ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಸಂಕಷ್ಟದಲ್ಲಿ ನೆರವಾಗುತ್ತಿದೆ ‘ಕೊಡೋಣ’

Last Updated 8 ಏಪ್ರಿಲ್ 2020, 20:15 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ ಕೊರೊನಾ ಸೋಂಕು ರುದ್ರತಾಂಡವವಾಡುತ್ತಿದ್ದರೆ, ಇದರ ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್‌ ನಿರಾಶ್ರಿತರನ್ನು, ಕೊಳೆಗೇರಿ ನಿವಾಸಿಗಳನ್ನು, ದಿನಗೂಲಿ ಕಾರ್ಮಿಕರನ್ನು ಹೈರಾಣಾಗಿಸಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಇಂತಹ ಬಡಬಗ್ಗರಿಗೆ ನೆರವಾಗಲೆಂದೇ ನಗರದಲ್ಲಿ ‘ಕೊಡೋಣ’ ಬಳಗ ಹುಟ್ಟಿಕೊಂಡಿದೆ.

ನಗರದಲ್ಲಿ ಬಡಬಗ್ಗರು ಇರುವಲ್ಲಿಗೆ ಆಹಾರ ತಲುಪಿಸುತ್ತಿರುವ ಈ ಬಳಗ ಆರಂಭವಾಗಿದ್ದು ಕೇವಲ ಇಬ್ಬರು ಸದಸ್ಯರಿಂದ. ಈಗ 100ಕ್ಕೂ ಹೆಚ್ಚು ಮಂದಿ ತಮ್ಮಿಂದಾದಷ್ಟು ನೆರವು ಒದಗಿಸುವ ಮೂಲಕ ಸೇವಾ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ನಿತ್ಯ 15ಕ್ಕೂ ಅಧಿಕ ಸ್ವಯಂಸೇವಕರು ಆಹಾರ ತಯಾರಿಸಿ ಬಡಬಗ್ಗರಿಗೆ ವಿತರಿಸಲು ನೆರವಾಗುತ್ತಿದ್ದಾರೆ.

‘ಮಾರ್ಚ್‌ 22ರಂದು ಲಾಕ್‌ಡೌನ್‌ ಘೋಷಣೆಯಾದ ದಿನ ಸಿನಿಮಾ ನಿರ್ದೇಶಕ ಸಹನಾ ಮೂರ್ತಿ ತಮ್ಮ ವಾಹನದಲ್ಲೇ ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣ, ಕಲಾಸಿಪಾಳ್ಯ, ಕಬ್ಬನ್‌ಪಾರ್ಕ್‌ ಮುಂತಾದ ಕಡೆ ಬೀದಿಬದಿಯಲ್ಲಿದ್ದವರಿಗೆ ಬಿಸ್ಕೆಟ್‌ ಹಾಗೂ ನೀರು ಕೊಡಲಾರಂಭಿಸಿದರು. ನಾನೂ ಅವರನ್ನು ಸೇರಿಕೊಂಡೆ. ಮೊದಲ ಮೂರು ದಿನಗಳು ಬಡವರಿಗೆ ಹಾಗೂ ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಗೆ ಬಿಸ್ಕೆಟ್‌, ನೀರು ನೀಡಿದ್ದೆವು. ಲಾಕ್‌ಡೌನ್‌ ಮುಂದುವರಿದಾಗ ಬಡವರಿಗೆ ಅದರ ತೀವ್ರತೆ ಎಷ್ಟರಮಟ್ಟಿಗೆ ತಟ್ಟಲಿದೆ ಎಂಬುದು ಅರಿವಾಯಿತು. ಹಾಗಾಗಿ ಆಹಾರ ತಯಾರಿಸಿ ನೀಡಲು ಶುರುಮಾಡಿದೆವು’ ಎಂದು ‘ಕೊಡೋಣ’ ಬಳಗದಲ್ಲಿ ಒಬ್ಬರಾದ ಸೋಮಣ್ಣ ಮಾಚಿಮಾಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರ ನೆರವು ಪಡೆದು ಆಹಾರ ವಿತರಿಸುತ್ತಿದ್ದೇವೆ. ಕೆಂಗೇರಿಯಲ್ಲಿ ಬಾಣಸಿಗರನ್ನು ಇಟ್ಟುಕೊಂಡು ಆಹಾರ ತಯಾರಿಸುತ್ತಿದ್ದೇವೆ.ಸ್ನೇಹಿತರೂ ಪುಳಿಯೊಗರೆ, ಚಿತ್ರಾನ್ನ, ವಾಂಗೀಬಾತ್‌, ಪೊಂಗಲ್ ತಯಾರಿಸಿ ಕೊಡುತ್ತಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ, ಕಬ್ಬನ್ ಪಾರ್ಕ್, ಮಾಗಡಿ ರಸ್ತೆ, ಬ್ಯಾಟರಾಯನಪುರ, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಿತ್ಯ ಮಧ್ಯಾಹ್ನ 500ಕ್ಕೂ ಹೆಚ್ಚು ಮಂದಿಯ ಹೊಟ್ಟೆ ತಣಿಸುತ್ತಿದ್ದೇವೆ. ಕೊಳೆಗೇರಿ ನಿವಾಸಿಗಳಿಗೆ ಅಕ್ಕಿ, ಬೇಳೆ ಹಾಗೂ ದಿನಸಿ ಸಾಮಗ್ರಿ ನೀಡುತ್ತಿದ್ದೇವೆ’ ಎಂದರು.

‘ಸಂಕಟದಲ್ಲಿರುವವರಿಗೆ ನೆರವಾಗುವ ಏಕೈಕ ಉದ್ದೇಶದಿಂದ ‘ಕೊಡೋಣ’ ಬಳಗ ದಿಢೀರ್‌ ಹುಟ್ಟಿಕೊಂಡಿತು. ಇದನ್ನೇ ಟ್ರಸ್ಟ್‌ ಆಗಿ ನೋಂದಾಯಿಸುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು.

ರಕ್ತದಾನ ಕ್ಕೂ ಸೈ: ‘ಕೊಡೋಣ’ ತಂಡದ ಸೇವಾ ಕಾರ್ಯ ಕೇವಲ ಊಟ ವಿತರಣೆ ಸೀಮಿತವಾಗಿಲ್ಲ. ತಂಡದ 30ಕ್ಕೂ ಹೆಚ್ಚು ಮಂದಿ ಸದಸ್ಯರು ಇತ್ತೀಚೆಗೆ ಆಸ್ಪತ್ರೆಗಳಲ್ಲಿ ರಕ್ತದಾನ ಮಾಡುವ ಮೂಲಕ ರೋಗಿಗಳಿಗೂ ನೆರವಾಗಿದ್ದಾರೆ. ಬಡವರಿಗೆ ಸ್ಯಾನಿಟೈಸರನ್ನು ಕೂಡಾ ತಂಡವು ಉಚಿತವಾಗಿ ವಿತರಿಸುತ್ತಿದೆ. ‘ಕೊಡೋಣ’ ಬಳಗದ ಜೊತೆ ಕೈಜೋಡಿಸುವವರು 9632401199 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT