ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸ್–ನ್ಯಾಯಾಂಗಕ್ಕೆ ಜಾಗೃತಿ ಮೂಡಿಸಬೇಕಿದೆ’

ಲೈಂಗಿಕ ಅಲ್ಪಸಂಖ್ಯಾತರು ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆ ಕುರಿತ ವಿಚಾರ ಸಂಕಿರಣ
Last Updated 24 ಜನವರಿ 2023, 16:34 IST
ಅಕ್ಷರ ಗಾತ್ರ

ಬೆಂಗಳೂರು: ‘ಲೈಂಗಿಕ ಅಲ್ಪಸಂಖ್ಯಾತರ ತಲ್ಲಣಗಳ ಬಗ್ಗೆ ‌ಪೊಲೀಸ್ ಮತ್ತು ನ್ಯಾಯಾಂಗಕ್ಕೆ ಜಾಗೃತಿ ಮೂಡಿಸುವ ತನಕ ಎಷ್ಟೇ ಕಾನೂನು ತಂದರೂ ಅವು ನಿಷ್ಕ್ರಿಯವಾಗುತ್ತವೆ’ ಎಂದು ತಮಿಳುನಾಡಿನ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಲಿಜಬೆತ್ ಪ್ರತಿಪಾದಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ’ಒಂದೆಡೆ’ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‌‘ಲೈಂಗಿಕ ಅಲ್ಪಸಂಖ್ಯಾತರು ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆ–2005’ ಕುರಿತ ದಕ್ಷಿಣ ಭಾರತ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಾನೂನು ಮತ್ತು ಸಮುದಾಯ ಎರಡೂ ದೊಡ್ಡ ವಿಷಯಗಳು. ಈ ಸಮುದಾಯವನ್ನು ಅರ್ಥ ಮಾಡಿಕೊಳ್ಳುವ ಅಧ್ಯಯನ ನಡೆಯಬೇಕಿದೆ. ಆ ಅಧ್ಯಯನದಲ್ಲಿ ಬರುವ ಅಂಶಗಳನ್ನು ಶಿಕ್ಷಣದೊಳಗೆ ಸೇರಿಸಬೇಕಾಗುತ್ತದೆ. ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಬದುಕಿನ ಬಗ್ಗೆ ಸಮಾಜಕ್ಕೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ’ ಎಂದರು.

‘ಈಗಾಗಲೇ ಹಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಕಾನೂನುಗಳಿಂದ ಈ ಸಮುದಾಯಕ್ಕೆ ನ್ಯಾಯ ದೊರೆಯುತ್ತಿಲ್ಲ. ಆದ್ದರಿಂದ, ಪೊಲೀಸ್ ಸಿಬ್ಬಂದಿಗೆ ಮತ್ತು ನ್ಯಾಯಾಂಗ ವಲಯದಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ಪುರುಷ ಪ್ರಧಾನ ಮನಸ್ಥಿತಿ ಮೊಟ್ಟ ಮೊದಲನೆಯದಾಗಿ ಕುಟುಂಬದಿಂದ ಹೋಗಬೇಕಿದೆ. ಬಟ್ಟೆ ಹಾಕುವುದರಿಂದ ಆದಿಯಾಗಿ ಎಲ್ಲ ವಿಷಯದಲ್ಲೂ ಮಹಿಳೆ ಹೀಗೇ ಇರಬೇಕು ಎಂಬುದನ್ನು ಪುರುಷರು ನಿರ್ಧರಿಸುತ್ತಾರೆ. ಈ ಮನಸ್ಥಿತಿ ಬದಲಾಗಬೇಕಿದೆ’ ಎಂದು ಹೇಳಿದರು.

’ಒಂದೆಡೆ’ ಸಂಸ್ಥೆ ಸಂಸ್ಥಾಪಕಿ ಅಕೈ ಪದ್ಮಶಾಲಿ ಮಾತನಾಡಿ, ‘ವಿಚಾರ ಸಂಕಿರಣದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕಚೇರಿಗಳಿಗೆ ಕಳುಹಿಸಲಾಗುವುದು’ ಎಂದು ಹೇಳಿದರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜು ಗಾಂಧಿ, ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಅಧ್ಯಕ್ಷೆ ಪ್ರೊ. ರಿತಿಕ ಸಿನಾ ಮಾತನಾಡಿದರು. ಅಕೈ ಪದ್ಮಶಾಲಿ ಅವರ ಜೀವನಾಧಾರಿತ ನಾಟಕವನ್ನು ಕಾಜಾಣ ರಂಗಪಯಣ ತಂಡ ಪ್ರಸ್ತುಪಡಿಸಿತು.

ವಿಚಾರ ಸಂಕಿರಣದ ನಿರ್ಣಯಗಳು

* 2005ರ ಕೌಟುಂಬಿಕ ದೌರ್ಜನ್ಯ ಕಾಯ್ದೆಯನ್ನು ಮರು ವ್ಯಾಖ್ಯಾನಕ್ಕೆ ಒಳಪಡಿಸಿ ಇನ್ನಷ್ಟು ವಿಸ್ತರಿಸಬೇಕು.

* ಲೈಂಗಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿಗೆ ಸೇರಿಸಬೇಕು. ಶಾಸನ ಸಭೆಗಳ ಮೂಲಕ ರಾಜ್ಯ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರಬೇಕು.

* ಕುಟುಂಬ ಎಂದರೆ ಗಂಡಸು–ಹೆಂಗಸು ಇರುವುದು ಮಾತ್ರವಲ್ಲ. ಲೈಂಗಿಕ ಅಲ್ಪಸಂಖ್ಯಾತರ ಕುಟುಂಬಕ್ಕೂ ಮನ್ನಣೆ ಸಿಗಬೇಕು.

* ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಎಷ್ಟು ದೌರ್ಜನ್ಯಗಳು ನಡೆದಿವೆ ಎಂಬುದರ ಕುರಿತು ದಕ್ಷಿಣ ಭಾರತದಾದ್ಯಂತ ಅಧ್ಯಯನ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT