ಮಂಗಳವಾರ, ಮಾರ್ಚ್ 9, 2021
29 °C
ನಾಲ್ಕು ಕಂಪನಿ ಕಚೇರಿಗಳ ಮೇಲೆ ಸಿಐಡಿ ಅಧಿಕಾರಿಗಳ ದಾಳಿ

ಆ್ಯಪ್‌ನಲ್ಲಿ ಸಾಲ; ಮಾಹಿತಿ ಕದ್ದು ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಬೈಲ್ ಆ್ಯಪ್ ಮೂಲಕ ಸಣ್ಣ ಮೊತ್ತದ ಸಾಲ ನೀಡಿ ಗ್ರಾಹಕರ ಮೊಬೈಲ್‌ನಲ್ಲಿದ್ದ ಮಾಹಿತಿ ಕದ್ದು ಕಿರುಕುಳ ನೀಡುತ್ತಿದ್ದ ಆರೋಪದಡಿ ನಾಲ್ಕು ಕಂಪನಿಗಳ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದು, ಕಂಪನಿಯ ಇಬ್ಬರನ್ನು ಬಂಧಿಸಿದ್ದಾರೆ.

‘ಬೆಂಗಳೂರಿನ ಮ್ಯಾಡ್ ಎಲಿಫೆಂಟ್ ಟೆಕ್ನಾಲಜೀಸ್, ಬಾರಾಯಾಕ್ಷಿ ಟೆಕ್ನಾಲಜೀಸ್, ಪಾಫಿಟೈಸ್ ಟೆಕ್ನಾಲಜೀಸ್ ಹಾಗೂ ವಿಜ್ ಪ್ರೊ ಸಲ್ಯೂಷನ್ಸ್ ಕಂಪನಿಗಳ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಹಲವು ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಪ್ರತಿ ಕಂಪನಿಯು ತಮ್ಮದೇ ಆ್ಯಪ್‌ ಹೊಂದಿವೆ. ವಿದೇಶದಲ್ಲಿರುವ ವ್ಯಕ್ತಿಗಳು, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಹಣಕಾಸು ಸಂಸ್ಥೆಗಳ ಮೂಲಕ ಸಣ್ಣ ಮೊತ್ತದ ಸಾಲ ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.

ಆ್ಯಪ್ ಇನ್‌ಸ್ಟಾಲ್ ಮಾಡಿಸಿ ಮೊಬೈಲ್ ಹ್ಯಾಕ್: ‘ಸಾಲ ನೀಡುವುದಾಗಿ ಹೇಳುವ ಕಂಪನಿ ಪ್ರತಿನಿಧಿಗಳು, ಮೊಬೈಲ್‌ನಲ್ಲಿ ತಮ್ಮ ಆ್ಯಪ್‌ ಇನ್‌ಸ್ಟಾಲ್ ಮಾಡಿಸುತ್ತಾರೆ. ಅದೇ ಸಮಯದಲ್ಲಿ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಬ್ಯಾಂಕ್ ಖಾತೆ ವಿವರ ಹಾಗೂ ಇಬ್ಬರು ಪರಿಚಯಸ್ಥರ ಮೊಬೈಲ್ ಸಂಖ್ಯೆ ಸೇರಿದಂತೆ ಹಲವು ವೈಯಕ್ತಿಕ ಮಾಹಿತಿ ಪಡೆಯುತ್ತಾರೆ. ಅದರ ಜೊತೆಗೆ, ಸಂಪರ್ಕ ಸಂಖ್ಯೆ, ಎಸ್‌ಎಂಎಸ್ ಹಾಗೂ ಇತರೆ ಮಾಹಿತಿಯನ್ನೂ ಕದಿಯುತ್ತಾರೆ’ ಎಂದು ಮೂಲಗಳು ತಿಳಿಸಿವೆ.

‘ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿಗಳು, ಅದನ್ನು ನೀಡದಿದ್ದರೆ ಕಿರುಕುಳ ನೀಡಲಾರಂಭಿಸುತ್ತಿದ್ದವು. ಹ್ಯಾಕ್ ಮಾಡಿದ್ದ ಸಾಲಗಾರರ ಮೊಬೈಲ್ ದತ್ತಾಂಶ ಬಳಸಿಕೊಂಡು ಅಪಪ್ರಚಾರ ಮಾಡಲಾಗುತ್ತಿತ್ತು. ಕೆಲ ಯುವತಿಯರ ಮೊಬೈಲ್‌ನಲ್ಲಿದ್ದ ಮಾಹಿತಿಯನ್ನೂ ಕದ್ದ ಸಂಗತಿ ಗೊತ್ತಾಗಿದೆ’ ಎಂದೂ ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು