ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿ ಸೃಷ್ಟಿಸಿದ ಚಿರತೆ: ಕೆಂಗೇರಿ ಬಳಿ ದಾಳಿಗೆ ಜಿಂಕೆ ಬಲಿ

ಕೆಂಗೇರಿ ಬಳಿ ದಾಳಿಗೆ ಜಿಂಕೆ ಬಲಿ
Last Updated 1 ಡಿಸೆಂಬರ್ 2022, 18:51 IST
ಅಕ್ಷರ ಗಾತ್ರ

ಕೆಂಗೇರಿ: ಕೆಂಗೇರಿ ಬಳಿಯ ಶ್ರೀಧರಗುಡ್ಡ ಗ್ರಾಮಕ್ಕೆ ಹೊಂದಿಕೊಂಡಂತಿರುವ ಪ್ರದೇಶಕ್ಕೆ ಚಿರತೆ ಬಂದಿದ್ದು ಈ ಭಾಗದಲ್ಲಿ ಭೀತಿ ಸೃಷ್ಟಿಸಿದೆ. ಚಿರತೆ ದಾಳಿಗೆ ಜಿಂಕೆ ಬಲಿಯಾಗಿದೆ.

ಗುರುವಾರ ವಾಯುವಿಹಾರಕ್ಕೆ ತೆರಳಿದ್ದ ವಾಯುವಿಹಾರಿ ಶಾಂತರಾಜು ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯ ಕಳೇಬರವನ್ನು ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದ್ದಾರೆ. ಬುಧವಾರ ಮಧ್ಯರಾತ್ರಿ ಸುಮಾರು 12.30ರ ಸಮಯದಲ್ಲಿ ಚಿರತೆಯೊಂದು ಜಿಂಕೆ ಮೇಲೆ ದಾಳಿ ನಡೆಸಿ ಕೊಂದು ಹಾಕಿತು ಎಂದು ಪ್ರತ್ಯಕ್ಷದರ್ಶಿ ಚಾಲಕರೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು ಸೋಂಪುರ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು ಗಂಗಾಧರ ಎಂಬುವರ ಮನೆಯ ಹಸು ತಿಂದು ಹಾಕಿತ್ತು. ಚಿರತೆ ದಾಳಿ ನಡೆದಿರುವ ಸ್ಥಳದ ಬಳಿಯಲ್ಲೇ ನೂರಾರು ಮನೆಗಳಿರುವುದು ಜನರನ್ನು ಆತಂಕಕ್ಕೆ ದೂಡಿದೆ.

‘ಸೋಂಪುರ ಗ್ರಾಮದ ಬಳಿ ರಾಷ್ಟ್ರೋತ್ಥಾನ ಶಾಲೆ, ಚಿನ್ಮಯಿ ಶಾಲೆ ಇದೆ. ನೂರಾರು ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶ್ರೀಧರ ಗುಡ್ಡ ಬಳಿ ಇರುವ ಸರ್ಕಾರಿ ಶಾಲೆ ಮಕ್ಕಳು ಕೂಡ ಇದೇ ಅರಣ್ಯ ವಲಯದ ಮುಖಾಂತರ ಸಾಗಬೇಕಾಗಿದೆ. ಅರಣ್ಯ ಇಲಾಖೆ ಈಗಲೇ ಎಚ್ಚೆತ್ತುಕೊಂಡು ಚಿರತೆ ಸೆರೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಚಿರತೆಗಳು ಮನುಷ್ಯರ ಮೇಲೂ ದಾಳಿ ನಡೆಸುವ ಸಂಭವವಿದೆ’ ಎಂದು ಸ್ಥಳೀಯ ಮುಖಂಡ ದೇವರಾಜು ಆತಂಕ ವ್ಯಕ್ತ ಪಡಿಸಿದರು. ಚಿರತೆ ಹಿಡಿಯುವವರೆಗೆ ಮನೆಯ ಸುತ್ತಮುತ್ತಲೇ ನಾವು ತಿರುಗಾಡಬೇಕಾಗುತ್ತದೆ ಎಂದು ಕೋಡಿಪಾಳ್ಯ ನಿವಾಸಿ ಶಿವಕುಮಾರ್ ಬೇಸರ ಹೊರಹಾಕಿದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕಳೆದ ವರ್ಷ ಚಿರತೆ ದಾಳಿಗೆ ಹಸು, ನಾಯಿ ಹಾಗೂ ಕುರಿಗಳು ಬಲಿಯಾದ ಘಟನೆ ನಡೆದಿತ್ತು. ಅರಣ್ಯ ಇಲಾಖೆಯಿಂದ ಪುನುಗುಮಾರನಹಳ್ಳಿ ಬಳಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದ ಪರಿಣಾಮ ಗಣಪತಿ ಹಳ್ಳಿ, ಪೆದ್ದಮಾರನಹಳ್ಳಿ, ಮಾಳಗೊಂಡನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ನೆಮ್ಮದಿಯಿಂದ ಉಸಿರಾಡುವಂತಾಯಿತು. ಈಗ ಮತ್ತೆ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.

ಮಾಹಿತಿ ಪಡೆಯಲು ಕಗ್ಗಲೀಪುರ ಅರಣ್ಯಾಧಿಕಾರಿ ಗೋವಿಂದ ರಾಜು ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT