ಬುಧವಾರ, ನವೆಂಬರ್ 25, 2020
19 °C
ದಿನಪೂರ್ತಿ ಕಚೇರಿ ಮುಂದೆ ಕಾಯ್ದು ಕುಳಿತರೂ ನೆರವೇರದ ಕೆಲಸ

ಭೂ ದಾಖಲೆಗಾಗಿ ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪುರ: ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ಪಹಣಿ ಇನ್ನಿತರ ಭೂ ದಾಖಲೆಗಳಿಗಾಗಿ ಸಾರ್ವಜನಿಕರು ಕೆ.ಆರ್.ಪುರ ತಾಲ್ಲೂಕು ಕಚೇರಿಗೆ ದಿನನಿತ್ಯ ಬರುತ್ತಿದ್ದು ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಾಣಸವಾಡಿ, ಕೆ.ಆರ್.ಪುರ, ಮಹದೇವಪುರ, ಬ್ಯಾಟರಾಯನಪುರ, ಸಿ.ವಿ. ರಾಮನ್ ನಗರ ಸೇರಿದಂತೆ ವಿವಿಧ ಭಾಗಗಳಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ತಾಲ್ಲೂಕು ಕಚೇರಿಗೆ ಬರುವ ಸಾರ್ವಜನಿಕರು ಪ್ರಮಾಣ ಪತ್ರ ಪಡೆಯಲು ಹರಸಾಹಸ ಪಡಬೇಕಾಗಿದೆ.

’ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲು ಸರತಿ ಸಾಲಿನಲ್ಲಿ ನಿಲ್ಲುವ ನಾವು ಇಡೀ ದಿನ ಕಾಯ್ದರೂ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ. ಅಧಿಕಾರಿಗಳು ಹನ್ನೊಂದು ಗಂಟೆಯ ನಂತರ ಬರುತ್ತಾರೆ. ಗಂಟೆಗಟ್ಟಲೆ ಕಾಯಿಸಿದ ನಂತರ ಸರ್ವರ್ ಸಮಸ್ಯೆ ಇದೆ ಎಂಬ ನೆಪ ಹೇಳುತ್ತಾರೆ. ಪ್ರಮಾಣಪತ್ರ ಪಡೆಯಲು ವಾರಗಟ್ಟಲೆ ಅಲೆದಾಡಬೇಕಿದೆ‘ ಎಂದು ಪುರುಷೋತ್ತಮ ಎಂಬುವರು ಹೇಳಿದರು. 

’ಹಿರಿಯ ನಾಗರಿಕರು ಪ್ರಮಾಣಪತ್ರ ಪಡೆಯಲು ಬಂದಾಗ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಬೆಳಿಗ್ಗೆಯಿಂದ ಸಂಜೆ ವರೆಗೆ ಸರತಿ ಸಾಲಿನಲ್ಲಿ ನಿಂತು ಕಾದರೂ ಕೆಲಸ ಆಗುವುದಿಲ್ಲ. ಮಧ್ಯಾಹ್ನ ಊಟಕ್ಕೆ ಹೋದ ಅಧಿಕಾರಿಗಳು ತಡವಾಗಿ ಬರುತ್ತಾರೆ. ಸಾರ್ವಜನಿಕರ ಗೋಳು ಕೇಳುವವರಿಲ್ಲ‘ ಎಂದು ರಾಮಮೂರ್ತಿನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ವಿ.ರಾಮರಾವ್ ತಿಳಿಸಿದರು.

’ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಆಗುತ್ತಿಲ್ಲ. ಪ್ರಭಾವಿ ವ್ಯಕ್ತಿಗಳಿಗಷ್ಟೇ ಮಣೆ ಹಾಕುತ್ತಾರೆ‌‘ ಎಂದು ರಮೇಶ್ ಎಂಬುವರು ದೂರಿದರು. 

’ಕೆಲವೊಮ್ಮೆ ಜಾಸ್ತಿ ಜನ ಇದ್ದಾಗ ಸರತಿ ಸಾಲು ಇರುತ್ತದೆ. ಜನರು ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹುದು. ಕೆಲವು ಅಧಿಕಾರಿಗಳು ಕಚೇರಿಗೆ ಸರಿಯಾಗಿ ಬರುತ್ತಿಲ್ಲ ಎಂಬ ದೂರು ಬಂದಿತ್ತು. ಅವರಿಗೆ ನೋಟಿಸ್‌ ನೀಡಲಾಗಿದೆ. ಜನರ ಸಮಸ್ಯೆ
ಬಗ್ಗೆ ಗುರುವಾರ ಗಮನ ಹರಿಸುತ್ತೇನೆ‘ ಎಂದು ತಹಶಿಲ್ದಾರ್ ತೇಜಸ್ ಕುಮಾರ್ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು