ಮಂಗಳವಾರ, ಜನವರಿ 25, 2022
28 °C

ಫಲಪುಷ್ಪ ಪ್ರದರ್ಶನ: ಗೊಂದಲದಲ್ಲಿ ತೋಟಗಾರಿಕಾ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನವರಿ ಕೊನೆಯ ವಾರದಲ್ಲಿ ಲಾಲ್‌ಬಾಗ್ ಉದ್ಯಾನದಲ್ಲಿ ‘ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ’ ಆಯೋಜಿಸಲು ತೋಟಗಾರಿಕೆ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆದರೆ, ಓಮೈಕ್ರಾನ್‌ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರದರ್ಶನ ಆಯೋಜಿಸುವುದೋ ಅಥವಾ ರದ್ದು ಮಾಡುವುದೋ ಎಂಬ ಗೊಂದಲಕ್ಕೆ ಇಲಾಖೆ ಸಿಲುಕಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನವನ್ನು ನಟರಾದ ರಾಜ್‌ಕುಮಾರ್ ಹಾಗೂ ಪುನೀತ್‌ ರಾಜ್‌ಕುಮಾರ್ ಗೌರವಾರ್ಥ ಆಯೋಜಿಸಲು ಉದ್ದೇಶಿಸಲಾಗಿತ್ತು. ಗಾಜಿನ ಮನೆಯಲ್ಲಿ ಇಬ್ಬರು ನಟರ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಿ, ಅವರಿಗೆ ಪುಷ್ಪನಮನ ಸಲ್ಲಿಸಲು ಎಲ್ಲ ತಯಾರಿ ನಡೆದಿದೆ. ಆದರೆ, ಕಳೆದ ವಾರದಿಂದ ಓಮೈಕ್ರಾನ್ ಸೋಂಕು ಪ್ರಕರಣಗಳು ದಿಢೀರ್ ಏರಿರುವುದರಿಂದ ಪ್ರದರ್ಶನ ನಡೆಯುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಪ್ರದರ್ಶನ ವೀಕ್ಷಿಸಲು ದಿನಕ್ಕೆ ಗರಿಷ್ಠ 500 ಮಂದಿಗೆ ಮಾತ್ರ ಅವಕಾಶ ನೀಡಬಹುದು ಎಂದು ಪಾಲಿಕೆ ಸಲಹೆ ನೀಡಿದೆ.

‘ಕೆಲವೇ ಮಂದಿಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಿದರೆ ಅನಾನುಕೂಲವೇ ಹೆಚ್ಚು. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ತಪ್ಪಿದ್ದಲ್ಲ. ಹಾಗಾಗಿ, ಇಂತಹ ಪರಿಸ್ಥಿತಿಯಲ್ಲಿ ಪ್ರದರ್ಶನ ಕೈಬಿಡುವುದೇ ಸೂಕ್ತ’ ಎಂದು ಮೈಸೂರು ಉದ್ಯಾನ ಕಲಾಸಂಘದ ಕೆಲ ಪದಾಧಿಕಾರಿಗಳು ನಿಲುವು ವ್ಯಕ್ತಪಡಿಸಿದ್ದಾರೆ.

‘ಫಲಪುಷ್ಪ ಪ್ರದರ್ಶನಕ್ಕೆ ಎರಡು ತಿಂಗಳಿನಿಂದಲೇ ಸಿದ್ಧತೆಗಳು ನಡೆದಿವೆ. ಯೋಜನೆಯಂತೆ ಎಲ್ಲ ಕೆಲಸಗಳು ನಡೆಯುತ್ತಿವೆ. ಓಮೈಕ್ರಾನ್‌ ಪ್ರಕರಣಗಳೂ ಏರುಗತಿಯಲ್ಲಿವೆ. ಹಾಗಾಗಿ, ಜನವರಿ 10ರವರೆಗೆ ಕಾದು ನೋಡುತ್ತೇವೆ. ಸದ್ಯಕ್ಕೆ ಫಲಪುಷ್ಪ ಪ್ರದರ್ಶನ ರದ್ದು ಮಾಡಿಲ್ಲ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು