ಶನಿವಾರ, ಮೇ 21, 2022
23 °C

ಮುಷ್ಕರ ಮಣಿಸಲು ‘ಜಾತಿ ಅಸ್ತ್ರ’ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿ ಅಸ್ತ್ರ’ ಪ್ರಯೋಗದ ಮೂಲಕವೂ ಸಾರಿಗೆ ನೌಕರರ ಮುಷ್ಕರವನ್ನು ಕೊನೆಗೊಳಿಸಲು ಕೆಲವು ಸಚಿವರು ಸೋಮವಾರ ಪ್ರಯತ್ನ ನಡೆಸಿದರು. ಜಾತಿ ಸಂಘಟನೆಗಳು ಮತ್ತು ಸಾರಿಗೆ ನೌಕರರ ಜಾತಿವಾರು ಸಂಘಟನೆಗಳ ಮೂಲಕ ಹೋರಾಟಗಾರರ ಮನವೊಲಿಕೆಯ ಕಸರತ್ತು ನಡೆಯಿತು.

ಕಂದಾಯ ಸಚಿವ ಆರ್‌. ಅಶೋಕ ಅವರು ಒಕ್ಕಲಿಗರ ಸಂಘದ ನಿರ್ದೇಶಕರೊಬ್ಬರ ಮೂಲಕ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್‌ ಅವರನ್ನು ಸಂಪರ್ಕಿಸಿ ಪ್ರತ್ಯೇಕ ಮಾತುಕತೆ ನಡೆಸಿದರು. ‘ಜಾತಿ ಅಸ್ತ್ರ’ ಬಳಸಿ ಚಂದ್ರಶೇಖರ್‌ ಸೇರಿದಂತೆ ಕೂಟದ ಎಂಟು ಮುಖಂಡರನ್ನು ಕಂದಾಯ ಸಚಿವರ ನಿವಾಸಕ್ಕೆ ಕರೆದೊಯ್ಯಲಾಗಿತ್ತು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌.ನಂದೀಶ್‌ ರೆಡ್ಡಿ ಮತ್ತಿತರ ಉಪಸ್ಥಿತಿಯಲ್ಲಿ ಅಲ್ಲಿ ಮಾತುಕತೆ ನಡೆಸಿ, ಮುಷ್ಕರ ನಿಲ್ಲಿಸುವಂತೆ ಮನವೊಲಿಕೆಗೆ ಯತ್ನಿಸಿದರು.

ಅಶೋಕ ಅವರ ನಿವಾಸಕ್ಕೆ ತೆರಳಿದ್ದ ಮುಖಂಡರು ಎರಡು ಗಂಟೆಗೂ ಹೆಚ್ಚು ಕಾಲ ಕೋಡಿಹಳ್ಳಿ ಚಂದ್ರಶೇಖರ್‌ ಅವರೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಈ ಮುಖಂಡರು ಕಂದಾಯ ಸಚಿವರ ಮನೆಯಲ್ಲಿ ಮಾತುಕತೆಯಲ್ಲಿ ಕುಳಿತಿರುವ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಸಾರಿಗೆ ನೌಕರರ ಕೂಟದ ಮುಖಂಡರು ಸಂಪರ್ಕಕ್ಕೆ ಸಿಗದ ಕಾರಣದಿಂದಾಗಿಯೇ ಮುಷ್ಕರದ ಮುಂದಿನ ನಡೆ ಕುರಿತು ನಿರ್ಧರಿಸುವ ಸಭೆಯೂ ತಡವಾಗಿ ಆರಂಭವಾಯಿತು.

‘ದೂರು ಕೊಡಲು ಮುಂದಾಗಿದ್ದೆ’

ಮುಷ್ಕರದ ವೇದಿಕೆಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ‘ಭಾನುವಾರ ಸಂಧಾನ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಾರಿಗೆ ನೌಕರರ ಕೂಟದ ಎಂಟು ಮುಖಂಡರು ಬೆಳಿಗ್ಗೆ ಎರಡು ಗಂಟೆಗಳ ಕಾಲ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರೆಲ್ಲರ ಮೊಬೈಲ್‌ ಫೋನ್‌ಗಳು ಸ್ವಿಚ್ಡ್‌ ಆಫ್‌ ಆಗಿದ್ದವು. ಯಾರಾದರೂ ಅಪಹರಣ ಮಾಡಿರಬಹುದು ಎಂಬ ಅನುಮಾನ ಮೂಡಿತ್ತು’ ಎಂದರು.

‘ಪೊಲೀಸರಿಗೆ ದೂರು ಕೊಡುವ ಬಗ್ಗೆ ಯೋಚಿಸುತ್ತಿದ್ದೆ. ಅಷ್ಟರಲ್ಲಿ ನನಗೆ ಕರೆಮಾಡಿದ ನಂದೀಶ್‌ ರೆಡ್ಡಿ, ಈ ಮುಖಂಡರು ಅವರೊಂದಿಗೆ ಇರುವ ವಿಷಯ ತಿಳಿಸಿದರು’ ಎಂದು ಸಭೆಗೆ ತಿಳಿಸಿದರು.

ನೌಕರರ ಸಂಘಟನೆಗಳಿಂದಲೂ ಹೇಳಿಕೆ

’ಮುಷ್ಕರ ಕೊನೆಗೊಳಿಸುವಂತೆ ಚರ್ಚೆ ನಡೆಯುತ್ತಿರುವಾಗಲೇ ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘ ಮುಷ್ಕರ ಕೈಬಿಡಲು ಒಪ್ಪಿದೆ. ಕೆಲಸಕ್ಕೆ ಹಾಜರಾಗುವಂತೆ ತನ್ನ ಸದಸ್ಯರಿಗೆ ಸೂಚನೆ ನೀಡಿದೆ‘ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದರು.

ಈ ಕುರಿತು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್‌ ಕೂಡ ಮಾಧ್ಯಮಗಳ ಎದುರು ಹೇಳಿಕೆ ನೀಡಿದರು. ಕೆಎಸ್‌ಆರ್‌ಟಿಸಿ ವೀರಶೈವ– ಲಿಂಗಾಯತ ನೌಕರರ ಸಂಘ ಸೇರಿದಂತೆ ಕೆಲವು ಜಾತಿವಾರು ನೌಕರರ ಸಂಘಟನೆಗಳಿಂದಲೂ ಇದೇ ರೀತಿಯ ಹೇಳಿಕೆಗಳು ಹೊರಬಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು