ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ | ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಶಿಶುಮರಣ ಗಣನೀಯ ಇಳಿಕೆ

ಏಪ್ರಿಲ್‌ನಲ್ಲಿ ವಯಸ್ಕರ ಮರಣ ಪ್ರಮಾಣವೂ ತುಸು ಇಳಿಮುಖ
Last Updated 7 ಮೇ 2020, 20:04 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿ ಕೋವಿಡ್‌–19 ಹಬ್ಬುವುದನ್ನು ನಿಯಂತ್ರಿಸಲು ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಒಂದು ವರ್ಷದೊಳಗಿನ ಶಿಶುಗಳ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಈ ವರ್ಷದ ಮೊದಲ ಮೂರು ತಿಂಗಳುಗಳಿಗೆ ಹಾಗೂ ಕಳೆದ ವರ್ಷಕ್ಕೆ ಹೋಲಿಸಿದರೆ ಮಕ್ಕಳ ಮರಣ ಪ್ರಮಾಣ ಶೇ 50ರಷ್ಟು ಕಡಿಮೆ ಆಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ 88 ಶಿಶುಗಳು ಮೃತಪಟ್ಟಿವೆ. ಈ ಹಿಂದಿನ ಮೂರು ತಿಂಗಳುಗಳಲ್ಲಿ ಪ್ರತಿ ತಿಂಗಳೂ ಸರಾಸರಿ 133 ಶಿಶುಗಳು ಸಾವಿಗೀಡಾಗಿದ್ದವು. 2019ರ ಏಪ್ರಿಲ್‌ನಲ್ಲಿ 222 ಮಕ್ಕಳು ಕೊನೆಯುಸಿರೆಳೆದಿದ್ದವು.

1 ವರ್ಷದಿಂದ 5 ವರ್ಷಗಳ ಒಳಗಿನ ಮಕ್ಕಳ ಮರಣ ಪ್ರಮಾಣದಲ್ಲೂ ಶೇ 50ರಷ್ಟು ಇಳಿಕೆಯಾಗಿದೆ. ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಪ್ರತಿ ತಿಂಗಳೂ ಸರಾಸರಿ 43 ಮಕ್ಕಳು ಕೊನೆಯುಸಿರೆಳೆದಿದ್ದರೆ, ಏಪ್ರಿಲ್‌ನಲ್ಲಿ 20 ಮಕ್ಕಳು ಮೃತಪಟ್ಟಿವೆ. 2019ರ ಏಪ್ರಿಲ್‌ನಲ್ಲಿ 42 ಮಕ್ಕಳು ಸತ್ತಿದ್ದವು.

‘ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ಪರಿಸರ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದು ಕೂಡ ಶಿಶುಗಳ ಹಾಗೂ ಅವರ ತಾಯಂದಿರ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಬಲ್ಲುದು. ಮಕ್ಕಳ ಸಾವಿನ ಪ್ರಮಾಣ ಇಳಿಕೆಗೆ ಮಾಲಿನ್ಯ ಕಡಿಮೆಯಾಗಿರುವುದೇ ಕಾರಣ ಎಂದು ನಿಖರವಾಗಿ ಹೇಳಲಾಗದು. ಬೇರೆ ಬೇರೆ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ’ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಲಾಕ್‌ಡೌನ್‌ ಅವಧಿಯಲ್ಲಿ ವಯಸ್ಕರ ಮರಣ ಪ್ರಮಾಣದಲ್ಲೂ ತುಸು ಇಳಿಕೆ ಕಂಡುಬಂದಿದೆ. ಈ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಸರಾಸರಿ 5,384 ಮಂದಿ ಮರಣ ಹೊಂದಿದ್ದರು. ಆದರೆ, ಏಪ್ರಿಲ್‌ನಲ್ಲಿ ಸಾವಿನ ಪ್ರಮಾಣ 3,327ಕ್ಕೆ ಇಳಿದಿದೆ. 2019ರಲ್ಲಿ ಜನವರಿಯಿಂದ ಏಪ್ರಿಲ್‌ವರೆಗೆ 21,140 ಮಂದಿ ಮೃತಪಟ್ಟಿದ್ದರೆ, 2020ರಲ್ಲಿ 19,480 ಮಂದಿ ಸತ್ತಿದ್ದಾರೆ.

‘ಕಳೆದ ವರ್ಷಕ್ಕೆ ಹಾಗೂ ಈ ವರ್ಷದ ಮೊದಲ ಮೂರು ತಿಂಗಳುಗಳಿಗೆ ಹೋಲಿಸಿದಾಗ ನಗರದಲ್ಲಿ ಏಪ್ರಿಲ್‌ನಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿರುವುದು ನಿಜ. ಲಾಕ್‌ಡೌನ್‌ ವೇಳೆ ನಗರದ ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿಲ್ಲ. ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಂದರೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಬಂದು ನಗರದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ಈ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಎಷ್ಟಿತ್ತು ಎಂಬುದನ್ನು ನೋಡಿಕೊಂಡು ನಿರ್ಧಾರಕ್ಕೆ ಬರಬೇಕಾಗುತ್ತದೆ’ ಎಂದು ಆರೋಗ್ಯ ವಿಭಾಗದ ಅಧಿಕಾರಿ ಅಭಿಪ್ರಾಯಪಟ್ಟರು.

‘ಜನರು ಲಾಕ್‌ಡೌನ್‌ ಅವಧಿಯಲ್ಲಿ ಮನೆಯಲ್ಲೇ ಇದ್ದುದರಿಂದ ಅವರ ಆರೋಗ್ಯ ಸುಧಾರಿಸಿರಲಿಕ್ಕೂ ಸಾಕು. ನಗರದಲ್ಲಿ ವಾಹನ ಅಪಘಾತಗಳಿಂದಲೂ ಪ್ರತಿ ತಿಂಗಳು ನೂರಾರು ಮಂದಿ ಸಾಯುತ್ತಾರೆ. ಲಾಕ್‌ಡೌನ್ ಜಾರಿಯಲ್ಲಿದ್ದಾಗ ವಾಹನ ಓಡಾಟಕ್ಕೆ ಅವಕಾಶವೇ ಇರಲಿಲ್ಲ. ಹಾಗಾಗಿ ಅಪಘಾತದಿಂದ ಆಗುವ ಸಾವಿನ ಪ್ರಮಾಣವೂ ಗಣನೀಯವಾಗಿ ಇಳಿಕೆ ಆಗಿದೆ’ ಎಂದು ಅವರು ವಿಶ್ಲೇಷಿಸಿದರು.

**

ಕಳೆದ ವರ್ಷದ ಏಪ್ರಿಲ್‌ವರೆಗಿನ ಅಂಕಿಅಂಶಗಳಿಗೆ ಹೋಲಿಸಿದರೆ ಈ ವರ್ಷ ನಗರದಲ್ಲಿ ಸಾವಿನ ಪ್ರಮಾಣ ಸ್ವಲ್ಪ ಕಡಿಮೆ ಆಗಿರುವುದು ನಿಜ. ಆದರೆ, ಅದಕ್ಕೆ ಏನು ಕಾರಣ ಎಂಬುದನ್ನು ಈಗಲೇ ಹೇಳಲಾಗದು. ಈ ಬಗ್ಗೆ ಅಧ್ಯಯನ ನಡೆಸಬೇಕಾಗಿದೆ.
-ಬಿ.ಎಚ್‌.ಅನಿಲ್‌ ಕುಮಾರ್‌, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT