ಶುಕ್ರವಾರ, ಆಗಸ್ಟ್ 12, 2022
27 °C

‘ಡ್ರಗ್’ ಪಾರ್ಟಿ: ಪಾಲ್ಗೊಂಡವರ ಪಟ್ಟಿ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲೇ ಡ್ರಗ್ ಮಾರಾಟ ಹಾಗೂ ಸರಬರಾಜು ನಡೆಯುತ್ತಿದ್ದ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಪಾರ್ಟಿಯಲ್ಲಿ ಪಾಲ್ಗೊಂಡವರ ಪಟ್ಟಿಯನ್ನು ಸಿಸಿಬಿ ಪೊಲೀಸರು ಸಿದ್ಧಪಡಿಸಿದ್ದಾರೆ.

ವಿದೇಶಿ ಪೆಡ್ಲರ್‌ಗಳಿಂದಲೇ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಆಗುತ್ತಿದ್ದ ಬಗ್ಗೆ ಪುರಾವೆ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು, ಕಾಟನ್‌ಪೇಟೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಅಂತರರಾಷ್ಟ್ರೀಯ ಡ್ರಗ್ ಜಾಲ ಬೆಂಗಳೂರಿನಲ್ಲಿದೆ. ಗಾಂಜಾ, ಕೊಕೇನ್, ಎಂಡಿಎಂಎ, ಎಲ್‌ಎಸ್‌ಡಿ ಸೇರಿದಂತೆ ಹಲವು ಡ್ರಗ್‌ ಪಾರ್ಟಿಗಳಿಗೆ ಪೂರೈಕೆ ಆಗುತ್ತಿದೆ. ಗ್ರಾಹಕರೇ ಉಪ ‍‍‍ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರತಿಯೊಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಸಂಜನಾ ಮನೆಗೂ ಹೋಗಿಬಂದ ಪೊಲೀಸರು; ಡ್ರಗ್ ಜಾಲ ಸಂಬಂಧ ಬಂಧಿಸಲಾಗಿರುವ ಉದ್ಯಮಿ ರಾಹುಲ್‌ನನ್ನು ಸಿಸಿಬಿ ಪೊಲೀಸರು, ನಟಿ ಸಂಜನಾ ಗಲ್ರಾನಿ ಮನೆಗೆ ಕರೆದೊಯ್ದು ತಪಾಸಣೆ ನಡೆಸಿರುವುದಾಗಿ ಗೊತ್ತಾಗಿದೆ.

ಗುರುವಾರವೇ ರಾಹುಲ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನನ್ನು ನಗರದ ಹಲವೆಡೆ ಕರೆದೊಯ್ದು ಮಾಹಿತಿ ಕಲೆಹಾಕಿದ್ದರು. ಪುರಾವೆಗಳು ಲಭ್ಯವಾಗುತ್ತಿದ್ದಂತೆ ಆತನನ್ನು ಬಂಧಿಸಿದ್ದಾರೆ.

ಹಲವರು ಪರಾರಿ: ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ, ಡ್ರಗ್ ಜಾಲದಲ್ಲಿದ್ದ ಕೆಲವರು ನಗರ ತೊರೆದಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಹಲವರು, ಮನೆಯಿಂದ ಪರಾರಿಯಾಗಿದ್ದಾರೆ. ಅವರೆಲ್ಲರ ಪತ್ತೆಗಾಗಿ ಸಿಸಿಬಿಯ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು