ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವ ವಿಮೆ ಸೋಗು: ₹ 4.51 ಕೋಟಿ ವಂಚನೆ

ಯೂಟ್ಯೂಬ್ ವಿಡಿಯೊ ನೋಡಿ ಸಂಚು
Published 26 ಮಾರ್ಚ್ 2024, 14:32 IST
Last Updated 26 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಜೀವ ವಿಮೆ ಮಾಡಿಸಿಕೊಡುವುದಾಗಿ ಹೇಳಿ ಜನರಿಂದ ₹ 4.51 ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ಮನೋಜ್ ಸಿಂಗ್ ಅಲಿಯಾಸ್ ಮನ್ವೀರ್‌ಸಿಂಗ್ (40) ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮನೋಜ್‌ಸಿಂಗ್, ದೇಶದ ಹಲವು ರಾಜ್ಯಗಳ ಜನರನ್ನು ವಂಚಿಸಿದ್ದ. ಈತನನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ ನಗರಕ್ಕೆ ಇತ್ತೀಚೆಗೆ ಕರೆತರಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದರು.

‘ಆರೋಪಿ ಕೃತ್ಯದ ಬಗ್ಗೆ ನಗರದ ವಿವಿಧ ಸೈಬರ್‌ ಕ್ರೈಂ ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿದ್ದವು. ತನಿಖೆ ಕೈಗೊಂಡಾಗ, ₹ 4.51 ಕೋಟಿ ವಂಚನೆ ಆಗಿರುವುದು ಗೊತ್ತಾಗಿದೆ. ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್, ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಇನ್ಸೂರೆನ್ಸ್ ಕಂಪನಿ ಹೆಸರಿನಲ್ಲಿ ಆರೋಪಿ ಜನರನ್ನು ವಂಚಿಸುತ್ತಿದ್ದ’ ಎಂದು ತಿಳಿಸಿದರು.

ವಿಡಿಯೊ ನೋಡಿ ಸಂಚು: ‘ಆರೋಪಿ ಮನೋಜ್‌ಸಿಂಗ್, ಬಿ.ಎಸ್ಸಿ ಪದವೀಧರ. ನೋಯ್ಡಾದಲ್ಲಿರುವ ಕಂಪನಿಯೊಂದರಲ್ಲಿ ಕೆಲ ತಿಂಗಳು ಕೆಲಸ ಮಾಡಿದ್ದ. ವೇತನ ಕಡಿಮೆ ಇದ್ದಿದ್ದರಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ರಿಯಲ್‌ ಎಸ್ಟೇಟ್ ಏಜೆಂಟ್‌ನಾಗಿ ಕೆಲಸ ಮುಂದುವರಿಸಿದ್ದ ಈತ, ಸಾಕಷ್ಟು ನಷ್ಟ ಅನುಭವಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಹೆಚ್ಚು ಹಣ ಸಂಪಾದಿಸಬೇಕು ಎಂದುಕೊಂಡಿದ್ದ ಆರೋಪಿ, ಜೀವ ವಿಮೆಗೆ ಸಂಬಂಧಪಟ್ಟ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಗ್ರಾಹಕರನ್ನು ಹೇಗೆ ಸಂಪರ್ಕಿಸಬೇಕು ? ಅವರ ಜೊತೆ ಹೇಗೆ ಮಾತನಾಡಬೇಕು ? ಜೀವ ವಿಮೆ ನಕಲಿ ದಾಖಲೆ ಸೃಷ್ಟಿ ಹೇಗೆ ? ಎಂಬುದನ್ನು  ತಿಳಿದುಕೊಂಡಿದ್ದ. ನಂತರವೇ, ಜೀವ ವಿಮೆ ಹೆಸರಿನಲ್ಲಿ ಜನರನ್ನು ವಂಚಿಸಲು ಸಂಚು ರೂಪಿಸಿದ್ದ’ ಎಂದು ತಿಳಿಸಿದರು.

ಕಿಸಾನ್ ಸೇವಾ ಕೇಂದ್ರ ನಿರ್ವಹಣೆ: ‘ಆರಂಭದಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ್ದ ಆರೋಪಿ, ನಯವಾಗಿ ಮಾತನಾಡಿದ್ದ. ಜೀವ ವಿಮೆ ಮಾಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದ. ನಂತರ, ಆನ್‌ಲೈನ್‌ ಮೂಲಕ ಹಲವರ ಮೊಬೈಲ್ ನಂಬರ್ ಸಂಗ್ರಹಿಸಿದ್ದ. ಅವರೆಲ್ಲರಿಗೂ ಕರೆ ಮಾಡಿ, ವಂಚನೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ವಂಚನೆಯಿಂದ ಬಂದ ಹಣದಲ್ಲಿ ಆರೋಪಿ, ತನ್ನೂರಿನಲ್ಲಿ ಕಿಸಾನ್ ಸೇವಾ ಕೇಂದ್ರ ತೆರೆದಿದ್ದ. ಕೃಷಿ ಉಪಕರಣ ಹಾಗೂ ರಸಗೊಬ್ಬರ ಮಾರುತ್ತಿದ್ದ. ಆರೋಪಿ ವಂಚನೆ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ಹಾಗೂ ಐಸಿಐಸಿಐ ಇನ್ಸೂರೆನ್ಸ್ ಹೆಸರಿನಲ್ಲಿ ನಕಲಿ ಜಾಲತಾಣವನ್ನೂ ಆರೋಪಿ ಸೃಷ್ಟಿಸಿದ್ದ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT