ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ಹೂರಾಶಿಯಲ್ಲಿ ಅಂಬೇಡ್ಕರ್‌ ನೆನಪಿನ ಚಿತ್ತಾರ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಸಿದ್ದರಾಮಯ್ಯ ಚಾಲನೆ
Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಬಣ್ಣ ಬಣ್ಣದ ಹೂಗಳಲ್ಲಿ ಅರಳಿದ ಸಂಸತ್ ಭವನ, ಅದರ ಮೇಲೆ ರಾಷ್ಟ್ರ ಲಾಂಛನ, ನೂರಾರು ಪುಷ್ಪಗಳ ಮಧ್ಯ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪ್ರತಿಮೆ ನೋಡಗರ ಕಣ್ಮನ ಸೆಳೆಯುತ್ತಿದೆ.

ಇವು ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಕಂಡುಬರುವ ದೃಶ್ಯಗಳು...

ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್’ ವಿಷಯ ಆಧಾರಿತ 216ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.

3.6 ಲಕ್ಷ ಗುಲಾಬಿ ಹಾಗೂ 2.4 ಲಕ್ಷ ಸೇವಂತಿಗೆ ಹೂಗಳನ್ನು ಬಳಸಿ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಸಂಸತ್‌ ಭವನದ ಪ್ರತಿಕೃತಿಯನ್ನು ಅನಾವರಣಗೊಳಿಸಲಾಗಿದೆ. ಗಾಜಿನ ಮನೆಯ ಬಲಭಾಗದಲ್ಲಿ ಶ್ವೇತ ವರ್ಣದ ಡಚ್‌ ಗುಲಾಬಿ, ನೇರಳೆ, ಶ್ವೇತ ಮತ್ತು ಕಂದು ಬಣ್ಣದ ಹೂಗಳನ್ನು ಬಳಸಿ ನಿರ್ಮಿಸಿರುವ ಮಧ್ಯಪ್ರದೇಶದ ಮಾಹೋನಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಜನ್ಮಸ್ಥಳದ ಸ್ಮಾರಕದ ಮಾದರಿ ಕಂಗೊಳಿಸುತ್ತಿದೆ. ಅದರ ಮುಂಭಾಗದಲ್ಲಿ ಅಂಬೇಡ್ಕರ್‌ ಅವರ ಕುಳಿತಿರುವ ಭಂಗಿಯ ಪ್ರತಿಮೆ ವೀಕ್ಷಣೆಗೆ ಬರುವವರ ಗಮನ ಸೆಳೆಯುವಂತಿದೆ.

ಅಂಬೇಡ್ಕರ್ ಅವರ ಚೈತ್ಯಭೂಮಿ ಸ್ಮಾರಕ ಸ್ತೂಪದ ಮಾದರಿಯನ್ನು ಗಾಜಿನ ಮನೆ ಕೇಂದ್ರ ಭಾಗದ ಹಿಂಭಾಗದಲ್ಲಿ ರಚಿಸಲಾಗಿದೆ. ಅಂಬೇಡ್ಕರ್‌ ಅವರ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಿಂಬಿಸುವ ಮಹಾಡ್ ಸತ್ಯಾಗ್ರಹ, ಕಲಾ ರಾಮ್‌ ದೇವಸ್ಥಾನದ ಪ್ರವೇಶ, ಕೋರೆಗಾಂವ್ ವಿಜಯೋತ್ಸವದ ಸ್ತಂಭದ ಮಾಹಿತಿಯುಳ್ಳ ಕಲಾಕೃತಿಗಳು, ಅಂಬೇಡ್ಕರ್‌ ಅವರ ತಂದೆ ಸತ್ಪಾಲ್ ರಾಮ್‌ಜಿ–ತಾಯಿ ಭೀಮಾಬಾಯಿ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಪ್ರತಿಮೆಗಳು ನೋಡುಗರನ್ನು ಆಕರ್ಷಿಸುತ್ತಿವೆ. ಅಂಬೇಡ್ಕರ್‌ ಅವರ ಜೀವನ, ಸಾಧನೆ ಮತ್ತು ಹೋರಾಟಗಳು, ಸಂದೇಶ ಮತ್ತು ವಿಚಾರಧಾರೆಗಳನ್ನು ಪುಷ್ಪಗಳಲ್ಲಿ ಪ್ರಸ್ತುತಪಡಿಸಲಾಗಿದೆ.

ಗಮನ ಸೆಳೆವ ಅಂಬೇಡ್ಕರ್‌ ಜ್ಞಾನ ವೃಕ್ಷ: ಗಾಜಿನ ಮನೆಯ ಕೇಂದ್ರ ಭಾಗದ ಹಿಂಭಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರು ಯಾವೆಲ್ಲ ವಿಷಯಗಳಲ್ಲಿ ಜ್ಞಾನ ಪಡೆದಿದ್ದರು? ಯಾವ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದರು? ಎಂಬ ಮಾಹಿತಿಯುಳ್ಳ ಜ್ಞಾನ ವೃಕ್ಷವು ಸಂದರ್ಶಕರ ಗಮನ ಸೆಳೆಯುತ್ತಿದೆ. ಪ್ರದರ್ಶನ ವೀಕ್ಷಣೆಗೆ ಬಂದಿದ್ದ ಬಹುತೇಕರು ಜ್ಞಾನವೃಕ್ಷದ ಮುಂಭಾಗದಲ್ಲಿ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಂಡೋಪತಂಡವಾಗಿ ಲಾಲ್‌ಬಾಗ್‌ನತ್ತ ಬರುತ್ತಿದ್ದರು. ಕೆಲವರು ‘ಜೈ ಭೀಮ್‌’ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು.

ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಗಮನ ಸೆಳೆದ ಡಾ.ಬಿ.ಆರ್. ಅಂಬೇಡ್ಕರ್‌ ಜ್ಞಾನ ವೃಕ್ಷ ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಗಮನ ಸೆಳೆದ ಡಾ.ಬಿ.ಆರ್. ಅಂಬೇಡ್ಕರ್‌ ಜ್ಞಾನ ವೃಕ್ಷ ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.

ಗಮನ ಸೆಳೆದ ಗೌತಮ ಬುದ್ಧ, ಸಂತ ಕಬೀರರ ಪ್ರತಿಮೆ ಫಲಪುಷ್ಪ ಪ್ರದರ್ಶನಕ್ಕೆ 30 ಲಕ್ಷ ಪುಷ್ಪಗಳ ಬಳಕೆ ಆಗಸ್ಟ್‌ 8ರಿಂದ 19ರವರೆಗೆ ಫಲಪುಷ್ಪ ಪ್ರದರ್ಶನ ವರ್ಟಿಕಲ್‌ ಗಾರ್ಡನ್‌ನಲ್ಲಿ ಭಾರತದ ಭೂಪಟ, ಸಂವಿಧಾನ ಪೀಠಿಕೆ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ 12 ಲಕ್ಷ ಜನರು ಬರುವ ನಿರೀಕ್ಷೆ ಇದೆ. ದೇಶದ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಫಲಪುಷ್ಪ ಪ್ರದರ್ಶನಕ್ಕೆ ಬಳಸಲಾಗಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಅಂಬೇಡ್ಕರ್ ಎಂದೆಂದಿಗೂ ಪ್ರಸ್ತುತ’ ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಎಂದೆಂದಿಗೂ ಪ್ರಸ್ತುತ. ಜನರು ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಲು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಉತ್ತಮ ಅವಕಾಶ ಕಲ್ಪಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ಅಂಬೇಡ್ಕರ್‌ ಅವರು ಎಲ್ಲ ಜಾತಿ ಧರ್ಮ ಭಾಷೆ ಪ್ರದೇಶಗಳಿಗೆ ಸೇರಿದ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ದೊರೆತರೆ ರಾಜಕೀಯ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂಬುದರಲ್ಲಿ ನಂಬಿಕೆ ಇಟ್ಟಿದ್ದರು’ ಎಂದರು. ‘ಅಂಬೇಡ್ಕರ್ ಅವರ ಜೀವನಸಾಧನೆ ದೇಶಕ್ಕೆ ನೀಡದ ಕೊಡುಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಬೌದ್ಧ ಧರ್ಮ ಸ್ವೀಕಾರ ಸಂವಿಧಾನ ರಚನಾ ಸಮಿತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದುದು ಸಂವಿಧಾನದ ಆಶಯಗಳು ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಡಾ.ಬಿ.ಆರ್. ಅಂಬೇಡ್ಕರ್‌ ಅವರ ಮೊಮ್ಮಗ ಯಶವಂತ್‌ ಭೀಮರಾವ್ ಅಂಬೇಡ್ಕರ್ ಸಚಿವರಾದ ಜಮೀರ ಅಹಮದ್ ಖಾನ್ ರಾಮಲಿಂಗಾರೆಡ್ಡಿ ಎಸ್.ಎಸ್. ಮಲ್ಲಿಕಾರ್ಜುನ್ ಶಾಸಕ ಉದಯ್ ಬಿ. ಗರುಡಾಚಾರ್ ಭಾಗವಹಿಸಿದ್ದರು.

ಜನರು ಏನಂತಾರೆ?

ಸುಶ್ಮಾ
ಸುಶ್ಮಾ
ಅಂಬೇಡ್ಕರ್‌ ಅವರ ಜೀವನದ ಸಂಪೂರ್ಣ ಮಾಹಿತಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗಿದೆ. ಪ್ರತಿಯೊಬ್ಬರೂ ಪ್ರದರ್ಶನಕ್ಕೆ ಭೇಟಿ ನೀಡಿ ಅಂಬೇಡ್ಕರ್‌ ಅವರ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು
ಸುಶ್ಮಾ ಮಂಗಳೂರು
ಶ್ರಾವಣಿ ಮಹೇಂದ್ರ
ಶ್ರಾವಣಿ ಮಹೇಂದ್ರ
ಅಂಬೇಡ್ಕರ್‌ ಅವರು ಸಂವಿಧಾನ ಬರೆದಿರುವುದು ಕಾನೂನು ಮಂತ್ರಿಗಳಾಗಿದ್ದ ಕುರಿತು ಮಾತ್ರ ಪುಸ್ತಕಗಳಲ್ಲಿ ಓದಿದ್ದೆವು. ಆದರೆ ಅವರ ಹೋರಾಟದ ಬದುಕು ಸಾಧನೆಗಳನ್ನು ಫಲಪುಷ್ಪಗಳಲ್ಲಿ ಚಿತ್ರಿಸಲಾಗಿದೆ. ಇದು ಪ್ರತಿಯೊಬ್ಬರಿಗೆ ಮಾದರಿ
ಶ್ರಾವಣಿ ಮಹೇಂದ್ರ ವಿದ್ಯಾರ್ಥಿನಿ
ಮಹಾಲಕ್ಷ್ಮಿ
ಮಹಾಲಕ್ಷ್ಮಿ
ಬಾಬಾಸಾಹೇಬ್ ಅಂಬೇಡ್ಕರ್‌ ಅವರ ವಂಶವೃಕ್ಷ ಸೇರಿದಂತೆ ಅವರ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಪ್ರದರ್ಶನದಲ್ಲಿ ಅನಾವರಣ ಮಾಡಲಾಗಿದೆ.
ಮಹಾಲಕ್ಷ್ಮಿ ವಿದ್ಯಾರ್ಥಿನಿ
ಮಾವಳ್ಳಿ ಶಂಕರ್
ಮಾವಳ್ಳಿ ಶಂಕರ್
ಡಾ.ಬಿ.ಆರ್. ಅಂಬೇಡ್ಕರ್‌ ಅವರು ದೇಶಕ್ಕೆ ನೀಡಿದ ಕೊಡುಗೆ ಹೋರಾಟಗಳನ್ನು ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗಿದೆ. ಸಂವಿಧಾನ ಬುಡಮೇಲು ಮಾಡಲು ಯತ್ನಿಸುವ ಈ ಸಂದರ್ಭದಲ್ಲಿ ಇಲ್ಲಿನ ಪ್ರದರ್ಶನ ಹೆಚ್ಚು ಪ್ರಸ್ತುತವಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡಬೇಕು.
ಮಾವಳ್ಳಿ ಶಂಕರ್ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT