ಗುರುವಾರ , ನವೆಂಬರ್ 26, 2020
20 °C
ಮಳೆಗಾಲದಲ್ಲಿ ಕಾಮಗಾರಿಯೇ ಪ್ರವಾಹಕ್ಕೆ ಕಾರಣ: ಆರೋಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಆರ್‌.ಅಶೋಕ ಭೇಟಿ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಯಿಂದ ಪ್ರವಾಹ ಸೃಷ್ಟಿಯಾಗಿದ್ದ ದತ್ತಾತ್ರೇಯ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಅಶೋಕ ಶನಿವಾರ ಭೇಟಿ ನೀಡಿದಾಗ ಸ್ಥಳೀಯರಿಂದ ಆಕ್ರೋಶ ಎದುರಿಸ ಬೇಕಾಯಿತು.

ಮುಖ್ಯಮಂತ್ರಿಯವರು ನೀರು ನುಗ್ಗಿದ್ದ ಮನೆಗಳ ನಿವಾಸಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಕೆಲವು ಸ್ಥಳೀಯರು, ‘ಬಿಬಿಎಂಪಿ ಮಳೆಗಾಲದಲ್ಲಿ ಕೈಗೊಂಡ ಕಾಮಗಾರಿಯೇ ಪ್ರವಾಹಕ್ಕೆ ಕಾರಣ’ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಘೋಷಣೆಯನ್ನೂ ಕೂಗಿದರು. ಮಧ್ಯಪ್ರವೇಶಿಸಿದ ಪೊಲೀಸರು, ಸ್ಥಳೀಯರನ್ನು ಸಮಾಧಾನಪಡಿಸಿದರು.

‘ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ್ದೇ ತಪ್ಪು. ಆದ್ದರಿಂದಲೇ ಇಷ್ಟೆಲ್ಲ ತೊಂದರೆ ಆಗಿದೆ. ಇದಕ್ಕೆ ಕಾರಣರಾದವರ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.‘ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು, ಈ ಭಾಗದಲ್ಲಿ ಕೆಲ ಕಾಮಗಾರಿ ಆರಂಭಿಸಿದ್ದಾರೆ. ಅವೆಲ್ಲವೂ ಅವೈಜ್ಞಾನಿಕವಾಗಿದ್ದು, ಇದು ನಮ್ಮನ್ನೆಲ್ಲ ಬೀದಿಗೆ ತಂದು ನಿಲ್ಲಿಸಿವೆ. ರಾತ್ರಿ ಮನೆಗೆ ನೀರು ನುಗ್ಗಿದ್ದರಿಂದ ನಾವೆಲ್ಲರೂ ನರಕಯಾತನೆ ಅನುಭವಿಸಿದೆವು’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರನ್ನು ಸಮಾಧಾನ ಪಡಿಸಿದ ಆರ್. ಅಶೋಕ, ‘ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಥಳಕ್ಕೆ ಬಂದಿದ್ದಾರೆ. ನಿಮ್ಮ ಜೊತೆ ಸರ್ಕಾರವಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು’ ಎಂದರು.

‘ಆರು ತಿಂಗಳ ಹಿಂದೆಯೇ ರಾಜಕಾಲುವೆ ಕಾಮಗಾರಿ ಪ್ರಾರಂಭವಾಗಿತ್ತು. ಇದರಿಂದಲೇ ಈ ಸಮಸ್ಯೆ ಆಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ. ‌ಹಾನಿಗೊಳಗಾದವರಿಗೆ ಪರಿಹಾರ ನೀಡಲು ಚರ್ಚೆ ನಡೆದಿದೆ. ನೀರು ನುಗ್ಗಿರುವ ಮನೆಗಳ ನಿವಾಸಿಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು