ಶುಕ್ರವಾರ, ಜೂಲೈ 10, 2020
22 °C

ಬೆಂಗಳೂರಿನ ಹಲವೆಡೆ ಕೇಳಿಸಿತು ಭಾರಿ ಸದ್ದು: ಜನತೆಯಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪೂರ್ವ ಭಾಗದಲ್ಲಿ ಬುಧವಾರ ಮಧ್ಯಾಹ್ನ 1.20ರ ಸುಮಾರಿಗೆ ಏಕಾಏಕಿ ಕೇಳಿಸಿದ ಭಾರಿ ಸದ್ದು ಜನರಲ್ಲಿ ತಲ್ಲಣ ಮೂಡಿಸಿದೆ. ಹಲವರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಎತ್ತರದಲ್ಲಿ ಈ ಶಬ್ದ ಕೇಳಿಸಿದೆ. ಜೆಟ್‌, ವಿಮಾನ ಹಾರಾಟದ ವೇಳೆ ಈ ರೀತಿಯ ಶಬ್ಧ ಉಂಟಾಗುವ ಸಾಧ್ಯತೆಗಳಿರುತ್ತದೆ. ಆದರೆ, ಈ ಬಗ್ಗೆ ದೃಢಪಟ್ಟಿಲ್ಲ ಎಂದು ಮೂಲಗಳು ಹೇಳಿವೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕಲ್ಯಾಣ ನಗರ, ಎಂ.ಜಿ ರಸ್ತೆ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಸರ್ಜಾಪುರ, ಎಲೆಕ್ಟ್ರೋನಿಕ್‌ ಸಿಟಿ, ಹೆಬ್ಬಗೋಡಿವರೆಗೂ ಈ ಶಬ್ದ ಕೇಳಿಸಿದೆ.

‘ಏನಿದು ಶಬ್ದ, ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅನಾಹುತ ಸಂಭವಿಸಿದ ಮಾಹಿತಿ ಇಲ್ಲ. ಎಚ್‌ಎಎಲ್‌ ಮತ್ತು ಐಎಎಫ್‌ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್‌ ತಿಳಿಸಿದ್ದಾರೆ.

ಜಯನಗರ, ಜೆಪಿ ನಗರ, ಕೋರಮಂಗಲ ಸೇರಿದಂತೆ ಸುಮಾರು ಅರ್ಧ ಬೆಂಗಳೂರಿಗೆ ಈ ಶಬ್ದ ಕೇಳಿಸಿದೆ. ಅನೇಕರು ಶಬ್ಧ ಕೇಳಿಸಿದ ಬಗ್ಗೆ ದೃಢಪಡಿಸಿದ್ದಾರೆ. ಕೆಲವರು ಬಾಂಬ್‌ ಸ್ಪೋಟ‌ ಸಂಭವಿಸಿದ ಶಬ್ದದಂತಿತ್ತು ಎಂದು ಹೇಳಿದರೆ, ಇನ್ನೂ ಕೆಲವರು ಗ್ಯಾಸ್‌ ಸಿಲಿಂಡರ್‌ ಸ್ಫೋಟದ ಮಾದರಿಯಲ್ಲಿ ಕೇಳಿಸಿದೆ ಎಂದೂ ಪ್ರತಿಕ್ರಿಯಿಸಿದ್ದಾರೆ.

‘ರಿಕ್ಟರ್ ಮಾಪಕದಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ. ಹೀಗಾಗಿ, ಇದು ಭೂಕಂಪದ ಶಬ್ದವಲ್ಲ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಗಳಲ್ಲೂ ಚರ್ಚೆ: ಭಾರಿ ಸದ್ದು ಕೇಳಿಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗಿದೆ. ಬೆಂಗಳೂರಿನಲ್ಲಿ ಭೂಕಂಪವಾಗಿದೆಯೇ? ಎಲೆಕ್ಟ್ರಾನಿಕ್ ಸಿಟಿ ಬಳಿ ಭಾರಿ ಸದ್ದು ಕೇಳಿಸಿದೆ ಎಂದು ಜಿಬಿನ್ ಎಂಬುವವರು ಟ್ವಿಟ್‌ರ್‌ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಭಾರಿ  ಸದ್ದು ಕೇಳಿಸಿದೆ, ಏನೆಂದು ಯೋಚಿಸುತ್ತಿದ್ದೇನೆ ಎಂದು ಜಲ್ಸೀನ್ ಎಂಬುವವರು ಟ್ವಿಟ್ ಮಾಡಿದ್ದಾರೆ. ಇದಕ್ಕೆ, ‘ವಾಯುಪಡೆ ವಿಮಾನ ಹಾರಾಡಿದ ಶಬ್ದವಾಗಿರಬಹುದು’ ಎಂದು ತುಷಾರ್ ಕನ್ವಾರ್ ಎಂಬುವವರು ಉತ್ತರಿಸಿದ್ದಾರೆ.

#Bangalore ಮತ್ತು #Earthquake ಹ್ಯಾಷ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು