST
Last Updated : 22 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಬೆಂಗಳೂರು: ‘ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಮಾಧ್ಯಮ ಕ್ಷೇತ್ರ ಬಲಿಷ್ಠವಾಗಿರಬೇಕು. ಸಮಾಜ ಮತ್ತು ಸರ್ಕಾರ, ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಶಕ್ತಿ ತುಂಬಬೇಕಿದೆ’ ಎಂದು ಶಾಸಕ ರಿಜ್ವಾನ್ ಅರ್ಷದ್ ಭಾನುವಾರ ಪ್ರತಿಪಾದಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ (ಕೆಜೆಸಿಎಸ್‌) 2023–24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಿ ಅವರು ಮಾತನಾಡಿದರು.‌

‘ಮಾಧ್ಯಮವನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ.  ಪತ್ರಕರ್ತರು ಮತ್ತು ಅವರ ಕುಟುಂಬದವರಿಗೆ ಭದ್ರತೆ ದೊರೆಯಬೇಕು. ಆಗ ಮಾಧ್ಯಮಗಳು ಉಳಿಯುತ್ತವೆ’ ಎಂದರು. 

ಐಆರ್‌ಎಸ್‌ ಅಧಿಕಾರಿ ಶಾಂತಪ್ಪ ಜಡೆಮ್ಮನವರ್‌, ‘ನಾನು ಎಂಟನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾದೆ. ಈ ಯಶಸ್ಸಿಗೆ ಓದಿನ ಜೊತೆಗೆ ನೆರವಾಗಿದ್ದು ನನ್ನ ಸಾಮಾಜಿಕ ಕಾರ್ಯ ಗುರುತಿಸಿದ ಪತ್ರಕರ್ತರು. ನನ್ನ ಕಾರ್ಯವನ್ನು ಗುರುತಿಸಿ ’ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌’ ಪತ್ರಿಕೆಗಳು ನೀಡಿದ ‘ಯುವ ಸಾಧಕ‘ ಮತ್ತು ‘ಚೇಂಜ್‌ ಮೇಕರ್‌’ ಪ್ರಶಸ್ತಿಗಳು, ಸಾಧನೆಗೆ ಸಹಾಯವಾಯಿತು’ ಎಂದು ನೆನಪಿಸಿಕೊಂಡರು.

‘ನಾನು ಪಿಯುಸಿಯಲ್ಲಿ ತೃತೀಯ ದರ್ಜೆಯಲ್ಲಿ ಪಾಸ್. ಇಲ್ಲಿ ಮಕ್ಕಳು ಶೇ 90, ಶೇ 80 ಅಂಕ ಪಡೆದಿದ್ದಾರೆ. ನಾನೇ ಐ.ಆರ್.ಎಸ್ ಪಾಸ್ ಮಾಡಿದ್ದೇನೆ ಎಂದರೆ ನೀವು ನನಗಿಂತ ಬುದ್ದಿವಂತರು. ನೀವು ಇನ್ನೂ ಸಲೀಸಾಗಿ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡಬಹುದು’ ಎಂದು ಪ್ರತಿಭಾವಂತ ಮಕ್ಕಳನ್ನು ಶಾಂತಪ್ಪ ಉತ್ತೇಜಿಸಿದರು.

ಸುಮಾರು ಎಸ್ಸೆಸ್ಸೆಲ್ಸಿಯ 24, ಪಿಯುಸಿಯ 31, ನಾಲ್ವರು ಪದವೀಧರರು, ಇಬ್ಬರು ಸ್ನಾತಕೋತ್ತರ ಪದವೀಧರರು, ಮೂವರು ಎಂಜಿನಿಯರಿಂಗ್ ಪದವೀಧರರು, ಒಬ್ಬರು ವೈದ್ಯಕೀಯ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಾಲ್ವರು ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡಲಾಯಿತು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಪಾಳ್ಯ , ಉಪಾಧ್ಯಕ್ಷ ದೊಡ್ಡ ಬೊಮ್ಮಯ್ಯ, ಖಜಾಂಚಿ ಬಿ.ಎನ್. ಮೋಹನ್ ಕುಮಾರ್, ನಿರ್ದೇಶಕರಾದ ರಾಜೇಂದ್ರ ಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ಆನಂದ್ ಪರಮೇಶ್ ಬೈದನಮನೆ, ಸೋಮಶೇಖರ್ ಕೆ.ಎಸ್., ಪರಮೇಶ್ ಕೆ.ವಿ., ವನಿತಾ, ನಯನಾ, ಕೃಷ್ಣಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT