ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ ಗುತ್ತಿಗೆ ಅಕ್ರಮ: ₹ 64.08 ಕೋಟಿ ನಷ್ಟ

ಎರಡು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ: ಮುನಿರತ್ನ
Last Updated 13 ಫೆಬ್ರುವರಿ 2023, 19:44 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನ ಒಳಭಾಗದಲ್ಲಿ ದಿ. ನರ್ಸರಿ ಮೆನ್‌ ಕೋ ಆಪರೇಟಿವ್‌ ಸೊಸೈಟಿ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳಿಗೆ ಅಕ್ರಮವಾಗಿ ಜಮೀನು ಗುತ್ತಿಗೆಗೆ ನೀಡಿರುವುದರಿಂದ ₹ 64.01 ಕೋಟಿ ನಷ್ಟವಾಗಿದೆ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದರು.

ಖಾಸಗಿ ಸೊಸೈಟಿಗಳಿಗೆ ಲಾಲ್‌ಬಾಗ್‌ನ ಒಳ ಭಾಗದಲ್ಲಿ ಸರ್ಕಾರಿ ಜಮೀನನ್ನು ಸುದೀರ್ಘ ಕಾಲದಿಂದ ಗುತ್ತಿಗೆಗೆ ನೀಡಿರುವುದರಲ್ಲಿ ಆಗಿರುವ ಅಕ್ರಮ ಕುರಿತು ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ವಿಧಾನ ಪರಿಷತ್‌ನಲ್ಲಿ ಸೋಮವಾರ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರ ನೀಡಿದರು.

ನರ್ಸರಿ ಮೆನ್‌ ಕೋ ಆಪರೇಟಿವ್‌ ಸೊಸೈಟಿಗೆ 1 ಎಕರೆ 29 ಗುಂಟೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಕ್ಕೆ 28 ಗುಂಟೆ ಜಮೀನನ್ನು 1991ರಲ್ಲಿ ಗುತ್ತಿಗೆಗೆ ನೀಡಲಾಗಿತ್ತು. 25 ವರ್ಷಗಳ ಗುತ್ತಿಗೆ ಅವಧಿಯು 2016ರ ಮಾರ್ಚ್‌ಗೆ ಮುಕ್ತಾಯವಾಗಿದೆ. ಏಳು ವರ್ಷಗಳಿಂದ ಅಕ್ರಮವಾಗಿ ಎರಡೂ ಸಂಸ್ಥೆಗಳು ಸರ್ಕಾರಿ ಜಮೀನನ್ನು ಸ್ವಾಧೀನದಲ್ಲಿರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಏಳು ವರ್ಷಗಳ ಅವಧಿಯಲ್ಲಿ ಗರಿಷ್ಠ ಬಾಡಿಗೆ ದರವನ್ನು ಗಣನೆಗೆ ತೆಗೆದುಕೊಂಡರೆ ನರ್ಸರಿ ಮೆನ್‌ ಕೋ ಆಪರೇಟಿವ್‌ ಸೊಸೈಟಿ ₹ 44.01 ಕೋಟಿ ಹಾಗೂ ಮೈಸೂರು ಉದ್ಯಾನ ಕಲಾ ಸಂಘದಿಂದ ₹ 20.07 ಕೋಟಿ ಬಾಕಿ ಇದೆ. ಎರಡೂ ಸಂಸ್ಥೆಗಳ ಸ್ವಾಧೀನದಲ್ಲಿದ್ದ ಜಮೀನು ಹಿಂಪಡೆಯಲು 2022ರ ಅಕ್ಟೋಬರ್‌ 18ರಂದು ಆದೇಶ ಹೊರಡಿಸಲಾಗಿದೆ. ಆದರೆ, ಹೈಕೋರ್ಟ್‌ನಲ್ಲಿ ವ್ಯಾಜ್ಯ ಇರುವುದರಿಂದ ತೆರವು ಕಾರ್ಯ ಬಾಕಿ ಉಳಿದಿದೆ ಎಂದು ಮುನಿರತ್ನ ವಿವರಿಸಿದರು.

ಸರ್ಕಾರಿ ಸಿಬ್ಬಂದಿ ಬಳಸಿ ಲಾಭ: ‘ನರ್ಸರಿ ಮೆನ್‌ ಕೋ ಆಪರೇಟಿವ್‌ ಸೊಸೈಟಿಯು ರಾಜ್ಯದ ರೈತರು ಮತ್ತು ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಕೆಲಸ ಮಾಡುವುದಾಗಿ ಜಮೀನು ಪಡೆದಿತ್ತು. ಆದರೆ, ನಗರದ ಉದ್ಯಾನಗಳ ನಿರ್ವಹಣೆ ಕಾಮಗಾರಿಯ ಗುತ್ತಿಗೆ ಪಡೆದು, ಕೆಲಸ ಮಾಡಿದೆ. ಈವರೆಗೆ ₹ 708 ಕೋಟಿ ವಹಿವಾಟು ನಡೆಸಿದ್ದು, ₹ 255 ಕೋಟಿ ಲಾಭ ಗಳಿಸಿದೆ. ಕೆಲವೇ ವ್ಯಕ್ತಿಗಳು ಈ ಮೊತ್ತವನ್ನು ಬಳಸಿಕೊಂಡಿರುವುದು ಪರಿಶೀಲನೆಯಲ್ಲಿ ಪತ್ತೆಯಾಗಿದೆ’ ಎಂದರು.

‘ಮೈಸೂರು ಉದ್ಯಾನ ಕಲಾ ಸಂಘವು ಲಾಲ್‌ಬಾಗ್‌ನಲ್ಲಿ ನಡೆಯುವ ಫಲ, ಪುಷ್ಪ ಪ್ರದರ್ಶನವನ್ನು ದುರ್ಬಳಕೆ ಮಾಡಿಕೊಂಡು ಹಣ ಗಳಿಸಿದೆ. ತೋಟಗಾರಿಕಾ ಇಲಾಖೆ ಹಾಗೂ ಲಾಲ್‌ ಬಾಗ್‌ ಸಿಬ್ಬಂದಿ ಶ್ರಮವಹಿಸಿ ಪ್ರದರ್ಶನ ಆಯೋಜಿಸುತ್ತಿದ್ದರು. ಆದರೆ, ಸಂಗ್ರಹವಾದ ಹಣದಲ್ಲಿ ಶೇಕಡ 95ರಷ್ಟು ಮೈಸೂರು ಉದ್ಯಾನ ಕಲಾ ಸಂಘಕ್ಕೆ ಪಾವತಿಯಾಗುತ್ತಿತ್ತು. ಈ ಕಾರಣದಿಂದ 2023ರ ಗಣ ರಾಜ್ಯೋತ್ಸವದಿಂದ ರಾಜ್ಯ ಸರ್ಕಾರ ಸ್ವತಂತ್ರವಾಗಿ ಪ್ರದರ್ಶನ ಆಯೋಜಿಸುತ್ತಿದೆ’ ಎಂದು ತಿಳಿಸಿದರು.

ಅಧಿಕಾರಿಗಳು ಸೇರಿದಂತೆ ಅಕ್ರಮಕ್ಕೆ ಕಾರಣವಾದ ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT