ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಐಎಸ್‌ಸಿ ‍ಪ್ರಯೋಗಾಲಯದಲ್ಲಿ ಸ್ಫೋಟ: ಸಂಶೋಧಕ ಸಾವು, ಮೂವರ ಸ್ಥಿತಿ ಗಂಭೀರ

Last Updated 5 ಡಿಸೆಂಬರ್ 2018, 18:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದ ಲ್ಯಾಬ್‌ನಲ್ಲಿ ಬುಧವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಎಂಜಿನಿಯರ್ ಮನೋಜ್‌ ಕುಮಾರ್‌ (32) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೊಳ್ಳೇಗಾಲದ ಮನೋಜ್‌ ಕುಮಾರ್, ಬಿ.ಟೆಕ್ ಪದವೀಧರ. ಅವಘಡದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಅತುಲ್ಯಾ ಉದಯ್ ಕುಮಾರ್,ನರೇಶ್ ಕುಮಾರ್ ಹಾಗೂ ಕಾರ್ತಿಕ್ ಶೆಣೈ ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರನ್ನೂ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.‌

‘ಹೈಡ್ರೋಜನ್, ನೈಟ್ರೋಜನ್ ಸೇರಿದಂತೆ ಹಲವು ಬಗೆಯ ರಾಸಾಯನಿಕಗಳನ್ನು ಒಳಗೊಂಡ ಸಿಲಿಂಡರ್‌ಗಳು ಲ್ಯಾಬ್‌ನಲ್ಲಿದ್ದವು. ಅದರಲ್ಲಿ ಯಾವ ಸಿಲಿಂಡರ್‌ನ ಅನಿಲ ಸೋರಿಕೆಯಾಗಿದೆ ಎಂಬುದು ಗೊತ್ತಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅವರಿಂದ ವರದಿ ಬಂದ ಬಳಿಕವೇ ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿಯಲಿದೆ’ ಎಂದು ಸದಾಶಿವನಗರ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಥಳ ಪರಿಶೀಲನೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯೊಬ್ಬರು, ‘ಪ್ರಯೋಗಾಲಯದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸ್ಫೋಟಕ್ಕೆ ಅನಿಲ ಸೋರಿಕೆ ಕಾರಣವಿರಬಹುದೆಂದು ಲ್ಯಾಬ್‌ನ ಉಸ್ತುವಾರಿ ವಹಿಸಿಕೊಂಡಿರುವವರು ಹೇಳುತ್ತಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ಪುರಾವೆಗಳು ಸಿಕ್ಕಿಲ್ಲ’ ಎಂದರು.

ನವೋದ್ಯಮ ಜೊತೆ ಒಪ್ಪಂದ: ಹೈಡ್ರೋಸಾನಿಕ್ ಹಾಗೂ ಶಾಕ್ ವೇವ್ಸ್‌ ಬಗ್ಗೆ ಸಂಶೋಧನೆ ನಡೆಸುವ ಸಂಬಂಧ ‘ಸೂಪರ್ ವೇವ್ಸ್‌ ಟೆಕ್ನಾಲಜೀಸ್’ ಹೆಸರಿನ ನವೋದ್ಯಮ ಐಐಎಸ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಐಐಎಸ್‌ಸಿ ಆಡಳಿತ ಮಂಡಳಿ, ಏರೋಸ್ಪೇಸ್‌ ವಿಭಾಗದ ಲ್ಯಾಬ್‌ನಲ್ಲಿ ಸಂಶೋಧನೆ ನಡೆಸಲು ನವೋದ್ಯಮಕ್ಕೆ ಅವಕಾಶ ನೀಡಿತ್ತು. ‘ನವೋದ್ಯಮದ ಎಂಜಿನಿಯರ್ ಆಗಿದ್ದ ಮನೋಜ್‌ ಹಾಗೂ ಗಾಯಾಳುಗಳು ಲ್ಯಾಬ್‌ನಲ್ಲಿ ಸಂಶೋಧನೆ ಮಾಡುತ್ತಿದ್ದರು.

ಲ್ಯಾಬ್‌ ಅಸುರಕ್ಷಿತ?

ಮೃತ ಮನೋಜ್‌ ಕುಮಾರ್‌, ಒಂದು ವರ್ಷದ ಹಿಂದಷ್ಟೇ ಮದುವೆ ಆಗಿದ್ದರು. ಅವರ ಪತ್ನಿ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದಾರೆ. ದಂಪತಿಯು ಮಾನ್ಯತಾ ಟೆಕ್‌ಪಾರ್ಕ್‌ ಬಳಿ ವಾಸವಿದ್ದರು.

‘ಮನೋಜ್‌ ಕುಮಾರ್, ಪ್ರತಿಭಾವಂತ. ಸುರಕ್ಷತೆ ದೃಷ್ಟಿಯಿಂದ ಲ್ಯಾಬ್‌ ಚೆನ್ನಾಗಿಲ್ಲ ಎಂದು ಆಗಾಗ ಸಂಬಂಧಿಕರ ಬಳಿ ಹೇಳಿಕೊಳ್ಳುತ್ತಿದ್ದ. ಲ್ಯಾಬ್ ಸುರಕ್ಷಿತವಲ್ಲ ಎಂಬುದಕ್ಕೆ ಈ ಸ್ಫೋಟವೇ ಸಾಕ್ಷಿ’ ಎಂದು ಸಂಬಂಧಿ ಶ್ಯಾಮ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT