ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಹಾಳಾದ ನಡಿಗೆ ಪಥಗಳು!

ಮಳೆಗಾಲದಲ್ಲಿ ಜಾರುಬಂಡೆಯಾಗುವ ಪಾದಚಾರಿ ಮಾರ್ಗಗಳಲ್ಲಿ ವಾಯುವಿಹಾರಿಗಳು ಸಂಚಾರ
Published 30 ಅಕ್ಟೋಬರ್ 2023, 20:47 IST
Last Updated 30 ಅಕ್ಟೋಬರ್ 2023, 20:47 IST
ಅಕ್ಷರ ಗಾತ್ರ

ಬೆಂಗಳೂರು: ಹಾಳಾದ ನಡಿಗೆ ಪಥಗಳು, ಮಳೆಗೆ ಕೊಚ್ಚಿ ಹೋಗಿರುವ ಪಾದಚಾರಿ ಮಾರ್ಗದಲ್ಲಿ ಆತಂಕದಿಂದಲೇ ಸಂಚರಿಸುವ ವಾಯುವಿಹಾರಿಗಳು...

ಇದು ಲಾಲ್‌ಬಾಗ್‌ ಉದ್ಯಾನದಲ್ಲಿ ಕಂಡು ಬರುವ ದೃಶ್ಯಗಳು.

ದಶಕಗಳಿಂದ ದುರಸ್ತಿ ಕಾಣದ ಈ ನಡಿಗೆ ಪಥಗಳು ಕಿತ್ತು ಹೋಗಿ, ಸಾಲು ಸಾಲು ಗುಂಡಿಗಳು ಬಿದ್ದಿವೆ. ಪಾದಚಾರಿ ಮಾರ್ಗಗಳು ಸಮತಟ್ಟಾಗಿಲ್ಲದ ಕಾರಣ ವಾಯು ವಿಹಾರಿಗಳು, ಪ್ರವಾಸಿಗರು ನಡೆಯುವಾಗ ಎಲ್ಲಿ ಬೀಳುತ್ತೇವೋ ಎಂಬ ಆತಂಕದಲ್ಲೇ ಹೆಜ್ಜೆ ಹಾಕುತ್ತಾರೆ. ಮಳೆಗಾಲದಲ್ಲಂತೂ ಪಾದಚಾರಿ ಮಾರ್ಗಗಳೆಲ್ಲ ಜಾರು ಬಂಡಿಗಳಾಗುತ್ತವೆ.

ಲಾಲ್‌ಬಾಗ್‌ನ ಬೆಟ್ಟದ ಸುತ್ತಲೂ ಇರುವ 2 ಕಿ.ಮೀ. ಪಾದಚಾರಿ ಮಾರ್ಗ, ಕೆರೆಯ ಸುತ್ತಲೂ ಇರುವ 1 ಕಿ.ಮೀ ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದೆ. ಈ ನಡಿಗೆ ಪಥಗಳಿಗೆ ಹಾಕಲಾಗಿದ್ದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದೆ. ಹದಗೆಟ್ಟಿರುವ ಪಾದಚಾರಿ ಮಾರ್ಗಗಳಲ್ಲಿಯೇ ವಾಯುವಿಹಾರಿಗಳು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಓಟಕ್ಕೆ ಪ್ರತ್ಯೇಕ ಪಥ, ಕೆರೆಯ ಉದ್ದಕ್ಕೂ ಜಾಗಿಂಗ್ ಟ್ರ್ಯಾಕ್ ನಿರ್ಮಾಣ ನಿರ್ಮಿಸಬೇಕು ಎಂಬುದು ವಾಯುವಿಹಾರಿಗಳು ಒತ್ತಾಯ.

‘240 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಲಾಲ್‌ಬಾಗ್‌ ಉದ್ಯಾನದಲ್ಲಿ 11.5 ಕಿ.ಮೀ ನಡಿಗೆ ಪಥವಿದೆ. ಅದರಲ್ಲಿ ರಾಜಾ ಪ್ರತಿಮೆ, ಗುಲಾಬಿ ವನ ಹಾಗೂ ಡಿಎಚ್‌ಒ ಲಾನ್‌ ಹತ್ತಿರದ ಪಾದಚಾರಿ ಮಾರ್ಗಗಳಿಗೆ ಈಗಾಗಲೇ ಹೊಸಕೋಟೆ ಮಣ್ಣು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಹಂತ–ಹಂತವಾಗಿ ಎಲ್ಲ ನಡಿಗೆ ಪಥಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಲಾಲ್‌ಬಾಗ್‌) ಕುಸುಮಾ ಜಿ. ಮಾಹಿತಿ ನೀಡಿದರು.

‘ಲಾಲ್‌ಬಾಗ್‌ ಸಸ್ಯಕಾಶಿಯನ್ನು ನವದೆಹಲಿಯ ನೆಹರೂ ಪಾರ್ಕ್‌ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು. ಉದ್ಯಾನದಲ್ಲಿ ದೂಳು ಮತ್ತು ನೀರು ನಿರೋಧಕ ಸಿಂಥೆಟಿಕ್ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು. ಇದರ ನಿರ್ವಹಣೆಯೂ ಸುಲಭವಾಗಲಿದೆ’ ಎಂದು ಲಾಲ್‌ಬಾಗ್‌ ಹಾಪ್‌ಕಾಮ್ಸ್‌ ಅಧ್ಯಕ್ಷ ಎಂ ಬಾಬು ಹೇಳಿದರು.

ಲಾಲ್‌ಬಾಗ್‌ನ ಸೌಂದರ್ಯ ಹೆಚ್ಚಿಸಲು ಮತ್ತು ವಾಯುವಿಹಾರಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಇಲ್ಲಿನ ಪಾದಚಾರಿಗಳ ಮಾರ್ಗಗಳನ್ನು ಅಭಿವೃದ್ಧಿಗೊಳಿಸಿಬೇಕು.
ಜಯಕುಮಾರ್ ವಾಯುವಿಹಾರಿ

‘ಲಾಲ್‌ಬಾಗ್‌ನಲ್ಲಿ ಪಾದಚಾರಿ ಮಾರ್ಗಗಳಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಸಾಡಿ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿರುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ಭದ್ರತೆ ಬಿಗಿಗೊಳಿಸಬೇಕು ಮತ್ತು ಪ್ಲಾಸ್ಟಿಕ್ ಬಿಸಾಡುವವರನ್ನು ಗುರುತಿಸಿ ದಂಡ ವಿಧಿಸಬೇಕು. ಆ ಮೂಲಕ ಲಾಲ್‌ಬಾಗ್‌ ಅನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕು’ ಎಂದು ವಾಯುವಿಹಾರಿ ಜಯಪ್ರಕಾಶ್ ಒತ್ತಾಯಿಸಿದರು. 

ಲಾಲ್‌ಬಾಗ್‌ನಲ್ಲಿ  15 ವರ್ಷಗಳ ಹಿಂದೆ ಎಲ್ಲ ವಾಕಿಂಗ್‌ ಪಥಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಹಾಕಿದ್ದ ಮಣ್ಣು ಮಳೆಗೆ ಕೊಚ್ಚಿಹೋದ ಕಾರಣ ಈ ಪಥಗಳಲ್ಲಿ ವೃದ್ಧರು ಮತ್ತು ಮಹಿಳೆಯರು ನಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತಾಗಿ ಈ ನಡಿಗೆ ಪಥಗಳು ದುರಸ್ತಿಗೊಳಪಡಬೇಕು ಎಂಬು ವಾಯುವಿಹಾರಿಗಳ ಆಗ್ರಹವಾಗಿದೆ.

ಲಾಲ್‌ಬಾಗ್‌ ಉದ್ಯಾನದ ಕೆರೆಯ ಸುತ್ತಲಿನ ಪಾದಚಾರಿಗಳ ಮಾರ್ಗದಲ್ಲಿ ಹಾಳಾಗಿರುವುದು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಲಾಲ್‌ಬಾಗ್‌ ಉದ್ಯಾನದ ಕೆರೆಯ ಸುತ್ತಲಿನ ಪಾದಚಾರಿಗಳ ಮಾರ್ಗದಲ್ಲಿ ಹಾಳಾಗಿರುವುದು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಸಸ್ಯಕಾಶಿ ಲಾಲ್‌ಬಾಗ್‌ ಉದ್ಯಾನದಲ್ಲಿರುವ ಎಲ್ಲ ನಡಿಗೆ ಪಥಗಳಿಗೆ ಹಾಕಿದ್ದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದೆ. ಎಲ್ಲ ನಡಿಗೆ ಪಥಗಳನ್ನು ಅಭಿವೃದ್ಧಿ ಪಡಿಸುವಂತೆ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರಿಗೆ ಮನವಿ ಸಲ್ಲಿಸಲಾಗಿದೆ.
ಸಿ.ಕೆ. ರವಿಚಂದ್ರ ರಾಜ್ಯ ನಡಿಗೆದಾರರ ಒಕ್ಕೂಟದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT