ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನದ ಬೆನ್ನಲ್ಲೇ ಸ್ವಚ್ಛವಾದ ಲಾಲ್‌ಬಾಗ್‌!

Last Updated 20 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರೋತ್ತರ ಫಲಪುಷ್ಪ ಪ್ರದರ್ಶನ ಮುಕ್ತಾಯವಾದ ಬಳಿಕ ಪ್ಲಾಸ್ಟಿಕ್‌ ಕವರ್‌ಗಳು ಹಾಗೂಕಸ ಲಾಲ್‌ಬಾಗ್‌ ಉದ್ಯಾನದಲ್ಲಿ ರಾಶಿ ಬೀಳುತ್ತಿತ್ತು. ಆದರೆ, ಈ ಬಾರಿ ಪ್ರದರ್ಶನ ಮುಗಿದ ಕೂಡಲೇ ಕಸ ವಿಲೇವಾರಿ ಮಾಡಲಾಗಿದೆ.

ಪ್ಲಾಸ್ಟಿಕ್‌ಮುಕ್ತ ಫಲಪುಷ್ಪ ಪ್ರದರ್ಶನದ ಸಫಲತೆಗೆ ತೋಟಗಾರಿಕೆ ಇಲಾಖೆ ಮುನ್ನೆಚ್ಚರಿಕೆಯಾಗಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌, ‘ಫಲಪುಷ್ಪ ಪ್ರದರ್ಶನದ ವೇಳೆ ಲಕ್ಷಾಂತರ ಜನ ಸೇರಿದಾಗ ಅಲ್ಲಿ ಕಸದ ಸಮಸ್ಯೆ ಉಂಟಾಗುವುದು ಸಹಜ.16 ಪ್ರಮುಖ ಸ್ಥಳಗಳಲ್ಲಿ90 ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಸಣ್ಣ ಕಸ ಬಿದ್ದರೂ ತಕ್ಷಣ ಕಸ ತೆರವು ಮಾಡಲು ಸೂಚಿಸಲಾಗಿತ್ತು’ ಎಂದರು.

‘ಕಸ ಸಂಗ್ರಹಕ್ಕೆ 2 ಆಟೊಗಳನ್ನು ನಿಯೋಜಿಸಲಾಗಿತ್ತು. ಪ್ರತಿ 2 ಗಂಟೆಗೊಮ್ಮೆ ಕಸ ಸಂಗ್ರಹಿಸುವಂತೆ ಸೂಚನೆ ನೀಡಿದ್ದೆವು. ಸಂಗ್ರಹವಾದ ಕಸವನ್ನುಸಿದ್ದಾಪುರ ಗೇಟ್‌ ಬಳಿ ವಿಲೇವಾರಿ ಮಾಡಿದೆವು. ಬೀದಿನಾಟಕ, ಘೋಷಣಾ ಫಲಕ ಹಿಡಿದು ಜಾಗೃತಿ ಮೂಡಿಸಿದೆವು’ ಎಂದರು.

‘ಉದ್ಯಾನದ ನಾಲ್ಕೂ ಪ್ರವೇಶದ್ವಾರಗಳ ಬಳಿ ಸಿಬ್ಬಂದಿ ಎಲ್ಲರ ಬ್ಯಾಗ್‌ಗಳನ್ನು ತಪಾಸಣೆ ಮಾಡುತ್ತಿದ್ದರು. ಈ ವೇಳೆ 28 ಸಾವಿರ ಬಾಟಲಿಗಳು ಹಾಗೂ ಎಂಟು ಚೀಲಕ್ಕೂ ಅಧಿಕ ಕವರ್‌ಗಳನ್ನು ಸಂಗ್ರಹಿಸಲಾಗಿದೆ. ಗಾಜಿನ ಮನೆಯಲ್ಲಿಶೇ 80ರಷ್ಟು ಸ್ವಚ್ಛತಾ ಕಾರ್ಯ ಮುಗಿದಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳ
ಲಿದೆ’ ಎಂದು ತಿಳಿಸಿದರು.

‘ಪ್ರದರ್ಶನದ ವೇಳೆ ಇಲಾಖೆ ಸಿಬ್ಬಂದಿ, ಪೊಲೀಸ್‌ ಹಾಗೂ ಭದ್ರತಾ ಸಿಬ್ಬಂದಿಗೆ ಸ್ಟೀಲ್ ತಟ್ಟೆಗಳಲ್ಲಿ ಆಹಾರ ನೀಡಲಾಗಿತ್ತು. ಇದಕ್ಕಾಗಿ ಅದಮ್ಯ ಚೇತನ ಸಂಸ್ಥೆಯು 700 ಸ್ಟೀಲ್‌ ತಟ್ಟೆಗಳನ್ನು ನೀಡಿತ್ತು’ ಎಂದು ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ಕಬ್ಬನ್‌ ಉದ್ಯಾನ: ವರ್ಷವಿಡೀ ವಾಹನ ಸಂಚಾರಕ್ಕೆ ನಿಷೇಧ?
ಕಬ್ಬನ್‌ ಉದ್ಯಾನದಲ್ಲಿ 4ನೇ ಶನಿವಾರವೂ ವಾಹನ ಸಂಚಾರ ನಿಷೇಧಿಸುವ ಬಗ್ಗೆ ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿತ್ತು. ಆದರೆ, ಇಲಾಖೆಯ ಯೋಜನೆಯಂತೆ ಎಲ್ಲವೂ ಆದಲ್ಲಿ ಲಾಲ್‌ಬಾಗ್‌ನಂತೆ ಕಬ್ಬನ್‌ ಉದ್ಯಾನದಲ್ಲೂ ವರ್ಷವಿಡೀ ವಾಹನ ಸಂಚಾರ ನಿಷೇಧ ಆಗಲಿದೆ.

ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿರಾಜೇಂದ್ರಕುಮಾರ್ ಕಠಾರಿಯಾ ಇತ್ತೀಚೆಗೆ ಕಬ್ಬನ್ ಉದ್ಯಾನಕ್ಕೆ ಭೇಟಿ ನೀಡಿ ನಡಿಗೆದಾರರ ಜೊತೆ ಸಮಾಲೋಚಿಸಿದ್ದಾರೆ.

‘ವರ್ಷಪೂರ್ತಿ ವರ್ಷ ಸಂಚಾರ ನಿಷೇಧಕ್ಕೆ ಇಲಾಖೆಯ ಅಧಿಕಾರಿಗಳ ಜೊತೆಗೆ ಉನ್ನತಮಟ್ಟದ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಉದ್ಯಾನಕ್ಕೆ ಭೇಟಿ ನೀಡುವವರಿಗೆ ವಾಹನಗಳಿಂದ ತೊಂದರೆ ಆಗಬಾರದು’ ಎಂದಿದ್ದಾರೆ.

ವಾಹನ ಸಂಚಾರ ನಿಷೇಧಕ್ಕೆ ನಮ್ಮ ಬೆಂಬಲವಿದೆ ಎಂದು ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ ತಿಳಿಸಿದರು.

ಇಲಾಖೆ ಕೈಗೊಂಡ ಕ್ರಮಗಳು

ಮಳಿಗೆ ಮಾಲೀಕರಿಗೆ ಕಸದ ಹೊಣೆ

ಪ್ರತಿ ಎರಡು ಗಂಟೆಗೊಮ್ಮೆ ಕಸ ಸಂಗ್ರಹ

90 ಸ್ವಯಂಸೇವಕರ ನಿಯೋಜನೆ

ಕಸ ಸಂಗ್ರಹಕ್ಕೆ 2 ಆಟೊಗಳ ನಿಯೋಜನೆ

*
ಕಸ ಸಮಸ್ಯೆ ತಲೆನೋವಾಗಿತ್ತು. ಪ್ರದರ್ಶನ ಮುಗಿದ ಮರುದಿನವೇಉದ್ಯಾನ ಸ್ವಚ್ಛತೆಯಿಂದ ಕೂಡಿರುವುದು ಈ ಬಾರಿಯ ವಿಶೇಷ.
-ಎಂ.ಜಗದೀಶ್‌,ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT