ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾಸಕೋಶ ಕ್ಯಾನ್ಸರ್: ಧೂಮಪಾನಿಗಳಿಗೆ ಅಪಾಯ: ಎಚ್ಚರಿಕೆ ನೀಡಿದ ವೈದ್ಯಕೀಯ ತಜ್ಞರು

Last Updated 29 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾದವರಲ್ಲಿ ಶೇ 85ರಷ್ಟು ಮಂದಿ ಕಾಯಿಲೆಯು ತೀವ್ರ ಸ್ವರೂ‍ಪ ಪಡೆದ ಬಳಿಕ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದರಿಂದಾಗಿ ಕೆಲವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದರು.

ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ನ್ಯೂಬರ್ಗ್ ಡಯಾಗ್ನಾಸ್ಟಿಕ್ಸ್ ಶ್ವಾಸಕೋಶ ಕ್ಯಾನ್ಸರ್ ಪತ್ತೆ ಕುರಿತು ಆನ್‌ಲೈನ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ವೈದ್ಯರು ಧೂಮಪಾನದಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಸಿದರು.

ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಜಗನ್ನಾಥ ದೀಕ್ಷಿತ್, ‘ಶ್ವಾಸಕೋಶದ ಕ್ಯಾನ್ಸರ್ ಪುರುಷರನ್ನು ಹೆಚ್ಚಾಗಿ ಕಾಡುತ್ತಿದ್ದು, ಇದಕ್ಕೆ ಧೂಮಪಾನವೇ ಪ್ರಮುಖ ಕಾರಣ. ಇದು ಬಹುತೇಕರಲ್ಲಿ ತಡವಾಗಿ ಪತ್ತೆಯಾಗುತ್ತಿರುವುದರಿಂದ ಕೆಲವರ ಜೀವಕ್ಕೆ ಅಪಾಯವಾಗುತ್ತಿದೆ. ಶೇ 15ರಷ್ಟು ಮಂದಿಯಲ್ಲಿ ಮಾತ್ರ ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಲು ಸಾಧ್ಯವಾಗುತ್ತಿದೆ. ಶ್ವಾಸಕೋಶ ಕ್ಯಾನ್ಸರ್‌ಗೆ ಒಳಗಾದವರಲ್ಲಿ ಶೇ 70ರಷ್ಟು ಮಂದಿ ಧೂಮಪಾನಿಗಳಾಗಿರುತ್ತಾರೆ. ಶೇ 20ರಿಂದ ಶೇ 30ರಷ್ಟು ಮಂದಿ ಪರೋಕ್ಷ ಧೂಮಪಾನ, ವಾಯುಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಂದ ಈ ಮಾದರಿಯ ಕ್ಯಾನ್ಸರ್‌ಗೆ ಒಳಪಡುತ್ತಿದ್ದಾರೆ’ ಎಂದು ತಿಳಿಸಿದರು.

ನಿರ್ಲಕ್ಷ್ಯದಿಂದ ಅಪಾಯ: ಕುಮಾರನ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಎಸ್. ವಿಶ್ವನಾಥ್, ‘ಶೇ 40ರಷ್ಟು ಧೂಮಪಾನಿಗಳು ಚೀನಾ, ಭಾರತ ಮತ್ತು ಇಂಡೋನೇಷ್ಯಾದಲ್ಲಿಯೇ ಇದ್ದಾರೆ. ನಿರಂತರ ಕೆಮ್ಮು, ಎದೆನೋವು, ಕೆಮ್ಮಿದಾಗ ರಕ್ತ ಹೊರಹೊಮ್ಮುವಿಕೆ, ಉಸಿರಾಟದ ಸಮಸ್ಯೆ, ನಡೆದಾಡುವಾಗ ಸಮತೋಲನ ತಪ್ಪುವಿಕೆ ಸೇರಿದಂತೆ ವಿವಿಧ ಲಕ್ಷಣಗಳು ಶ್ವಾಸಕೋಶ ಕ್ಯಾನ್ಸರ್ ಇರುವವರಿಗೆ ಕಾಣಿಸಿಕೊಳ್ಳುತ್ತವೆ. ಆದಷ್ಟು ಬೇಗ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಪಟ್ಟಲ್ಲಿ ರೋಗ ಗುರುತಿಸಿ ಚಿಕಿತ್ಸೆ ನೀಡಬಹುದು. ನಿರ್ಲಕ್ಷ್ಯ ಮಾಡಿದಲ್ಲಿ ಜೀವಕ್ಕೆ ಅಪಾಯವಾಗುತ್ತದೆ’ ಎಂದು ಹೇಳಿದರು.

‘ಶ್ವಾಸಕೋಶಕ್ಕೆ ಸಂಬಂಧಿಸಿದ ಎಲ್ಲ ಕಾಯಿಲೆಗಳಿಗೆ ಧೂಮಪಾನ ಕಾರಣ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಮಧ್ಯ ವಯಸ್ಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಮಾದರಿಯ ಕ್ಯಾನ್ಯರ್‌ ಎದುರಿಸುತ್ತಿದ್ದಾರೆ. ವ್ಯಕ್ತಿಗೆ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬ ಆಧಾರದ ಮೇಲೆ ಚಿಕಿತ್ಸೆ ನಿರ್ಧರಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಾದರೆ ಶ್ವಾಸಕೋಶದ ಬಾಧಿತ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕಲಾಗುತ್ತದೆ. ಕೀಮೋಥೆರಪಿ,ರೇಡಿಯೇಷನ್ ಚಿಕಿತ್ಸೆ ಕೂಡ ಪ್ರಕರಣಗಳನ್ನು ಆಧರಿಸಿ ನೀಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT