ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾರ್‌ನಲ್ಲಿ ಪರಿಚಯ: ಹಣಕ್ಕಾಗಿ ಪೀಡಿಸಿದ್ದಕ್ಕೆ ಕೊಲೆ

Published 5 ಫೆಬ್ರುವರಿ 2024, 14:56 IST
Last Updated 5 ಫೆಬ್ರುವರಿ 2024, 14:56 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರಿನ ಕ್ಯಾತಸಂದ್ರ ರೈಲು ನಿಲ್ದಾಣ ಬಳಿ ನಡೆದಿದ್ದ ಕುಮಾರಸ್ವಾಮಿ (28) ಕೊಲೆ ಪ್ರಕರಣ ಭೇದಿಸಿರುವ ಬೆಂಗಳೂರು ಗ್ರಾಮಾಂತರ ರೈಲ್ವೆ ಠಾಣೆ ಪೊಲೀಸರು, ಆರೋಪಿ ಬಿ. ಸುನೀಲ್‌ನನ್ನು (28) ಬಂಧಿಸಿದ್ದಾರೆ.

‘ವಿಜಯನಗರ ಜಿಲ್ಲೆಯ ಚಿರತಗೊಂಡ ಗ್ರಾಮದ ಕುಮಾರಸ್ವಾಮಿ ಮೃತದೇಹ ಫೆ. 2ರಂದು ಕ್ಯಾತಸಂದ್ರ ರೈಲು ನಿಲ್ದಾಣ ಬಳಿ ಪತ್ತೆಯಾಗಿತ್ತು. ಕೊಲೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದ್ದಂತೆ ತನಿಖೆ ಕೈಗೊಂಡು ಆರೋಪಿಯಾದ ಬಳ್ಳಾರಿ ಜಿಲ್ಲೆಯ ಬೊಮ್ಮನಾಳದ ಸುನೀಲ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ರೈಲ್ವೆ ಎಸ್ಪಿ ಡಾ. ಸೌಮ್ಯಲತಾ ತಿಳಿಸಿದರು.

ಹಳೇ ವಿದ್ಯಾರ್ಥಿ: ‘ಸ್ಥಳೀಯ ಮಠವೊಂದರ ಶಾಲೆಯ ಹಳೇ ವಿದ್ಯಾರ್ಥಿ ಸುನೀಲ್, ಫೆ. 1ರಂದು ತುಮಕೂರಿಗೆ ಬಂದಿದ್ದ. ಕಟ್ಟಡ ಕಾರ್ಮಿಕರಾಗಿದ್ದ ಕುಮಾರಸ್ವಾಮಿ ಸಹ ತುಮಕೂರಿನಲ್ಲಿ ವಾಸವಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಸುನೀಲ್, ಫೆ. 1ರಂದು ಬೆಳಿಗ್ಗೆ ಬಾರ್‌ಗೆ ಹೋಗಿದ್ದ. ಅದೇ ಬಾರ್‌ನಲ್ಲಿ ಕುಮಾರಸ್ವಾಮಿ ಹಾಗೂ ಸ್ನೇಹಿತರ ಪರಿಚಯವಾಗಿತ್ತು. ಎಲ್ಲರೂ ಮದ್ಯ ಕುಡಿದಿದ್ದರು. ಸುನೀಲ್ ಬಳಿ ₹ 19 ಸಾವಿರ ಹಣವಿತ್ತು. ಸುನೀಲ್‌ನೇ ಕುಮಾರಸ್ವಾಮಿ ಹಾಗೂ ಸ್ನೇಹಿತರ ಬಿಲ್‌ ಪಾವತಿಸಿ ಹೊರಟು ಹೋಗಿದ್ದ’ ಎಂದು ತಿಳಿಸಿವೆ.

‘ಸುನೀಲ್, ಸಂಜೆ ಪುನಃ ಬಾರ್‌ಗೆ ಹೋಗಿದ್ದ. ಮದ್ಯ ಪಾರ್ಸೆಲ್ ತೆಗೆದುಕೊಂಡಿದ್ದ. ಅದೇ ಬಾರ್‌ ಬಳಿ ನಿಂತಿದ್ದ ಕುಮಾರಸ್ವಾಮಿ, ಸುನೀಲ್‌ನನ್ನು ಅಡ್ಡಗಟ್ಟಿದ್ದರು. ‘ಮತ್ತಷ್ಟು ಹಣ ಕೊಡು’ ಎಂದು ಪೀಡಿಸಿದ್ದರು. ಹಣವಿಲ್ಲವೆಂದು ಸುನೀಲ್‌ ಹೇಳಿದರೂ ಸುಮ್ಮನಾಗಿರಲಿಲ್ಲ.’

‘ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇಬ್ಬರೂ ಪರಸ್ಪರ ಬೈದಾಡಿಕೊಂಡು ರೈಲು ನಿಲ್ದಾಣ ಬಳಿ ಬಂದಿದ್ದರು. ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಸಿಟ್ಟಾಗಿದ್ದ ಆರೋಪಿ ಸುನೀಲ್, ಕುಮಾರಸ್ವಾಮಿ ಮೇಲೆ ಹಲ್ಲೆ ಮಾಡಿದ್ದ. ಕಾಲಿನಿಂದ ಒದ್ದಿದ್ದ. ತೀವ್ರ ಗಾಯಗೊಂಡು ಸ್ಥಳದಲ್ಲೇ ಕುಮಾರಸ್ವಾಮಿ ಮೃತಪಟ್ಟಿದ್ದರು. ಮೃತದೇಹವನ್ನು ರೈಲು ನಿಲ್ದಾಣ ಬಳಿ ಎಸೆದು ಸುನೀಲ್ ಪರಾರಿಯಾಗಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಮೊಬೈಲ್ ಸುಳಿವು: ‘ಮೃತದೇಹದ ಗುರುತು ಆರಂಭದಲ್ಲಿ ಪತ್ತೆಯಾಗಿರಲಿಲ್ಲ. ಜೇಬಿನಲ್ಲಿ ಮೊಬೈಲ್‌ ನಂಬರ್ ಚೀಟಿ ಸಿಕ್ಕಿತ್ತು. ಅದರ ಸುಳಿವಿನಿಂದ ಕುಮಾರಸ್ವಾಮಿ ಗುರುತು ಹಾಗೂ ವಿಳಾಸ ಪತ್ತೆಯಾಯಿತು. ನಂತರ, ತಾಂತ್ರಿಕ ‍ಪುರಾವೆಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಯಿತು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT