ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇವಾ ವಿವಿಯಲ್ಲಿ ದೇಸಿ ಕ್ರೀಡೆಗಳ ಸಂಭ್ರಮ

Published 11 ಫೆಬ್ರುವರಿ 2024, 16:04 IST
Last Updated 11 ಫೆಬ್ರುವರಿ 2024, 16:04 IST
ಅಕ್ಷರ ಗಾತ್ರ

ಯಲಹಂಕ: ದೇಸಿ ಕ್ರೀಡೆಗಳ ಕುರಿತು ಜಾಗೃತಿಮೂಡಿಸುವ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದೊಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಖೇಲ್‌ ಖೋಜ್‌’ ಕಾರ್ಯಕ್ರಮಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಜೊತೆಗೆ ಮಾನಸಿಕ ಕೌಶಲಗಳ ಸುಧಾರಣೆಗೆ ಸಹಕಾರಿಯಾಗಿದೆ. ತಂಡದ ಕಾರ್ಯ ವಿಸ್ತರಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ‘ ಎಂದರು.

ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಮಾತನಾಡಿ, ‘ಸಾಂಪ್ರದಾಯಿಕ ಹಾಗೂ ಸ್ಥಳೀಯ ಕ್ರೀಡೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದಲ್ಲಿ ಹಳೆಯ ಆಟಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ‘ ಎಂದು ತಿಳಿಸಿದರು.

‘ದೇಸಿ ಕಲೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾದುದು ಅತಿಮುಖ್ಯ. ಈ ಕಲೆಗಳನ್ನು ಕಲಿಯುವುದರ ಜೊತೆಗೆ ತಮ್ಮ ಮಕ್ಕಳಿಗೂ ಕಲಿಸಿ, ಉಳಿಸಿ–ಬೆಳೆಸಬೇಕು. ಸರ್ಕಾರಗಳು ಸಹ ಈ ಕಲೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು‘ ಎಂದು ರಾಷ್ಟ್ರಮಟ್ಟದ ಮಲ್ಲಕಂಬ ಪಟು ಶ್ರೀಶೈಲ ಹೂಗಾರ ಅಭಿಪ್ರಾಯಪಟ್ಟರು.

 ಕಲರಿಪಯಟ್ಟು, ತಂಗ್‌ ತಾ. ಕೋಲುವರಸೆ, ಕತ್ತಿವರಸೆ, ಚೌಪರ್‌, ಸಿಲಂಬಮ್‌, ಮಲ್ಲಕಂಬ ಮತ್ತಿತರ ಹಳೆಯ ಸಮರ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ ಜನರ ಗಮನ ಸೆಳೆದರು.

ಸಾಂಪ್ರದಾಯಿಕ ಕ್ರೀಡೆಗಳಿಗಾಗಿ ತೆರೆಯಲಾಗಿದ್ದ 35 ಮಳಿಗೆಗಳಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಗೋಲಿ, ಗಿಲ್ಲಿ ದಾಂಡು, ಲಗೋರಿ, ಬುಗುರಿ, ಚೌಕಾಬಾರ, ಪಗಡೆ ಮತ್ತಿತರ ಆಟಗಳನ್ನು ಆಡಿ ಸಂಭ್ರಮಿಸಿದರು. 

ಕುಲಪತಿ ಡಾ.ಎಂ.ಧನಂಜಯ, ಕುಲಸಚಿವ ಡಾ.ಎನ್‌.ರಮೇಶ್‌, ಟ್ರಸ್ಟಿ ಉಮೇಶ್‌.ಎಸ್‌.ರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT