ಭಾನುವಾರ, ಜನವರಿ 17, 2021
28 °C
ಯೋಗ–ಧ್ಯಾನಕ್ಕೆ ಪೂರಕ ವಾತಾವರಣ * ಮಕ್ಕಳಿಗೆ ಪರಿಸರ ಪಾಠ

ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮನೆ ತಾರಸಿಯಲ್ಲಿ ಹೂವು–ಹಣ್ಣು–ತರಕಾರಿ ಕೃಷಿ. ಗಿಡಗಳಲ್ಲಿ ಹಕ್ಕಿಗಳ ಕಲರವ. ಕಾಲಿಗೆ ಮುತ್ತಿಟ್ಟು ಓಡುವ ಮೊಲಗಳು. ಕಣ್ಣಿಗೆ ತಂಪೆನಿಸುವ ಮೀನು... ಧ್ಯಾನಕ್ಕೆ,  ದಣಿವಾರಿಸಿಕೊಳ್ಳಲು ತಾರಸಿಯಲ್ಲಿ ಇಂತಹ ವಾತಾವರಣವಿದ್ದರೆ ಎಷ್ಟು ಚೆಂದ? 

ಇಂತಹ ಕಲ್ಪನೆಯನ್ನು ಸಾಕಾರವಾಗಿಸಲು ಮುಂದಾಗಿದೆ ‘ಮೈ ಡ್ರೀಮ್‌ ಗಾರ್ಡನ್‌’ ಸಂಸ್ಥೆ. ಆಸಕ್ತರಿಗೆ ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನವನ್ನು ಅದು ನಿರ್ಮಿಸಿಕೊಡುತ್ತಿದೆ. ಕೃಷಿಮೇಳದಲ್ಲಿ ಸಂಸ್ಥೆ ಮಳಿಗೆಗೆ ಶನಿವಾರ ಸಾವಿರಾರು ಜನ ಭೇಟಿ ನೀಡಿ ವಿವರ ಪಡೆದರು.

‘ಮನೆಯ ಮೇಲೆ ಸೊಪ್ಪು–ತರಕಾರಿ ಬೆಳೆಯುವ 5,000ಕ್ಕೂ ಹೆಚ್ಚು ತಾರಸಿ ಉದ್ಯಾನಗಳನ್ನು ಸಂಸ್ಥೆ ನಗರದಲ್ಲಿ ಅಭಿವೃದ್ಧಿಪಡಿಸಿದ್ದೇವೆ. ಗ್ರಾಹಕರ ಮನೆಗೆ ಹೋದಾಗ ಒಬ್ಬರು ತಾರಸಿಯಲ್ಲಿ ಪಕ್ಷಿಗಳನ್ನೂಸಾಕಿದ್ದರು. ಮತ್ತೊಬ್ಬರು ಅಕ್ವೇರಿಯಂ ಮಾಡಿದ್ದರು.
ಕೆಲವರು ಮೊಲ ಸಾಕಿದ್ದರು. ಈ ಎಲ್ಲವನ್ನೂ ಒಟ್ಟಾಗಿಸಿ ಉದ್ಯಾನ ರೂಪಿಸುವ ಚಿಂತನೆ ಬಂತು. ಅಂತೆಯೇ, ಈಗ ಜೀವವೈವಿಧ್ಯ ಉದ್ಯಾನ ರೂಪಿಸುತ್ತಿದ್ದೇವೆ’ ಎಂದು ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸರವಣಕುಮಾರ್‌ ತಿಳಿಸಿದರು.

ಹೇಗಿರಲಿದೆ ಉದ್ಯಾನ ?
ಅಳವಿನಂಚಿನ ಅಥವಾ ವಿಶಿಷ್ಟ ಪ್ರಭೇದದ ಪಕ್ಷಿಗಳು ಹಾಗೂ ಮೊಲಗಳನ್ನು ಇಲ್ಲಿ ಇಟ್ಟು  ಬೆಳೆಸಲಾಗುತ್ತದೆ. ಜೊತೆಗೆ ಅಕ್ವೇರಿಯಂ, ರಾಕ್‌ ಗಾರ್ಡನ್‌ ನಿರ್ಮಿಸಲಾಗುತ್ತದೆ. ಜೊತೆಗೆ, ಒಂದು ಮನೆಗೆ ಬೇಕಾಗುವಷ್ಟು ಸೊಪ್ಪು–ತರಕಾರಿಗಳನ್ನು ಬೆಳೆಯಲಾಗುತ್ತದೆ.

ನಿರ್ವಹಣೆ ಹೇಗೆ ? 
ಅಡುಗೆ ಮನೆ ತ್ಯಾಜ್ಯವನ್ನೇ ಗೊಬ್ಬರವಾಗಿ ಇದಕ್ಕೆ ಬಳಸಬಹುದು. ನಿತ್ಯ ಮನೆಯಲ್ಲಿ ಬಳಸುವ ನೀರನ್ನೇ ಈ ಉದ್ಯಾನಕ್ಕೆ ಹರಿಸುವ ವ್ಯವಸ್ಥೆ ಮಾಡಲಾಗುತ್ತದೆ. ‘ಜೀವವೈವಿಧ್ಯ ಉದ್ಯಾನ ಅಭಿವೃದ್ಧಿಗೆ ಒಂದು ಚದರ ಅಡಿಗೆ ₹1,200 ಶುಲ್ಕ ತೆಗೆದುಕೊಳ್ಳುತ್ತೇವೆ. ನಾಲ್ಕು ಜನ ಸದಸ್ಯರಿರುವ ಕುಟುಂಬಕ್ಕೆ ತರಕಾರಿ ಬೆಳೆಯಲು 150 ಚದರ ಅಡಿ ಜಾಗ ಬೇಕಾಗುತ್ತದೆ’ ಎಂದು ಸರವಣ ಕುಮಾರ್‌ ಹೇಳಿದರು. 

ಸಸಿಗಳನ್ನು ಬೆಳೆಯುವ ಪ್ಲಾಂಟರ್‌ ಪೆಟ್ಟಿಗೆಗಳನ್ನು, ಸಸಿ, ಬೀಜಗಳು, ಪೋಷಕಾಂಶಗಳನ್ನು ಸಂಸ್ಥೆಯೇ ಒದಗಿಸಲಿದೆ.  ಎಂಟು ಸಲ ಉದ್ಯಾನ ನಿರ್ವಾಹಕರನ್ನು (ಗಾರ್ಡನರ್‌) ಉಚಿತವಾಗಿ ಕಳುಹಿಸಲಾಗುತ್ತದೆ.

20 ದಿನಕ್ಕೊಮ್ಮೆ ಉದ್ಯಾನಕ್ಕೆ ಭೇಟಿ ನೀಡುವ ಈ ನಿರ್ವಾಹಕರು ಸಸಿಗಳಿಗೆ ನೀರು ಸಿಂಪಡಣೆ, ಬಳ್ಳಿ ಕಟ್ಟುವುದು, ಗೊಬ್ಬರ ಹಾಕುವುದು ಮತ್ತು ಕಳೆ ಕೀಳುವ ಕೆಲಸ ಮಾಡುತ್ತಾರೆ. ಅಡುಗೆ ಮನೆ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಆಸಕ್ತಿ ಗ್ರಾಹಕರಿಗೆ ಇದ್ದರೆ, ಈ ಕುರಿತು ತರಬೇತಿಯನ್ನೂ ನೀಡುತ್ತಾರೆ ಎಂದು ತಿಳಿಸಿದರು. 

ಆಸಕ್ತರು ತಾರಸಿಯಲ್ಲಿ ಉದ್ಯಾನ ಕೃಷಿ ಅಭಿವೃದ್ಧಿ ಕುರಿತ ಮಾಹಿತಿಗಳಿಗೆ 73491–81777 ಅಥವಾ www.mydreamgarden.in ಸಂಪರ್ಕಿಸಬಹುದು. 

*
ಜೀವವೈವಿಧ್ಯ ಉದ್ಯಾನದಲ್ಲಿ ಅಡುಗೆ ಮನೆ ತ್ಯಾಜ್ಯದ ಸಮರ್ಪಕ ಬಳಕೆಯಾಗುತ್ತದೆ. ಪಕ್ಷಿಗಳ ಬೆಳವಣಿಗೆಗೆ ಪೂರಕ ವಾತಾವರಣ ಲಭ್ಯವಾಗಲಿದೆ.
–ಸರವಣಕುಮಾರ್, ಮೈ ಡ್ರೀಮ್‌ ಗಾರ್ಡನ್‌ ಸಂಸ್ಥೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು