ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಕಡಿಮೆ: ಎಲ್ಲ ಸೌಲಭ್ಯ ನಮಗೇ ಬೇಕೆನ್ನುವ ಹೈಟೆಕ್‌ ನಾಗರಿಕರು ಎಲ್ಲಿ ಹೋದರು?

ನಗರದಲ್ಲಿ ಮತದಾನ ಕಡಿಮೆ: ಮತದಾರರ ವಿರುದ್ಧ ಆಕ್ರೋಶ
Published 28 ಏಪ್ರಿಲ್ 2024, 0:40 IST
Last Updated 28 ಏಪ್ರಿಲ್ 2024, 0:40 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜಧಾನಿ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಅತಿಕಡಿಮೆ ಮತದಾನವಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಆಕ್ರೋಶ ವ್ಯಕ್ತವಾಗಿದೆ.

‌‘ಮತದಾನದಿಂದ ದೂರ ಉಳಿದ ಬೆಂಗಳೂರಿನ ಮತದಾರರು ಬದುಕಿದ್ದೂ ಸತ್ತಂತೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

‘ನಗರದ ನಾಗರಿಕರಿಗೆ ಎಲ್ಲ ಸೌಲಭ್ಯವೂ ಬೇಕು, ಆದರೆ ಮತದಾನ ಮಾತ್ರ ಅವರಿಗೆ ಬೇಕಾಗಿಲ್ಲ. ಮತದಾನ ಮರೆತು ಮೋಜು ಮಸ್ತಿ ಮಾಡುತ್ತಾರೆ. ಇವರಿಗೆ ಯಾವ ಸೌಲಭ್ಯವನ್ನೂ ನೀಡಬಾರದು’ ಎಂದೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾವೆಲ್ಲ ಹೋಗಿ ಮತದಾನ ಮಾಡಿದ್ದೇವೆ. ನಮ್ಮ ಕರ್ತವ್ಯವನ್ನು ನಾವು ಮಾಡಿದ್ದು, ನಮ್ಮ ಪ್ರದೇಶಗಳು ಅಭಿವೃದ್ಧಿಯಾಗಲೆಂದು ಬಯಸಿದ್ದೇವೆ. ಆದರೆ, ಯಾರು ಮತದಾನ ಮಾಡಿಲ್ಲವೋ ಅವರಿಗೆ ಶಿಕ್ಷೆ ಆಗಲೇಬೇಕು. ಅವರಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲದಿದ್ದರೆ, ಮತದಾನ ಮಾಡಿದವರಿಗಾದರೂ ಉತ್ತಮ ಸೌಲಭ್ಯ ಕೊಡಿ. ಮತದಾನ ಮಾಡಿದವರ ಪ್ರದೇಶಗಳಲ್ಲಿ ರಸ್ತೆ, ಉದ್ಯಾನಗಳನ್ನು ಅಭಿವೃದ್ಧಿಪಡಿಸಿ. ಮತದಾನ ಮಾಡಿದವರಿಗೆ ವಿದ್ಯುತ್‌, ನೀರಿನ ಬಿಲ್‌ನಲ್ಲಿ ರಿಯಾಯಿತಿ ನೀಡಿ’ ಎಂದು ಹೆಬ್ಬಾಳದ ಕಿರಣ್‌ ಅವರು ಆಗ್ರಹಿಸಿದರು.

‘ಬಿಬಿಎಂಪಿ ಹಾಗೂ ಜಿಲ್ಲಾಡಳಿತ ನಗರದ ಮತದಾರರು ಹೆಚ್ಚು ಮತದಾನ ಮಾಡಬೇಕು ಎಂದು ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದವು. ಇವರು ಅರಿವು ಮೂಡಿಸಿದ ಮೇಲೂ ಮತದಾನ ಹೆಚ್ಚಾಗದಿದ್ದರೆ ಆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ದೋಸೆ ಹಾಗೂ ವಡಾ ತಿನ್ನಲು ಹೋಟೆಲ್‌ಗಳಲ್ಲಿ ಸಾಲಿನಲ್ಲಿ ನಿಲ್ಲುತ್ತಾರೆ. ರೈಲು, ಮೆಟ್ರೊ ಟಿಕೆಟ್‌, ಶಾಲೆಯಲ್ಲಿ ಶಿಕ್ಷಕರೊಂದಿಗೆ ಮಾತನಾಡಲು, ಪ್ರವೇಶ ಪಡೆಯಲು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಐದು ವರ್ಷಕ್ಕೊಮ್ಮೆ ಮತದಾನ ಮಾಡಲು ಒಂದು ಗಂಟೆ ಸಮಯ ನೀಡದ ನಾಗರಿಕರಿಗೆ ನಾಚಿಕೆಯಾಗಬೇಕು’ ಎಂದು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.

‘ಮತದಾನ ಮಾಡದ ಬೆಂಗಳೂರಿನ ನಾಗರಿಕರು ನಾಲಾಯಕ್‌ಗಳು. ಅವರಿಗೆ ಏನನ್ನೂ ಕೇಳಲು ಅರ್ಹತೆ ಇಲ್ಲ. ಅವರಿಗೆಲ್ಲ ನನ್ನ ಶ್ರದ್ಧಾಂಜಲಿ’ ಎಂದು ಕಾಮಾಕ್ಷಿಪಾಳ್ಯದ ರವೀಶ್‌ ಹೇಳಿದರು.

ನಗರದಲ್ಲೇ ಕಡಿಮೆ: ನಗರದ ಕೇಂದ್ರ, ಉತ್ತರ, ದಕ್ಷಿಣ ಲೋಕಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ 11 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತದಾನವಾಗಿದೆ. ಈ ಮೂರು ಲೋಕಸಭಾ ಕ್ಷೇತ್ರದ ನಂತರ ಅತಿಹೆಚ್ಚು ಮತದಾನವಾಗಿರುವುದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ. ಇಲ್ಲಿ ಶೇ 68.30ರಷ್ಟು ಮತದಾನವಾಗಿದೆ. ಇನ್ನು ಉಳಿದ 10 ಲೋಕಸಭಾ ಕ್ಷೇತಗಳಲ್ಲಿ ಶೇ 70ಕ್ಕಿಂತಲೂ ಹೆಚ್ಚು ಮತದಾನವಾಗಿದ್ದು, ಶೇ 81ರವರೆಗೂ ತಲುಪಿದೆ.

ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳಲ್ಲಿನ ಮತದಾನದ ಪ್ರಮಾಣ ಕಡಿಮೆಯಾಗಿರುವುದರಿಂದ ರಾಜ್ಯದ 14 ಕ್ಷೇತ್ರಗಳ ಒಟ್ಟಾರೆ ಪ್ರಮಾಣದಲ್ಲೂ ಕಡಿತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ನುಡಿಗಳು...

  • ನಮ್‌ ಮನ್ಸು ನಮ್ಗೆ... ವೋಟ್‌ ಎಲ್ಲ ಯಾಕೆ... ರೋಡು, ಸೇತುವೆ, ಮೇಲ್ಸೇತುವೆ, ಮೆಟ್ರೊ ಎಲ್ಲ ಅಭಿವೃದ್ಧಿ ಮಾತ್ರ ಬೆಂಗಳೂರಿಗೇ ಇರ್ಲಿ...

  • ಬೆಂಗಳೂರಿನಲ್ಲಿ ಅತಿ ಕಡಿಮೆ ಮತದಾನವಾಗಿದೆ. ಬುದ್ಧಿವಂತರೇ, ಐಟಿ ವೃತ್ತಿಪರರೇ ಎಲ್ಲಿ ಹೋದಿರಿ? ವಾರಾಂತ್ಯದ ಮೋಜಿಗಾಗಿ ಪ್ರವಾಸಿ ತಾಣ, ಪಿಕ್‌ನಿಕ್‌ಗೆ ಹೋದಿರಾ? ಮತದಾನ ಮಾಡದ ಜನರು ಬರೀ ಬೊಗಳೆದಾಸರು. ದೇಶದ ನಾಗರಿಕರಾಗಲು ಅನರ್ಹರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT