ಮಂಗಳವಾರ, ಜನವರಿ 21, 2020
25 °C
28 ಎಕರೆ ವಿಸ್ತೀರ್ಣದಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ವಿಘ್ನ

ಕೆಂಪೇಗೌಡರ ಹೆಸರಿನ ಕಲ್ಲಿನ ಕೋಟೆ ಕಟ್ಟಲು ‘ಒತ್ತುವರಿ’ ಗ್ರಹಣ

ವಿಜಯಕುಮಾರ್‌ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲಸಂದ್ರದ ಬಂಡೆ ಎಂದರೆ ನೆನಪಾಗುವುದು ವಿಧಾನಸೌಧ ಮತ್ತು ವಿಕಾಸಸೌಧ. ಈ ಎರಡು ಶಕ್ತಿಸೌಧಗಳಿಗೆ ಕಲ್ಲು ತೆಗೆದಿರುವುದು ಇದೇ ಜಾಗದಲ್ಲಿ. ಇಲ್ಲೀಗ ಕೆಂಪೇಗೌಡರ ನೆನಪಿನಲ್ಲಿ ಕಲ್ಲಿನಕೋಟೆಯೊಂದು ನಿರ್ಮಾಣವಾಗುತ್ತಿದೆ.

ಆದರೆ, ಇದೇ ಸರ್ವೆ ನಂಬರ್‌ನಲ್ಲಿನ ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂಬ ವಿವಾದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲುವಂತೆ ಮಾಡಿದೆ.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲಸಂದ್ರದ ಬಂಡೆ ಪ್ರದೇಶದಿಂದಲೇ  ವಿಧಾನಸೌಧ ಮತ್ತು ವಿಕಾಸಸೌಧ ನಿರ್ಮಾಣಕ್ಕೆ ಕಲ್ಲುಗಳನ್ನು ತೆಗೆಯಲಾಗಿದೆ. 150 ಅಡಿ ಆಳದವರೆಗೂ ಬಂಡೆಗಳನ್ನು ತೆಗೆಯಲಾಗಿದ್ದು, ಸದ್ಯ ಅದನ್ನು ಮುಚ್ಚಲಾಗಿದೆ.

28 ಎಕರೆ ವಿಸ್ತೀರ್ಣದಲ್ಲಿ ಬಿಬಿಎಂಪಿಯಿಂದ ಕಲ್ಲಿನ ಕೋಟೆ ನಿರ್ಮಾಣ ಮಾಡಲಾಗುತ್ತಿದೆ. ಕೋಟೆಯ ಒಳಗೆ ಮತ್ತು ಸುತ್ತಲೂ ಕೆಂಪೇಗೌಡ ಕಾಲವನ್ನು ನೆನಪಿಸುವಂತಹ ಕಲಾಕೃತಿಗಳು ತಲೆಎತ್ತಲಿವೆ. ಕೋಟೆಯ ಒಳಭಾಗದಲ್ಲಿ ಆಟದ ಮೈದಾನ, ಬಯಲು ರಂಗಮಂದಿರ, ಯೋಗ ಕೇಂದ್ರ, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಗ್ರಂಥಾಲಯ, ಬಿಬಿಎಂಪಿ ವಾರ್ಡ್ ಕಚೇರಿ, ಬೆಂಗಳೂರು ಒನ್ ಕಚೇರಿ, ಪೌರಕಾರ್ಮಿಕರ ವಿಶ್ರಾಂತಿ ಕೊಠಡಿ, ದೋಭಿ ಘಾಟ್, ಹಿರಿಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಉದ್ಯಾನ ಸೇರಿದಂತೆ ಒಂದೇ ಸ್ಥಳದಲ್ಲಿ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ.

ಆದರೆ, ಈ ಜಾಗವೀಗ ವಿವಾದದ ಕೇಂದ್ರವಾಗಿದೆ. ಇದೇ ಸರ್ವೆ ನಂಬರ್‌ನಲ್ಲಿ 8 ಎಕರೆಯಷ್ಟು ಸರ್ಕಾರಿ ಜಾಗ ಒತ್ತುವರಿಯಾಗಿದೆ ಎಂದು ಆರೋಪಿಸಿ ಎಸ್.ಎನ್. ಭಾಸ್ಕರ್ ಎಂಬುವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ‘ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಒತ್ತುವರಿ ತೆರವುಗೊಳಿಸಿ ನಂತರ ಕೋಟೆ ಅಭಿವೃದ್ಧಿಪಡಿಸಬೇಕು’ ಎಂಬುದು ಅವರ ಮನವಿ. ಒತ್ತುವರಿಯಾಗಿರುವ ಜಾಗ ತೆರವುಗೊಳಿಸುವ ತನಕ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಹೈಕೋರ್ಟ್‌ ಬಿಬಿಎಂಪಿಗೆ ನಿರ್ದೇಶನ ನೀಡಿದೆ.

ಕಂದಾಯ ಇಲಾಖೆಗೆ ತಲೆನೋವು: ಸರ್ವೆ ನಂಬರ್ 33ರಲ್ಲಿರುವ 28 ಎಕರೆಯ ಜಾಗ ಕಂದಾಯ ಇಲಾಖೆಯಿಂದ ಬಿಬಿಎಂಪಿಗೆ ಹಸ್ತಾಂತರವೇ ಆಗಿಲ್ಲ. ಸರ್ಕಾರಿ ಜಾಗದಲ್ಲಿ ಈಗ ಹಲವು ಕಟ್ಟಡಗಳು ನಿರ್ಮಾಣಗೊಂಡಿವೆ. ತೆರವುಗೊಳಿಸದೆ ಬಿಬಿಎಂಪಿಗೆ ಹಸ್ತಾಂತರ ಮಾಡಲು ಕಂದಾಯ ಇಲಾಖೆಗೆ ಕಷ್ಟ. ಪ್ರಭಾವಿಗಳ ಬೆಂಬಲ ಇರುವ ಕಾರಣ ತೆರವುಗೊಳಿಸುವುದು ಕಂದಾಯ ಇಲಾಖೆಗೆ ತಲೆನೋವು.

ಬಿಬಿಎಂಪಿ ವ್ಯಾಪ್ತಿಯಲ್ಲಿ, ಕಂದಾಯ ಇಲಾಖೆ ಜಾಗ ಬಹುತೇಕ ಕಡೆ ಹಸ್ತಾಂತರ ಆಗಿಲ್ಲ. ಆದರೂ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಂತೆಯೇ ಮಲ್ಲಸಂದ್ರದ ಬಂಡೆ ಜಾಗದಲ್ಲೂ ಬೆಂಗಳೂರಿಗೇ ಮಾದರಿಯಾದ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ ಎನ್ನುವುದು ಬಿಬಿಎಂಪಿ ವಾದ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಮುಂದುವರಿಸಲು ಹೈಕೋರ್ಟ್‌ ಅನುಮತಿ ಕೋರಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

‘ಒತ್ತುವರಿ ತಡೆಯಲು ಕೋಟೆ ನಿರ್ಮಾಣ’

‘ಬೆಂಗಳೂರಿಗೇ ಮಾದರಿಯಾದ ಬಹುಪಯೋಗಿ ಕೋಟೆಗೆ ಕ್ಷೇತ್ರದ ಶಾಸಕ ಆರ್.ಮಂಜುನಾಥ್‌ ಅವರೇ ಅಡ್ಡಿ’ ಎಂದು ಪಾಲಿಕೆ ಸದಸ್ಯ ಎನ್. ಲೋಕೇಶ್ ಆರೋಪಿಸಿದರು.

‘ಸರ್ಕಾರಿ ಜಾಗ ಒತ್ತುವರಿ ಆಗಿರುವುದು ನಿಜ. ಇನ್ನಷ್ಟು ಒತ್ತುವರಿ ತಡೆಯುವ ಉದ್ದೇಶದಿಂದಲೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ₹35 ಕೋಟಿ ಮೊತ್ತದ ಈ ಯೋಜನೆ ಅನುಷ್ಠಾನಗೊಂಡರೆ ನನಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅಡ್ಡಗಾಲಾಗಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧವೇ ಸೋತಿದ್ದ ಆರ್.ಮಂಜುನಾಥ್, ಶಾಸಕರಾದ ಕೂಡಲೇ ಈ ಕಾಮಗಾರಿ ನಿಲ್ಲಿಸುವಂತೆ ಬಿಬಿಎಂಪಿಗೆ ಪತ್ರ ಬರೆದರು. ಅದು ಸಾಧ್ಯವಾಗದೇ ಈಗ ಬೆಂಬಲಿಗರ ಮೂಲಕ ಕೋರ್ಟ್‌ಗೆ ಹೋಗಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರಿ ಭೂಮಿ ಲೂಟಿಗೆ ವಿರೋಧ’

‘ಟೆಂಡರ್ ಕರೆಯದೇ ಕೆಲಸ ನಿರ್ವಹಿಸುತ್ತಿರುವುದು ಮತ್ತು ಬಡವರ ಹೆಸರಿನಲ್ಲಿ ಪ್ರಭಾವಿಗಳೇ ಸರ್ಕಾರಿ ಭೂಮಿ ಲೂಟಿ ಮಾಡುವುದಕ್ಕೆ ನಮ್ಮ ವಿರೋಧ ಇದೆ’ ಎಂದು ಶಾಸಕ ಆರ್‌.ಮಂಜುನಾಥ್ ಹೇಳಿದರು.

‘ಬಡವರು ಸರ್ಕಾರಿ ಭೂಮಿ ಒತ್ತುವರಿ ಮಾಡಿ ಮನೆ ಕಟ್ಟಿದ್ದರೆ ತೊಂದರೆ ಇಲ್ಲ. ಇಲ್ಲಿ ಪ್ರಭಾವಿಗಳೇ ಮನೆ ನಿರ್ಮಿಸಿ, ಬಾಡಿಗೆಗೆ ಬಿಟ್ಟಿದ್ದಾರೆ’ ಎಂದರು.

‘ಯಾವುದೇ ಕಾಮಗಾರಿಗೂ ಟೆಂಡರ್ ಕರೆದಿಲ್ಲ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಕಾಮಗಾರಿ ನಡೆಸುವ ಅಗತ್ಯ ಏನಿತ್ತು. ಪಾಲಿಕೆ ಸದಸ್ಯ ಮತ್ತು ಅವರ ಸಹೋದರನೇ ಗುತ್ತಿಗೆ ನಿರ್ವಹಿಸುತ್ತಿದ್ದಾರೆ. ಒತ್ತುವರಿಗೆ ಪಾಲಿಕೆ ಸದಸ್ಯನೇ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದೂ ಅವರು ಆರೋಪಿಸಿದರು.

‘ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ₹600 ಕೋಟಿ ಅನುದಾನ ತಂದಿದ್ದೆ. ಮಲ್ಲಸಂದ್ರ ವಾರ್ಡ್‌ಗೆ ₹16 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆ. ರಾಜಕೀಯ ಏಳಿಗೆ ಸಹಿಸದೆ ಪಾಲಿಕೆ ಸದಸ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

***

ವಿಧಾನಸೌಧ ನಿರ್ಮಾಣಕ್ಕೂ ಇಲ್ಲಿ 150 ಅಡಿ ಆಳದಿಂದ ಕಲ್ಲುಗಳನ್ನು ತೆಗೆಯಲಾಗಿದೆ. ಇದರ ನೆನಪಿನಲ್ಲಿ ಈ ಜಾಗ ಅಭಿವೃದ್ಧಿ ಮಾಡುತ್ತಿರುವುದು ಸಂತಸದ ಸಂಗತಿ
-ಕೃಷ್ಣಪ್ಪ, ಮಲ್ಲಸಂದ್ರ

***

ಮಲ್ಲಸಂದ್ರದ ಬಂಡೆ ಜಾಗವನ್ನು ಕೋಟೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿದೆ. ಒತ್ತುವರಿ ತೆರವುಗೊಳಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು
-ರಂಗಪ್ಪ, ಮಲ್ಲಸಂದ್ರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು