ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳ ‘ಭಾರ’ ಇಳಿಸದ ಭರವಸೆ

Published 3 ಏಪ್ರಿಲ್ 2024, 23:44 IST
Last Updated 3 ಏಪ್ರಿಲ್ 2024, 23:44 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಚುನಾವಣೆಯಲ್ಲಿಯೂ ‘ಆರೋಗ್ಯ’ಯುತ ಭರವಸೆಗಳನ್ನು ನೀಡುತ್ತಾ ಬಂದಿರುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೇರಿದಾಗ ಇಲ್ಲಿನ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಮೇಲಿನ ರೋಗಿಗಳ ‘ಭಾರ’ ಇಳಿಸುವ ಕೆಲಸ ಮಾಡಿಲ್ಲ. ಇದರಿಂದಾಗಿ ಕಾರ್ಪೊರೇಟ್ ಆಸ್ಪತ್ರೆಗಳು ‘ನಾಯಿಕೊಡೆ’ಗಳಂತೆ ತಲೆಯೆತ್ತುತ್ತಿದ್ದರೆ, ಬಡ–ಮಧ್ಯಮ ವರ್ಗದವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ದಿನವಿಡೀ ಕಾಯುವುದು ತಪ್ಪಿಲ್ಲ.

ಮೂಲಸೌಕರ್ಯದ ಕೊರತೆ, ತಜ್ಞ ವೈದ್ಯರ ಹುದ್ದೆಗಳು ಖಾಲಿ, ಗುತ್ತಿಗೆಯಡಿ ಸಿಬ್ಬಂದಿ ನೇಮಕಾತಿ, ವೈದ್ಯಕೀಯ ಉಪಕರಣಗಳ ಅಸಮರ್ಪಕ ನಿರ್ವಹಣೆ ಸೇರಿ ವಿವಿಧ ಕಾರಣಗಳಿಂದ ನಗರದ ಕೆಲ ಸರ್ಕಾರಿ ಆಸ್ಪತ್ರೆಗಳು ಕುಗ್ಗಿವೆ. ಇನ್ನೊಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ನಡೆಯುತ್ತಿರುವ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ದಂತಹ ಯೋಜನೆಗಳ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ಸವಾಲಾಗಿದೆ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಎಲ್ಲ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳೇ ಅನಿವಾರ್ಯವಾಗುತ್ತಿವೆ. ಈ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆಯು ದೈಹಿಕ ಕಾಯಿಲೆಗಳನ್ನು ವಾಸಿಮಾಡಿದರೂ, ಚಿಕಿತ್ಸಾ ವೆಚ್ಚವು ಕುಟಂಬವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುತ್ತಿವೆ.‌‌‌ ಹೀಗಾಗಿ, ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಮಾಡುವುದಾಗಿ ರಾಜಕೀಯ ಪಕ್ಷಗಳು ಭರವಸೆ ನೀಡುತ್ತಿವೆ. 

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ, ಟ್ರಾಮಾ ಕೇರ್ ಕೇಂದ್ರ, ನೆಫ್ರೊ–ಯೂರಾಲಜಿ ಸಂಸ್ಥೆ, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆ ಹಾಗೂ ಇನ್‌ಸ್ಟಿಟ್ಯೂಟ್‌ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್‌ ಆಸ್ಪತ್ರೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಚಿಕಿತ್ಸೆಗಾಗಿ ಪ್ರತಿನಿತ್ಯ ಮೂರು ಸಾವಿರಕ್ಕೂ ಅಧಿಕ ಹೊರರೋಗಿಗಳು ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುತ್ತಾರೆ. ಬಿಸಿಲು–ಮಳೆಯನ್ನೂ ಲೆಕ್ಕಿಸದೆ ಆಸ್ಪತ್ರೆಯ ಆವರಣದಲ್ಲಿ ತಮ್ಮ ಸರದಿಗೆ ಕಾಯಬೇಕಾಗಿದೆ.

ಹೃದಯ ಚಿಕಿತ್ಸೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಕ್ಯಾನ್ಸರ್ ಕಾಯಿಲೆಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ವಿವಿಧ ಸಮಸ್ಯೆಗಳು ಹಾಗೂ ಕಾಯಿಲೆಗಳಿಗೆ ಅನುಗುಣವಾಗಿ ಪರಿಣತ ವೈದ್ಯರಿರುವ ಸರ್ಕಾರಿ ಸಂಸ್ಥೆಗಳಿವೆ. ನಗರದ ವಿವಿಧೆಡೆ ಈ ಸಂಸ್ಥೆಗಳ ಘಟಕಗಳಿಲ್ಲದ ಕಾರಣ ಒಂದೇ ಕಡೆ ರೋಗಿಗಳ ದಟ್ಟಣೆ ಹೆಚ್ಚುತಿದೆ. ನಿಮ್ಹಾನ್ಸ್ ಸಂಸ್ಥೆಗೆ ನಿತ್ಯ ಸರಾಸರಿ 1,700 ಮಂದಿ ಚಿಕಿತ್ಸೆಗಾಗಿ ಬರುತ್ತಾರೆ. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಒಟ್ಟು 1,050 ಹಾಸಿಗೆಗಳಿವೆ. ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿದೆ. ಹೃದಯ ಸಂಬಂಧಿ ಸಮಸ್ಯೆ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳತ್ತಿರುವುದರಿಂದ ಒಳರೋಗಿಗಳ ದಾಖಲಾತಿಗೆ ಕಾಯಬೇಕಿದೆ. 

ಖಾಸಗಿ ವ್ಯವಸ್ಥೆ ಅವಲಂಬನೆ: ಕೆ.ಸಿ. ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ ವೈದ್ಯಕೀಯ ವ್ಯವಸ್ಥೆಯ ಬಲವರ್ಧನೆ ಸಾಕಾರವಾಗಿಲ್ಲ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬನೆ ಹೆಚ್ಚಾಗಿದ್ದು, ನಗರದಲ್ಲಿ ಸಾವಿರಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ತಲೆಯೆತ್ತಿವೆ. ಕೋವಿಡ್‌ನಂತಹ ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನೇ ಅವಲಂಬಿಸಿ, ನಿರ್ವಹಿಸಿದ ಬಗೆ ಕಣ್ಣ ಮುಂದೆಯೇ ಇದೆ.

ಈಗಲೂ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಸುಸಜ್ಜಿತ ಪ್ರಯೋಗಾಲಯಗಳಿಲ್ಲ. ಎಕ್ಸ್‌–ರೇ, ಸಿಟಿ ಸ್ಕ್ಯಾನ್, ಎಂಆರ್‌ಐ ಸೇರಿ ವಿವಿಧ ಪರೀಕ್ಷೆಗಳಿಗೆ ಖಾಸಗಿ ಕೇಂದ್ರಗಳನ್ನೇ ಅವಲಂಬಿಸಬೇಕಾದ ಸ್ಥಿತಿಯಿದೆ.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಮಧುಮೇಹ ಮತ್ತು ಪಾರ್ಶ್ವವಾಯು ನಿಯಂತ್ರಣ ಕಾರ್ಯಕ್ರಮ ಸೇರಿ ಕೇಂದ್ರ ಸರ್ಕಾರ ಪ್ರಾಯೋಜಿತ 34 ಆರೋಗ್ಯ ಕಾರ್ಯಕ್ರಮಗಳು ಇಲ್ಲಿ ಜಾರಿಯಲ್ಲಿವೆ. ಜ್ಯೋತಿ ಸಂಜೀವಿನಿ, ಆರೋಗ್ಯ ಕವಚ ಸೇರಿ ರಾಜ್ಯ ಸರ್ಕಾರ ಪ್ರಾಯೋಜಿತ 21 ಕಾರ್ಯಕ್ರಮಗಳಿವೆ. ‘ಜ್ಯೋತಿ ಸಂಜೀವಿನಿ’ ಯೋಜನೆಯಡಿ ಫಲಾನುಭವಿಗಳು ನೇರವಾಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಕಳೆದ ಐದು ವರ್ಷಗಳಲ್ಲಿ 13,183 ಮಂದಿ ಚಿಕಿತ್ಸೆ ಪಡೆದಿದ್ದು, ಇವರಲ್ಲಿ 10,517 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆಗೆ ಒಳಗಾಗಿದ್ದಾರೆ. 

ಸೊರಗಿದ ನಮ್ಮ ಕ್ಲಿನಿಕ್‌ಗಳು

ಜನರ ಸಮಗ್ರ ಆರೋಗ್ಯ ವೃದ್ಧಿಗೆ ವಾರ್ಡ್‌ ಮಟ್ಟದಲ್ಲಿ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಕೊರತೆ ಇದೆ. ಇದರಿಂದ ಗುಣಮಟ್ಟದ ವೈದ್ಯಕೀಯ ಸೇವೆಗೆ ತೊಡಕಾಗಿದೆ. ನಗರದಲ್ಲಿ 200ಕ್ಕೂ ಅಧಿಕ ನಮ್ಮ ಕ್ಲಿನಿಕ್‌ಗಳಿವೆ. 4

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 2022ರ ಫೆಬ್ರವರಿ ತಿಂಗಳಲ್ಲಿ ಮೊದಲ ಹಂತದಲ್ಲಿ 108 ಕ್ಲಿನಿಕ್‌ಗಳಿಗೆ ಚಾಲನೆ ನೀಡಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿದ್ದವು. ‘ಚುನಾವಣೆ ಕಾರಣ ಆತುರದಲ್ಲಿ ಈ ಕ್ಲಿನಿಕ್‌ಗಳಿಗೆ ಸರ್ಕಾರ ಚಾಲನೆ ನೀಡಿದೆ’ ಎಂದು ಪ್ರತಿಪಕ್ಷಗಳು ಆ ವೇಳೆ ಆರೋಪಿಸಿದ್ದವು. 

ಜ್ವರದಂತಹ ಸಾಮಾನ್ಯ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ರಕ್ತ ಸೇರಿ ವಿವಿಧ ಪರೀಕ್ಷೆಗಳನ್ನೂ ಇಲ್ಲಿ ನಡೆಸಲಾಗುತ್ತಿದೆ. ಆದರೆ ಬಹುತೇಕ ಕ್ಲಿನಿಕ್‌ಗಳಲ್ಲಿ ನಿತ್ಯ ಭೇಟಿ ನೀಡುವ ರೋಗಿಗಳ ಸಂಖ್ಯೆ ಎರಡಂಕಿ ತಲುಪುತ್ತಿಲ್ಲ. ಬಸವನಗುಡಿ ಶಿವಾಜಿನಗರ ಚಿಕ್ಕಪೇಟೆ ಜಯನಗರ ಮಹದೇವಪುರ ಯಲಹಂಕ ಸೇರಿ ಬಹುತೇಕ ಕಡೆ ಸಂದಿಗೊಂದಿಗಳಲ್ಲಿ ಬಿಬಿಎಂಪಿ ಕಟ್ಟಡದಲ್ಲಿ ನಮ್ಮ ಕ್ಲಿನಿಕ್‌ ನಡೆಸಲು ಸ್ಥಳಾವಕಾಶ ನೀಡಲಾಗಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳಿಗೇ ಕ್ಲಿನಿಕ್‌ ಇರುವ ಬಗ್ಗೆ ಮಾಹಿತಿ ಇಲ್ಲವಾಗಿದೆ.

‘ಕಾರ್ಪೋರೆಟ್ ಆಸ್ಪತ್ರೆಯಂತೆ ಬೆಳೆಸಿ’

ಯಾವುದೇ ಲಾಬಿಗೆ ಮಣಿಯದೇ ಸರ್ಕಾರಿ ಆಸ್ಪತ್ರೆಗಳನ್ನು ಕಾರ್ಪೋರೆಟ್ ಆಸ್ಪತ್ರೆಗೆ ಸರಿಸಮಾನವಾಗಿ ಬೆಳೆಸಬೇಕು ಅಭಿವೃದ್ಧಿಪಡಿಸಬೇಕು. ನವಜಾತ ಶಿಶುಗಳ ಐಸಿಯು ಮಕ್ಕಳ ಐಸಿಯು ಹಾಗೂ ವೈದ್ಯಕೀಯ ಐಸಿಯು ಘಟಕಗಳನ್ನು ಬಲಪಡಿಸಿ ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒದಗಿಸಬೇಕು. ಸರ್ಕಾರಿ ಆಸ್ಪತ್ರೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 24x7 ಅವಧಿಯಲ್ಲಿ ತಜ್ಞ ವೈದ್ಯರು ಕರ್ತವ್ಯದಲ್ಲಿ ಇರುವಂತೆ ನೋಡಿಕೊಳ್ಳಬೇಕು. ವೈದ್ಯರಿಗೆ ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ನೀಡುವಷ್ಟೇ ವೇತನ ನೀಡಿ ಪ್ರೋತ್ಸಾಹಿಸಬೇಕು.  ।ಡಾ.ಎಸ್. ಶ್ರೀನಿವಾಸ್ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ‘ಮಾನವ ಸಂಪನ್ಮೂಲ ಅಗತ್ಯ’ ನಗರದ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಗುಣಮಟ್ಟದ ಸೇವೆ ನೀಡಲು ಅಗತ್ಯ ಮಾನವಸಂಪನ್ಮೂಲ ಒದಗಿಸಬೇಕು. ಬಹುತೇಕ ಆಸ್ಪತ್ರೆಗಳು ತಜ್ಞರ ಹಾಗೂ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ವೈದ್ಯಕೀಯ ಸಂಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಅರ್ಹತೆ ಇದ್ದವರಿಗೆ ಅಧಿಕಾರ ನೀಡಬೇಕು. ನಿರ್ದೇಶಕರು ಆಸ್ಪತ್ರೆಗಳ ಹವಾನಿಯಂತ್ರಿತ ಕೊಠಡಿಗಳಿಂದ ಹೊರಬಂದು ರೋಗಿಗಳ ಬೇಕು ಬೇಡಗಳನ್ನು ಆಲಿಸಿ ವ್ಯವಸ್ಥೆ ಸುಧಾರಿಸಬೇಕು. ಆಸ್ಪತ್ರೆಗಳ ಎಲ್ಲ ಪ್ರದೇಶಗಳನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು.  ।ಡಾ.ಸಿ. ರಾಮಚಂದ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿಕಟಪೂರ್ವ ನಿರ್ದೇಶಕ

ಸರ್ಕಾರಿ ವೈದ್ಯಕೀಯ ವ್ಯವಸ್ಥೆ ಸುಧಾರಣೆಗೆ ತಜ್ಞರ ಸಲಹೆ 

  • ಖಾಸಗಿ ಆಸ್ಪತ್ರೆಗಳಂತೆ ವೈದ್ಯರಿಗೆ ಸೂಕ್ತ ವೇತನ ನೀಡಬೇಕು

  • ಕೆಲಸದ ಅವಧಿ ಹಾಗೂ ನಂತರ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿನ ಸೇವೆಗೆ ಕಡಿವಾಣ ಹಾಕಬೇಕು

  • ಆಸ್ಪತ್ರೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣ ಮತ್ತು ಸಿಬ್ಬಂದಿ‌ ಒದಗಿಸಬೇಕು.

  • ಉಪಕರಣಗಳ ನಿರ್ವಹಣೆ ಬಗ್ಗೆ ಸೂಕ್ತ ತರಬೇತಿ ನೀಡಬೇಕು

  • ಹೊಸ ಆಸ್ಪತ್ರೆ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕಿಂತ ಇರುವ ಆಸ್ಪತ್ರೆಗಳ ಬಲವರ್ಧನೆಗೆ ಆದ್ಯತೆ ನೀಡಬೇಕು

  • ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು

  • ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು

  • ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಸೇವೆಗೆ ನಿರಾಕರಿಸಿದಲ್ಲಿ ಕಾನೂನು ಅಡಿ ಕಠಿಣ ಕ್ರಮ ಕೈಗೊಳ್ಳಬೇಕು

  • ಕಾರ್ಪೋರೆಟ್ ಆಸ್ಪತ್ರೆಗಳ ಲಾಬಿಗೆ ಮಣಿಯಬಾರದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT