ಬುಧವಾರ, ಆಗಸ್ಟ್ 10, 2022
20 °C
ಬಲವಂತದಿಂದ ಯಾರನ್ನೂ ಹೊರಹಾಕುವಂತಿಲ್ಲ: ಮಾಲೀಕರಿಗೆ ಸೂಚನೆ

ಊರಿಗೆ ಮರಳಿ: ಪಿ.ಜಿ, ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿದ್ಯಾರ್ಥಿನಿಲಯಗಳಲ್ಲಿ ನೆಲೆಸಿರುವ ಹಾಗೂ ಪೇಯಿಂಗ್‌ ಗೆಸ್ಟ್‌ಗಳಾಗಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಸ್ವಂತ ಊರಿಗೆ ಮರಳುವಂತೆ ಬಿಬಿಎಂಪಿ ಸಲಹೆ ನೀಡಿದೆ.

‘ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿಲ್ಲವಾದರೆ, ಇಲ್ಲಿನ ಹಾಸ್ಟೆಲ್‌ಗಳಲ್ಲಿ ಹಾಗೂ ಪಿ.ಜಿ. ಹೋಂಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಊರಿಗೆ ಮರಳಬೇಕು. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ನಗರವನ್ನು ತೊರೆಯುವುದು ಸಾಧ್ಯವಾಗದೇ ಇದ್ದರೆ, ವೈಯಕ್ತಿಕ ಸ್ವಚ್ಛತೆ ಕಾಪಾಡುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬಿಬಿಎಂಪಿ ತಿಳಿಸಿದೆ.

ಹಾಸ್ಟೆಲ್‌ ಹಾಗೂ ಪಿ.ಜಿ.ಹೋಂಗಳಲ್ಲಿ ಕೋವಿಡ್‌ ಹರಡುವಿಕೆ ನಿಯಂತ್ರಣದ ಸಲುವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಸೋಮವಾರ ಮಾರ್ಗಸೂಚಿ ಹೊರಡಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಹಾಸ್ಟೆಲ್‌ ಅಥವಾ ಪಿ.ಜಿ. ಹೋಂನಲ್ಲಿ ಉಳಿದುಕೊಂಡಿರುವವರನ್ನು ಮುನ್ಸೂಚನೆ ನೀಡದೇ ಮಾಲೀಕರು ಬಲವಂತದಿಂದ ಹೊರಹಾಕುವಂತಿಲ್ಲ. ‌ಬೇರೆ ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳುವವರೆಗೂ ಅವರಿಗೆ ಕಾಲಾವಕಾಶ ನೀಡಬೇಕು’  ಎಂದು ಮಾರ್ಗಸೂಚಿಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

‘ಒಂದೇ ಕೋಣೆಯಲ್ಲಿ, ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವ್ಯಕ್ತಿಗಳು ಉಳಿದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸುವಂತಿಲ್ಲ. 110 ಚದರ ಅಡಿಯಷ್ಟು ವಿಸ್ತೀರ್ಣದ ಕೋಣೆಯಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಉಳಿದುಕೊಳ್ಳುವಂತಿಲ್ಲ’ ಎಂದು ತಿಳಿಸಿದ್ದಾರೆ.

‘ಪಿ.ಜಿ. ಹೋಂ ಹಾಗೂ ಹಾಸ್ಟೆಲ್‌ಗಳ ಸ್ವಚ್ಛತೆ ಕಾಪಾಡುವುದು ಅದರ ಮಾಲೀಕರ ಮತ್ತು ವ್ಯವಸ್ಥಾಪಕರ ಹೊಣೆ. ಇವುಗಳಲ್ಲಿ ಕೊರೊನಾ ಸೋಂಕು ಹರಡಿದ್ದು ಪತ್ತೆಯಾದರೆ ಮಾಲೀಕರನ್ನು ಹಾಗೂ ವ್ಯವಸ್ಥಾಪಕರನ್ನೇ ಹೊಣೆಯಾಗಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು