ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಶುಚಿಗಾರರಿಗೆ ಕನಿಷ್ಠ ವೇತನವಿಲ್ಲ

ತಿಂಗಳಿಗೆ ಕೈ ಸೇರುವುದು ಕೇವಲ ₹ 6,500 – ಜೀವನ ನಿರ್ವಹಣೆಗೂ ಪರದಾಡುವ ಸ್ಥಿತಿ
Last Updated 11 ಸೆಪ್ಟೆಂಬರ್ 2020, 18:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಚಿಗಾರರು32 ವರ್ಷಗಳಿಂದ ಕನಿಷ್ಠ ವೇತನಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜತೆಗೆ ಗುದ್ದಾಟ ನಡೆಸುತ್ತಿದ್ದು, ನೂರಾರು ಮಂದಿ ಇದೇ ಕೊರಗಿನಲ್ಲಿ ವೃದ್ಧಾಪ್ಯಕ್ಕೆ ಜಾರಿದ್ದಾರೆ.

ಒಪ್ಪಂದದ ಆಧಾರದ ಮೇಲೆ ಸದ್ಯ ನಗರದ ಐದು ವಲಯಗಳಲ್ಲಿ 350ಕ್ಕೂ ಅಧಿಕ ಶುಚಿಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.1988ರಲ್ಲಿ ಗ್ರಂಥಾಲಯಗಳು ಆರಂಭವಾದಾಗ ತಿಂಗಳಿಗೆ ₹ 250 ಗೌರವಧನ ಪಡೆಯುತ್ತಿದ್ದ ಈ ಸಿಬ್ಬಂದಿ, ಈಗ ₹ 6,500ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕೈಬರಹದಲ್ಲಿರುವ ಒಪ್ಪಂದ ಪತ್ರವನ್ನು ಹೊರತುಪಡಿಸಿದರೆ ಇವರ ಬಳಿ ಅಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಬೇರೆ ಯಾವುದೇ ದಾಖಲಾತಿಗಳೂ ಇಲ್ಲ. ಗೌರವಧನವನ್ನು ನಗದು ರೂಪದಲ್ಲಿ ನೀಡಲಾಗುತ್ತಿದ್ದು, ಅದು ಕೂಡ ತಿಂಗಳ ಮೊದಲ ವಾರದಲ್ಲಿ ಕೈಸೇರುತ್ತಿಲ್ಲ ಎಂದು ಶುಚಿಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನಿಷ್ಠ ವೇತನ ಹಾಗೂ ಉದ್ಯೋಗ ಭದ್ರತೆ ನೀಡುವಂತೆ ಇವರು ಸಹಾಯಕ ಕಾರ್ಮಿಕ ಆಯುಕ್ತರ ಮೊರೆ ಹೋಗಿದ್ದು, ಎರಡು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಗ್ರಂಥಾಲಯಗಳನ್ನು ಸ್ವಚ್ಛಪಡಿಸುವ ಜತೆಗೆ ಪುಸ್ತಕಗಳನ್ನು ಜೋಡಿಸುವುದು, ಸಂಖ್ಯೆ ದಾಖಲಿಸುವುದು, ಮುದ್ರೆ ಹಾಕುವುದು, ಪುಸ್ತಕಗಳ ವಿತರಣೆ ಸೇರಿದಂತೆ ಹಲವುಕೆಲಸಗಳನ್ನು ಅವರು ಮಾಡುತ್ತಿದ್ದಾರೆ.

‘ಬೇರೆ ಬೇರೆ ಕಾರಣಗಳಿಂದ ಹಲವರು ಕೆಲಸ ತ್ಯಜಿಸಿದ್ದಾರೆ. ಅವರ ಹೆಸರಿನಲ್ಲಿ ಕೂಡ ಗ್ರಂಥಾಲಯದ ಮೇಲಾಧಿಕಾರಿಗಳು ಗೌರವಧನವನ್ನು ಪಡೆದು, ತಮ್ಮ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ’ ಎಂದು ಶುಚಿಗಾರರು ಆರೋಪಿಸಿದ್ದಾರೆ.

‘20 ವರ್ಷಗಳಿಂದ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಒಪ್ಪಂದದ ಪ್ರಕಾರ ಎರಡು ಗಂಟೆ ಕೆಲಸ ಮಾಡಬೇಕಾದರೂ 8
ಗಂಟೆಗಳು ದುಡಿಸಿಕೊಳ್ಳಲಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಯಾವುದೇ ಸೌಲಭ್ಯಗಳನ್ನು ನಮಗೆ ನೀಡುತ್ತಿಲ್ಲ. ನಮ್ಮ ಕೆಲಸವನ್ನು ಗುರುತಿಸಿ, ಕನಿಷ್ಠ ವೇತನವನ್ನು ನೀಗದಿಪಡಿಸಬಹುದು ಎಂಬ ಭರವಸೆಯಲ್ಲಿದ್ದೆವು. ಆದರೆ, ನಮ್ಮ ಸಮಸ್ಯೆಗಳಿಗೆ ಸ್ಪಂದನೆ ದೊರೆಯದ ಕಾರಣ ಸಹಾಯಕ ಕಾರ್ಮಿಕ ಆಯುಕ್ತರ ಮೊರೆ ಹೋದೆವು’ ಎಂದುಶುಚಿಗಾರ್ತಿ ಗಾಯತ್ರಿ ತಿಳಿಸಿದರು.

ಜೀವನ ನಿರ್ವಹಣೆ ಕಷ್ಟ: ‘1994ರಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಆರಂಭದಲ್ಲಿ ತಿಂಗಳಿಗೆ ₹ 300 ಗೌರವಧನ ನೀಡಲಾಗುತ್ತಿತ್ತು. ಈಗ ₹ 6,500 ಗೌರವಧನ ಸಿಗುತ್ತಿದೆ. ನಮ್ಮ ಬಗ್ಗೆ ಯಾರೂ ಅನುಕಂಪ ತೋರಿಸುತ್ತಿಲ್ಲ. ಜೀವನ ನಿರ್ವಹಣೆಯೂ ಕಷ್ಟವಾಗಿದೆ. ನನ್ನೊಂದಿಗೆ ಕೆಲಸ ಪ್ರಾರಂಭಿಸಿದ ಹಲವರು ಬೇಸತ್ತು ಉದ್ಯೋಗ ತ್ಯಜಿಸಿದ್ದಾರೆ. ನಾವು ಆಶಾವಾದದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೆ, ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಗಮನಿಸುತ್ತಿಲ್ಲ’ ಎಂದುಜಯನಗರ ಗ್ರಂಥಾಲಯದ ಶುಚಿಗಾರ ಮುಕುಂದ ಬೇಸರ ವ್ಯಕ್ತಪಡಿಸಿದರು.

‘ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ತುರ್ತು ಸಂದರ್ಭಗಳಲ್ಲಿ ರಜೆ ಕೂಡ ಸಿಗುವುದಿಲ್ಲ. ಒಂದು ವೇಳೆ ರಜೆ ಪಡೆದಲ್ಲಿ ಗೌರವಧನವನ್ನು ಕಡಿತ ಮಾಡಲಾಗುತ್ತದೆ. ನಾವು ಅಸಹಾಯಕರಾಗಿದ್ದೇವೆ. ಈಗ ಬೇರೆ ಕಡೆ ಕೆಲಸ ಪಡೆದುಕೊಳ್ಳುವ ಶಕ್ತಿ ಕೂಡ ನಮಗಿಲ್ಲ. ಮುಂದಿನ ದಾರಿ ತೋಚದಂತಾಗಿದೆ’ ಎಂದು ಶುಚಿಗಾರ ಕೃಷ್ಣಪ್ಪ ತಿಳಿಸಿದರು.

***

ಶುಚಿಗಾರರಿಗೆ ಕನಿಷ್ಠ ವೇತನ ನೀಡುವ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ

–ಡಾ. ಸತೀಶ ಕುಮಾರ್ ಎಸ್. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

***

ನಾವು 2 ಗಂಟೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸುಳ್ಳು ಮಾಹಿತಿಯನ್ನು ಅಧಿಕಾರಿಗಳು ಸರ್ಕಾರ ಹಾಗೂ ಕಾರ್ಮಿಕ ನ್ಯಾಯಾಲಯಕ್ಕೆ ನೀಡಿದ್ದಾರೆ. ದಿನವಿಡೀ ದುಡಿಸಿಕೊಳ್ಳಲಾಗುತ್ತಿದೆ
– ಜಯಲಕ್ಷ್ಮಿ, ಆಜಾದ್‌ನಗರ ಗ್ರಂಥಾಲಯದ ಶುಚಿಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT